'ಗಂಡ ಹೆಂಡತಿ' ಸಂಧಾನ: ಆರೋಪ ಮಾಡಿದ್ದು ಸಂಜನಾ, 'ಸಾರಿ' ಕೇಳಿದ್ದು ಅವರೇ.!
ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನ ಭಾರಿ ಸದ್ದು ಮಾಡಿತ್ತು. ಒಂದ್ಕಡೆ ಶ್ರುತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ಪ್ರಕರಣ ಚರ್ಚೆಯಾಗಿದ್ರೆ, ಮತ್ತೊಂದೆಡೆ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಮತ್ತು ನಿರ್ದೇಶಕ ರವಿಶ್ರೀವತ್ಸ ಪ್ರಕರಣ ಸುದ್ದಿ ಮಾಡಿತ್ತು.
'ಗಂಡ ಹೆಂಡತಿ' ಸಿನಿಮಾ ಮಾಡಬೇಕಾದರೇ, ನಿರ್ದೇಶಕರು ನನಗೆ ಮಾನಸಿಕವಾಗಿ ದೌರ್ಜನ್ಯ ನೀಡಿದ್ದರು. ಒತ್ತಾಯ ಪೂರ್ವಕವಾಗಿ ಕಿಸ್ಸಿಂಗ್ ಸೀನ್ಸ್ ಶೂಟ್ ಮಾಡಿಸಿದ್ದರು. ಹಿಂಸೆ ನೀಡಿದ್ದರು ಎಂದೆಲ್ಲಾ ಆರೋಪಿಸಿ ಬಾಂಬ್ ಸಿಡಿಸಿದ್ದರು.
ಈ ಎಲ್ಲ ಆರೋಪಗಳನ್ನ ತಳ್ಳಿಹಾಕಿದ್ದ ನಿರ್ದೇಶಕ ರವಿಶ್ರೀವತ್ಸ, ಸಂಜನಾ ಅವರಿಗೆ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದ್ದರು. ನಂತರ ರವಿಶ್ರೀವತ್ಸ ಪರವಾಗಿ ನಿರ್ದೇಶಕ ಸಂಘ ಮಧ್ಯೆ ಪ್ರವೇಶಿಸಿ ಸಂಜನಾ ಕ್ಷಮೆ ಕೇಳಬೇಕು ಎಂದು ಬೇಡಿಕೆ ಇಟ್ಟರು. ಕೊನೆಗೂ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿಯೇಬಿಟ್ಟರು. ಮುಂದೆ ಓದಿ....

ನಾನು ಹೇಳಿದ್ದು ನಿಜ
'ಮೀಟೂ ಅಭಿಯಾನದಲ್ಲಿ ನಾನು ಹೇಳಿದ್ದೆಲ್ಲಾ ಸತ್ಯ. ನನ್ನ ಆರೋಪದಲ್ಲಿ ಸುಳ್ಳಿಲ್ಲ. ಸಿನಿಮಾ ಮಾಡುವಾಗ ನನಗೆ ಚಿಕ್ಕ ವಯಸ್ಸು. ಏನೂ ಮಾಡಬೇಕು ಎಂದು ಗೊತ್ತಿರಲಿಲ್ಲ. ಮೀಟೂ ಅಭಿಯಾನ ಬಂದ ಮೇಲೆ ನನ್ನ ಅನುಭವ ಹಂಚಿಕೊಂಡಿದ್ದೆ'' ಎಂದು ಹೇಳುವ ಸಂಜನಾ, 'ನನ್ನ ಹೇಳಿಕೆಯಿಂದ ನಿರ್ದೇಶಕ ರವಿಶ್ರೀವತ್ಸಗೆ ನೋವಾಗಿದೆ. ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ.

ಹಿರಿಯರ ಮಾತಿಗೆ ಗೌರವ
ಈ ವಿವಾದಕ್ಕೆ ಸಂಬಂಧಪಟ್ಟಂತೆ ಸಂಜನಾ ನಿರ್ದೇಶಕ ಸಂಘಕ್ಕೆ ಬಂದು ಮಾತನಾಡಬೇಕು ಎಂದು ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿದ್ದರು. ಆದ್ರೆ, ವಿದೇಶದಲ್ಲಿ ನಟಿ ಸಂಜನಾ ಆ ಸಮಯದಲ್ಲಿ ಬರಲು ಸಾಧ್ಯವಾಗಿರಲಿಲ್ಲ. ಇಂದು ನಿರ್ದೇಶಕ ಸಂಘಕ್ಕೆ ಭೇಟಿ ನೀಡಿದ್ದ ಸಂಜನಾ, ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಕ್ಷಮೆ ಕೇಳಿದ್ದಾರೆ. ಕಲಾವಿದರ ಸಂಘದ ಹಿರಿಯರಾದ ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಹಾಗೂ ನಿರ್ದೇಶಕ ಸಂಘ ಅವರ ಮಾತಿಗೆ ಬೆಲೆ ಕೊಟ್ಟು ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಈ ವಿವಾದಕ್ಕೆ ಅಂತ್ಯವಾಡಿದರು.

ರವಿಶ್ರೀವತ್ಸ ಏನಂದ್ರು.?
'ಸಂಜನಾ ಅವರು ನನ್ನನ್ನು ಕ್ಷಮೆ ಕೇಳಿದ್ದಾರೆ. ನಾನು ಗೆದ್ದಿದ್ದೇನೆ. ಇನ್ನು ಈ ಬಗ್ಗೆ ನಾನು ಮಾತನಾಡುವುದಿಲ್ಲ'' ಎಂದು ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ. ಅಲ್ಲಿಗೆ ಸಂಜನಾ ಕ್ಷಮೆಯಿಂದ ನಿರ್ದೇಶಕರು ಸಮಾಧಾನಗೊಂಡಿದ್ದಾರೆ.

'ಗಂಡ-ಹೆಂಡತಿ' ವಿವಾದ ಅಂತ್ಯ
ಇನ್ನು ಆರೋಪ ಮಾಡಿದಾಗ, ಅವರು ಹಾಗೆ, ಅವರು ಹೀಗೆ ಎಂದೆಲ್ಲಾ ಹೇಳಿದ್ದ ಸಂಜನಾ, ಕ್ಷಮೆ ಕೇಳಿಬಿಟ್ಟರಲ್ಲ. ಹಾಗಾದ್ರೆ, ಅವರ ಆರೋಪದಲ್ಲಿ ಸತ್ಯವಿರಲಿಲ್ವಾ.? ಹಿರಿಯರ ಮಾತಿಗೆ ಬೆಲೆ ಕೊಟ್ಟು ಕ್ಷಮೆ ಅಂತಿದ್ದಾರೆ. ಬಟ್, ಆತ್ಮಗೌರವಕ್ಕಿಂತ ಹಿರಿಯರ ಮಾತು ದೊಡ್ಡದಾಯಿತಾ.? ಎಂಬ ಅನುಮಾನಗಳು ಈಗ ಕಾಡುತ್ತಿದೆ.


Click it and Unblock the Notifications











