'ಬಾಕ್ಸರ್' ಆದ ಸಂಜನಾಗೆ ಅರುಣ್ ವಿಜಯ್ ಸಾಥ್
ನಟಿ ಸಂಜನಾ ಗಲ್ರಾನಿ ಈಗ ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಇತ್ತು. ಆದ್ರೆ ಸಂಜನಾ ಕಾಲಿವುಡ್ ಕಡೆ ಮುಖ ಮಾಡಿ ನಿಂತಿದ್ದಾರೆ. ಹೌದು, ಸಂಜನಾ ಈಗ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಕಾಲಿವುಡ್ ನಲ್ಲಿ ಚೊಚ್ಚಲ ಬಾರಿಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ ಸಂಜನಾ.
ಅಂದ್ಹಾಗೆ ಸಂಜನಾ 'ಬಾಕ್ಸರ್' ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅಂದ್ರೆ ಸಂಜನಾ ಅಭಿನಯದ ಚಿತ್ರಕ್ಕೆ 'ಬಾಕ್ಸರ್' ಎಂದು ಟೈಟಲ್ ಇಡಲಾಗಿದೆ. ಮೊದಲ ಸಿನಿಮಾದಲ್ಲೆ ಪವರ್ ಫುಲ್ ಪಾತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿರುವ ಸಂಜನಾ ಪಾತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.
ವಿಶೇಷ ಅಂದ್ರೆ ಸಂಜನಾಗೆ ಜೋಡಿಯಾಗಿ ಖ್ಯಾತ ಖಳ ನಟ ಅರುಣ್ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ 'ಚಕ್ರವ್ಯೂಹ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದ ಅರುಣ್ ವಿಜಯ್ ಈಗ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಪಾತ್ರಕ್ಕಾಗಿ ಅರುಣ್ ದೇಹವನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ.

'ಬಾಕ್ಸರ್' ಚಿತ್ರಕ್ಕೆ ವಿವೇಕ್ ಕಣ್ಣನ್ ನಿರ್ದೇಶನ ಮಾಡುತ್ತಿದ್ದಾರೆ. ಬಾರಿ ದೊಡ್ಡ ಮೊತ್ತದಲ್ಲಿ 'ಬಾಕ್ಸರ್' ಚಿತ್ರ ಮೂಡಿ ಬರುತ್ತಿದೆಯಂತೆ. ಸಂಜನಾ ಅಭಿನಯದ ಎಲ್ಲಾ ಚಿತ್ರಗಳಿಗಿಂತ ಬಾಕ್ಸರ್ ಪಾತ್ರ ತುಂಬ ವಿಭಿನ್ನವಾಗಿರಲಿದೆಯಂತೆ. ಚಿತ್ರಕ್ಕಾಗಿ ಈಗಾಗಲೆ ಬಾಕ್ಸಿಂಗ್ ತರಬೇತಿ ಕೂಡ ಶುರು ಮಾಡಿದ್ದಾರಂತೆ.
ಸಂಜನಾ ಈಗಾಗಲೆ ತಮಿಳಿನ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಐವರ್' ಎನ್ನುವ ವೆಬ್ ಸರಣಿ ಮೂಲಕ ತಮಿಳಿಗೆ ಕಾಲಿಟ್ಟಿದ್ದರು. ಆದ್ರೆ 'ಬಾಕ್ಸರ್' ಮೂಲಕ ಪೂರ್ಣ ಪ್ರಮಾಣದ ತಮಿಳು ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.


Click it and Unblock the Notifications











