ಕನ್ನಡ ಕಲಾರಸಿಕರೇ ದಯವಿಟ್ಟು ಗಮನಿಸಿ, ಇಂದು ಬಿಡುಗಡೆಯಾಗುತ್ತಿಲ್ಲ ಸಂಜು ವೆಡ್ಸ್ ಗೀತಾ 2..!
ಸಿನಿಮಾ ನಿರ್ಮಾಣ ಮಾಡುವುದು ಕಷ್ಟ ಅಲ್ಲ, ಪ್ರದರ್ಶನ ಸುಲಭ ಅಲ್ಲ.. ಸರಿಸುಮಾರು 2017ರಲ್ಲಿ ಬೆಂಗಳೂರು ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಪ್ರಾದೇಶಿಕ ಭಾಷೆಯ ಅನೇಕ ನಿರ್ದೇಶಕರು ಈ ಮಾತನ್ನು ಹೇಳಿದ್ದರು. ಪ್ರಾದೇಶಿಕ ಭಾಷೆಯ ಎದುರು ಇರುವ ಸವಾಲಿನ ಬಗ್ಗೆ ಮಾತನಾಡಿದ್ದರು. ಅವರೆಲ್ಲ ಆಡಿದ್ದ ಮಾತು ಅಂದು ನಿಜವಾಗಿದೆ. ಇಂದು ಕೂಡ ಆ ಮಾತು ಪ್ರಸ್ತುತವಾಗಿದೆ. ಇದಕ್ಕೆ ಸಂಜು ವೆಡ್ಸ್ ಗೀತಾ 2 ಚಿತ್ರದ ಬಿಡುಗಡೆ ಮತ್ತು ಸುತ್ತ ಇರುವ ಗೊಂದಲ ಮತ್ತೊಂದು ಉದಾಹರಣೆ.
ಹೌದು, ಅಸಲಿಗೆ ಸಂಜು ವೆಡ್ಸ್ ಗೀತಾ 2 ಚಿತ್ರ ಈ ಶುಕ್ರವಾರ ಅಂದರೆ ನಾಳೆ ರಾಜ್ಯದೆಲ್ಲೆಡೆ ತೆರೆಗೆ ಬರಬೇಕಿತ್ತು. ಅದಕ್ಕೆ ಬೇಕಿದ್ದ ಪ್ರಚಾರವನ್ನು ಕೂಡ ಚಿತ್ರತಂಡ ಮಾಡಿತ್ತು. ಆದರೆ ಈಗ ಈ ಬಿಡುಗಡೆಯ ಮಾರ್ಗದಲ್ಲಿ ಬದಲಾವಣೆ ಆಗಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಹೀಗೆಂದು ಖುದ್ದು ಚಿತ್ರತಂಡವೇ ಸ್ಪಷ್ಟ ಪಡಿಸಿದೆ. ಕ್ಷಮೆ ಇರಲಿ ಎಂದು ಹೊಸ ಜಾಹೀರಾತನ್ನು ಕೂಡ ಪ್ರಕಟಿಸಿದೆ.

ಸಹಜವಾಗಿ ಈ ಸುದ್ದಿಯನ್ನು ಕೇಳಿ ಸಂಜು ಮತ್ತು ಗೀತಾನ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ನೋಡಲು ಕಾಯುತ್ತಿದ್ದ ಅನೇಕರಿಗೆ ನಿರಾಸೆಯಾಗಿದೆ. ಯಾಕೆ ಹೀಗೆ ? ಕೊನೆ ಕ್ಷಣದಲ್ಲಿ ಅಂತದ್ದೇನಾಯ್ತು ? ಎನ್ನುವ ಚರ್ಚೆ ಕೂಡ ಶುರುವಾಗಿದೆ. ಇದಕ್ಕೆ ನಿಖರವಾದ ಉತ್ತರ ಇಲ್ಲವಾದರೂ ಹಣಕಾಸಿನ ಸಮಸ್ಯೆ ಮತ್ತು ಚಿತ್ರತಂಡದಲ್ಲಿನ ಭಿನ್ನಾಭಿಪ್ರಾಯ, ಅಸಮಾಧಾನದಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನುವ ಮಾತು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಆ ಪ್ರಕಾರ ನೋಡುವುದಾದರೆ ಹೈದ್ರಾಬಾದ್ ಮೂಲದ ನಿರ್ಮಾಪಕ ರಾಮ್‌ರಾವ್ ಚಿತ್ರದ ಬಿಡುಗಡೆಗೆ ಚಕಾರವೆತ್ತಿದ್ದು ಚಿತ್ರದ ಬಿಡುಗಡೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದಕ್ಕೆ ಹಣನೇ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆಯಾದರೂ ಚಿತ್ರದ ನಿರ್ದೇಶಕ ನಾಗಶೇಖರ್ ಆಗಲಿ ನಾಯಕ ಶ್ರೀನಗರ ಕಿಟ್ಟಿಯಾಗಲಿ ಅಥವಾ ನಾಯಕಿ ರಚಿತಾ ರಾಮ್ ಆಗಲಿ ಈ ವಿಚಾರದ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹೀಗಾಗಿ ಸಮಸ್ಯೆ ನಿಜಕ್ಕೂ ಆಗಿದ್ದು ಎಲ್ಲಿ ಎನ್ನುವ ಗೊಂದಲ ಇನ್ನು ಹಲವರನ್ನು ಕಾಡುತ್ತಿದೆ.
ಸದ್ಯ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿರುವ ನಾಗಪ್ಪ-ಕಿಟ್ಟಪ್ಪ ಮತ್ತು ಸಂಗಡಿಗರು ಚಿತ್ರದ ಹೊಸ ಬಿಡುಗಡೆಯ ದಿನವನ್ನು ಶೀಘ್ರದಲ್ಲಿಯೇ ತಿಳಿಸುವುದಾಗಿ ಹೇಳಿದ್ದಾರೆ. ಗೆದ್ದೇ ಗೆಲ್ಲುವ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಚಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರ ಇಂದು ಬಿಡುಗಡೆಯಾಗಬೇಕಿದ್ದ ಹಿನ್ನೆಲೆ ನಿರ್ಮಾಪಕರು ಚಿತ್ರಕ್ಕೆ ಬೇಕಿದ್ದ ಅಗತ್ಯ ಪ್ರಚಾರವನ್ನು ಮಾಡಿದ್ದರು. ದುಡ್ಡು ಕೂಡ ಸುರಿದಿದ್ದರು. ಅದೆಲ್ಲವೂ ಈಗ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದೆ.
ವಿ ಶ್ರೀಧರ್ ಸಂಭ್ರಮ್ ಚಿತ್ರದ ಹಾಡುಗಳನ್ನು ಸಂಯೋಜಿಸಿದ್ದಾರೆ.ಚಿತ್ರದಲ್ಲಿನ ಐದು ಹಾಡುಗಳನ್ನ ಸೋನು ನಿಗಂ, ಶ್ರೇಯಾ ಘೋಷಾಲ್, ಸಂಗೀತಾ ರವೀಂದ್ರನಾಥ್, ಮಂಗ್ಲಿ ಹಾಡಿದ್ದಾರೆ. ಇನ್ನೂ ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರದಲ್ಲಿದ್ದಾರೆ. ಸೆನ್ಸಾರ್ ಅಂಗಳದಲ್ಲಿ ಚಿತ್ರ ಯು ಸರ್ಟಿಫಿಕೆಟ್ ಜೊತೆ ತೇರ್ಗಡೆಯಾಗಿದೆ.
ಒಟ್ನಲ್ಲಿ ಸದ್ಯ ರೇಶ್ಮೆ ಬೆಳೆಗಾರರ ಕಷ್ಟ ನಷ್ಟ ಜೀವನ ಮತ್ತು ನಾಯಕ-ನಾಯಕಿಯ ನಡುವೆ ಅರಳುವ ಪ್ರೇಮಕಥೆಯನ್ನೊಂದಿರುವ ಸಂಜು ವೆಡ್ಸ್ ಗೀತಾ 2 ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲಾಗಿದೆ. ಇಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಈಗ ಯಾವಾಗ ಬಿಡುಗಡೆಯಾಗುತ್ತೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಬಿಡುಗಡೆಯನ್ನು ಮುಂದೂಡಿದ್ದರ ಕುರಿತು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಎಲ್ಲದಕ್ಕೂ ಉತ್ತರ ನಾಗಶೇಖರ್ ಅವರೇ ನೀಡಬೇಕು.


Click it and Unblock the Notifications











