ಸಂಕ್ರಾಂತಿಗೆ ಕನ್ನಡದ ಎರಡು ಚಿತ್ರಗಳು ರಿಲೀಸ್; ಪರಭಾಷಾ ಚಿತ್ರಗಳಿಗೆ ಸೆಡ್ಡು
ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡೋದು ಹೊಸದೇನು ಅಲ್ಲ. ಹಬ್ಬ ಆಚರಿಸಿ ಜನ ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡಲು ಬರ್ತಾರೆ ಎನ್ನುವ ಲೆಕ್ಕಾಚಾರ ಇದೆ. ಅದೇ ಕಾರಣಕ್ಕೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹಬ್ಬದ ವೀಕೆಂಡ್‌ನಲ್ಲಿ ತೆರೆಗೆ ತರುವ ಪ್ರಯತ್ನ ಹೆಚ್ಚು.
ಒಟ್ಟೊಟ್ಟಿಗೆ ದೊಡ್ಡ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದರೆ ಬಾಕ್ಸಾಫೀಸ್ ಕ್ಲ್ಯಾಶ್ ಆಗುತ್ತದೆ ಎನ್ನುವ ವಾದವೂ ಇದೆ. ಆದರೆ ಹಬ್ಬದ ಸಂಭ್ರಮದಲ್ಲಿ ಜನ ಬಿಡುವಾಗಿ ಇರುತ್ತಾರೆ. ಹಾಗಾಗಿ ಒಂದಲ್ಲ ಎರಡು ಸಿನಿಮಾ ಬಂದರೂ ನೋಡುತ್ತಾರೆ. ಯಾವುದೇ ಕ್ಲ್ಯಾಶ್ ಆಗಲ್ಲ, ಎನ್ನುವ ಆಲೋಚನೆ ಕೆಲವರದ್ದು.

ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ತೆಲುಗು, ತಮಿಳಿನ ದೊಡ್ಡ ದೊಡ್ಡ ಚಿತ್ರಗಳು ತೆರೆಗಪ್ಪಳಿಸುತ್ತವೆ. ಕನ್ನಡ ಸಿನಿಮಾಗಳು ಮಾತ್ರ ಸಂಕ್ರಾಂತಿ ರೇಸ್‌ನಿಂದ ಹಿಂದೆಯೇ ಉಳಿಯುತ್ತದೆ. ಈ ಬಾರಿ ಸುಗ್ಗಿ ಹಬ್ಬಕ್ಕೆ ತೆಲುಗಿನ 'ಗೇಮ್‌ಚೇಂಜರ್', 'ಡಾಕು ಮಹಾರಾಜ್' ಹಾಗೂ ತಮಿಳಿನ 'ವಿದಾಮುಯರ್ಚಿ' ಸೇರಿದಂತೆ ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರ್ತಿವೆ. ಕನ್ನಡದ 2 ಸಿನಿಮಾಗಳು ಈ ಲಿಸ್ಟ್ ಸೇರ್ತಿದೆ.
ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲು ಕನ್ನಡ ಫಿಲ್ಮ್ ಮೇಕರ್ಸ್ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಈ ಬಾರಿ ಶರಣ್ ನಟನೆಯ 'ಛೂ ಮಂತರ್' ಹಾಗೂ ಶ್ರೀನಗರ ಕಿಟ್ಟಿ- ರಚಿತಾ ರಾಮ್ ನಟನೆಯ 'ಸಂಜು ವೆಡ್ಸ್ ಗೀತಾ-2' ಚಿತ್ರಗಳು ಸುಗ್ಗಿ ಸಂಭ್ರಮದಲ್ಲಿ ಪ್ರೇಕ್ಷಕರ ಮುಂದೆ ಬರ್ತಿವೆ.

ಕನ್ನಡ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರಲ್ಲ ಎನ್ನುವ ಆರೋಪ ಇದೆ. ಆದರೆ ಇತ್ತೀಚೆಗೆ ಕೆಲ ಚಿತ್ರಗಳು ಬಾಕ್ಸಾಫೀಸ್ ಶೇಕ್ ಮಾಡಿದೆ. 'ಭೀಮ', 'ಕೃಷ್ಣಂ ಪ್ರಣಯ ಸಖಿ', 'ಬಘೀರ' ಹಾಗೂ 'ಭೈರತಿ ರಣಗಲ್' ಚಿತ್ರಗಳು ಹಿಟ್ ಆಗಿದೆ. ಇದು ಸಹಜವಾಗಿಯೇ ಭರವಸೆ ಮೂಡಿಸಿದೆ. ಇನ್ನು ವರ್ಷದ ಕೊನೆಗೆ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಹಾಗೂ ಸುದೀಪ್ ಅಭಿನಯದ 'ಮ್ಯಾಕ್ಸ್' ಚಿತ್ರಗಳು ಬಾಕ್ಸಾಫೀಸ್ ಅಖಾಡಕ್ಕೆ ಇಳಿಯುತ್ತಿವೆ.
'ಸಂಜು ವೆಡ್ಸ್ ಗೀತಾ-2' ಹಾಗೂ 'ಛೂ ಮಂತರ್' ಚಿತ್ರಗಳು ಹೊಸ ವರ್ಷದಲ್ಲಿ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿವೆ. ನಟ ಶರಣ್ ಮಾತನಾಡಿ ಸಂಕ್ರಾಂತಿ ಕನ್ನಡ ಸಿನಿಮಾ ಬರ್ತಿದೆ. ಬೇರೆ ಭಾಷೆಯ ದೊಡ್ಡ ಸಿನಿಮಾಗಳ ಎದುರು ಕನ್ನಡ ಸಿನಿಮಾಗಳು ಚದುರಿ ಹೋಗುತ್ತದೆ ಎನ್ನುವ ಆತಂಕ ಇರುತ್ತಿತ್ತು. ಆದರೆ ಬಹಳ ದಿನಗಳ ನಂತರ ಸಂಕ್ರಾಂತಿ ಒಂದು ಸಿನಿಮಾ ಬರ್ತಿದೆ. ಎಲ್ಲರೂ ನೋಡಿ ಎಂದು ಮನವಿ ಮಾಡಿದ್ದಾರೆ.
ನವನೀತ್ ನಿರ್ದೇಶನದ ಹಾರರ್ -ಕಾಮಿಡಿ ಸಿನಿಮಾ 'ಛೂ ಮಂತರ್'. ತರುಣ್ ಶಿವಣ್ಣ ನಿರ್ಮಾಣದ ಚಿತ್ರದಲ್ಲಿ ಶರಣ್ ಜೊತೆ ಅದಿತಿ ಪ್ರಭುದೇವ, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕರ್ ನಟಿಸಿದ್ದಾರೆ. ಈ ಚಿತ್ರದ ಹಾಡು, ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಜನವರಿ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.
ಸೂಪರ್ ಹಿಟ್ 'ಸಂಜು ವೆಡ್ಸ್ ಗೀತಾ' ಟೈಟಲ್‌ನಲ್ಲೇ ಮತ್ತೊಂದು ಸಿನಿಮಾ ಬರ್ತಿರೋದು ಗೊತ್ತೇಯಿದೆ. ಈ ಬಾರಿ ಶ್ರೀನಗರ ಕಿಟ್ಟಿ ಜೊತೆ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ನಿರ್ದೇಶಕ ನಾಗಶೇಖರ್ ಹಾಗೂ ಶ್ರೀನಗರ ಕಿಟ್ಟಿ ಈ ಸಿನಿಮಾ ಮೇಲೆ ಬಹಳ ಭರವಸೆಯಿಂದ ಇದ್ದಾರೆ. ಒಟ್ಟಾರೆ ಸಂಕ್ರಾಂತಿಗೆ ಕನ್ನಡ ಸಿನಿಮಾಗಳು ಬರುತ್ತಿರುವುದು ಸಿನಿರಸಿಕರ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











