Sanju Weds Geetha 2: ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ತನ್ನ ಬಾಸ್ ಗೆ ಅರ್ಪಿಸಿದ ನಾಗಶೇಖರ್
ಭಾರತ ಚಿತ್ರರಂಗಗಳ್ಲೀಗ ಸೀಕ್ವೆಲ್ ಹವಾ ಜೋರಾಗಿದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗಗಳಲ್ಲಿ ಹಲವಾರು ಹಿಟ್ ಚಿತ್ರಗಳ ಸೀಕ್ವೆಲ್ ಚಿತ್ರಗಳು ಬಿಡುಗಡೆಯಾಗಿವೆ ಹಾಗೂ ಘೋಷಣೆಗೊಂಡಿವೆ. ಇನ್ನು ಚಂದನವನ ಸಹ ಇದೇ ಹಾದಿಯಲ್ಲಿ ಸಾಗಿದೆ.
ಈ ಹಿಂದೆ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ ಹಲವು ಕನ್ನಡ ಚಿತ್ರಗಳ ಮುಂದುವರಿದ ಭಾಗವನ್ನು ನಿರ್ದೇಶಿಸಲು ನಿರ್ದೇಶಕರುಗಳು ಮುಂದಾಗಿದ್ದು, ಈಗಾಗಲೇ ಹಲವು ಸೀಕ್ವೆಲ್ ಚಿತ್ರಗಳು ಘೋಷಣೆಗೊಂಡಿವೆ.

ಈ ಸಾಲಿಗೆ ಇದೀಗ 2011ರಲ್ಲಿ ಬಿಡುಗಡೆಗೊಂಡಿದ್ದ ಸೂಪರ್ ಬ್ಲಾಕ್ ಬಸ್ಟರ್ ಚಿತ್ರ ಸಂಜು ವೆಡ್ಸ್ ಗೀತಾ ಸಹ ಸೇರ್ಪಡೆಗೊಂಡಿದೆ. ಹೌದು, ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್ ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ನಿರ್ದೇಶಕ ನಾಗಶೇಖರ್ ಘೋಷಿಸಿದ್ದಾರೆ.
ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಾಯಕ ಹಾಗೂ ನಾಯಕಿಯಾಗಿ ಮಿಂಚಿದ್ದ ಸಂಜು ವೆಡ್ಸ್ ಗೀತಾ ದುರಂತ ಪ್ರೇಮಕಥೆಯಾಗಿದ್ದು ಇಂದಿಗೂ ಸಹ ಸಿನಿ ರಸಿಕರ ಫೇವರಿಟ್ ಚಿತ್ರಗಳ ಪಟ್ಟಿಯಲ್ಲಿ ಒಂದಾಗಿದೆ. ಈ ಚಿತ್ರದ ಮುಂದುವರಿದ ಭಾಗ ಯಾವಾಗ ಬರಲಿದೆ ಎಂಬ ಪ್ರಶ್ನೆ ಈ ಹಿಂದಿನಿಂದಲೂ ಸಿನಿ ರಸಿಕರಿಂದ ಕೇಳಿ ಬರುತ್ತಿತ್ತು.
ಈ ಪ್ರಶ್ನೆಗೆ ನಿರ್ದೇಶಕ ನಾಗಶೇಖರ್ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಕೋರಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಸಂಜು ವೆಡ್ಸ್ ಗೀತಾ ಸೀಕ್ವೆಲ್ ಬರುತ್ತಿದೆ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.
ಹೀಗೆ ಸಿನಿಮಾವನ್ನು ಘೋಷಿಸಿದ್ದ ನಾಗಶೇಖರ್ ಸದ್ಯ ಚಿತ್ರದ ಲಾಂಚ್ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಇದೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ರ ಸಂಜೆ 6.30ಕ್ಕೆ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಸಂಜು ವೆಡ್ಸ್ ಗೀತಾ 2 ಲಾಂಚ್ ಆಗಲಿದೆ. ಈ ಕಾರ್ಯಕ್ರಮಕ್ಕೆ ವಿಶೇಷವಾದ ಆಮಂತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಆಮಂತ್ರಣದಲ್ಲಿ ತಮ್ಮ ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ನಿರ್ದೇಶಕ ನಾಗಶೇಖರ್ ತಮ್ಮ ಬಾಸ್ ಡಾ ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ನಾಯಕಿಯಾಗಿ ರಚಿತಾ:
ಪೋಸ್ಟರ್‌ನಲ್ಲಿ ಎಲ್ಲಿಯೂ ಸಹ ನಾಯಕಿ ಯಾರು ಎಂಬುದನ್ನು ನಿರ್ದೇಶಕರು ಬಿಟ್ಟುಕೊಟ್ಟಿರಲಿಲ್ಲ. ಚಿತ್ರದ ಪೋಸ್ಟರ್‌ನ ಎಡಭಾಗದ ಮೇಲೆ 'ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅರ್ಪಿಸುವ' ಎಂಬ ಬರಹವನ್ನು ಕಂಡಿದ್ದ ಹಲವಾರು ಸಿನಿ ರಸಿಕರು ಹಾಗಾದರೆ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸುವುದು ಅನುಮಾನ ಬಿಡಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಅದರಂತ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಆಯ್ಕೆಯಾಗಿದ್ದಾರೆ. ಚಿತ್ರತಂಡ ಸಹ ಈ ಕುರಿತು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಚಿತ್ರದ ಪೋಸ್ಟರ್ ನಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಉಲ್ಲೇಖಿಸಿದೆ.
ಸದ್ಯ ಈ ಸುದ್ದಿಯನ್ನು ಕೇಳಿರುವ ಸಿನಿ ರಸಿಕರು ಈ ಪಾತ್ರಕ್ಕೆ ರಮ್ಯಾನೇ ಸೂಕ್ತ, ರಚಿತಾ ರಾಮ್ ಹೊಂದಿಕೊಳ್ತಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಬೇಸರವನ್ನೂ ಸಹ ಹೊರಹಾಕಿದ್ದಾರೆ.


Click it and Unblock the Notifications











