20 ನಿಮಿಷದ ಫುಟೇಜ್ ಸೇರಿಸಿ 'ಸಂಜು ವೆಡ್ಸ್ ಗೀತಾ- 2' ಸಿನಿಮಾ ರೀ-ರಿಲೀಸ್
ಚಿತ್ರರಂಗದಲ್ಲಿ ಸಿನಿಮಾಗಳನ್ನು ಮರುಬಿಡುಗಡೆ ಮಾಡುವುದು ಹೊಸದೇನು ಅಲ್ಲ. ಬಹಳ ಹಿಂದಿನಿಂದಲೂ ಈ ಪ್ರಯತ್ನ ನಡೆಯುತ್ತಲೇ ಇದೆ. ಅಂತಿಮವಾಗಿ ಸಿನಿಮಾ ಗೆಲ್ಲಬೇಕು, ಸಿನಿಮಾ ಪ್ರೇಕ್ಷಕರನ್ನು ರಂಜಿಸಬೇಕು ಎನ್ನುವ ಲೆಕ್ಕಾಚಾರ ಚಿತ್ರರಂಗದಲ್ಲಿದೆ. ಹಾಗಾಗಿ ಮರಳಿ ಯತ್ನವ ಮಾಡು ಎಂದು ಸತತ ಪ್ರಯತ್ನ ನಡೆಸುತ್ತಾರೆ.
ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ- 2' ಸಿನಿಮಾ ತೆರೆಗೆ ಬಂದು ಸೋತಿತ್ತು. ಇದೀಗ ಚಿತ್ರವನ್ನು ಮರುಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಇದೇ ಕಾರಣಕ್ಕೆ ಚಿತ್ರವನ್ನು ಓಟಿಟಿಯಲ್ಲಿ ಇನ್ನು ಸ್ಟ್ರೀಮಿಂಗ್ ಮಾಡಲಿಲ್ಲ. 20 ನಿಮಿಷಗಳ ಫುಟೇಜ್ ಅನ್ನು ಹೊಸದಾಗಿ ಸೇರಿಸಿ ಸಿನಿಮಾ ತೆರೆಗೆ ತೆರುವ ಪ್ರಯತ್ನ ನಡೀತಿದೆ.

ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಟನೆಯ 'ಸಂಜು ವೆಡ್ಸ್ ಗೀತಾ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಪಾರ್ಟ್- 2ನಲ್ಲಿ ರಮ್ಯಾ ಬದಲಿಸಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದರು. 13 ವರ್ಷಗಳ ಹಿಂದೆ ಬಂದಿದ್ದ ಆ ಚಿತ್ರದ ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದ್ದೇ ಕಥೆ. ರೇಷ್ಮೆ ಬೆಳಗಾರರ ಸಂಕಷ್ಟದ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು 'ಸಂಜು ವೆಡ್ಸ್ ಗೀತಾ'-2 ಸಿನಿಮಾ ಕಟ್ಟಿಕೊಟ್ಟಿದ್ದಾರೆ.
'ಅರಮನೆ', 'ಮೈನಾ', 'ಸಂಜು ವೆಡ್ಸ್ ಗೀತಾ' ರೀತಿಯ ಭಾವನಾತ್ಮಕ ಪ್ರೇಮಕಥೆಗಳನ್ನು ಹೇಳಿ ಗೆದ್ದಿದ್ದ ನಾಗಶೇಖರ್ 'ಸಂಜು ವೆಡ್ಸ್ ಗೀತಾ'-2 ಸಿನಿಮಾ ಮಾಡಿ ಸೋತಿದ್ದರು. ಇದೇ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 17ಕ್ಕೆ ಸಿನಿಮಾ ಬಿಡುಗಡೆ ಆಗಿತ್ತು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು. ಇದೀಗ ಚಿತ್ರದ ಆತ್ಮ ಎನ್ನುವಂತಹ 20 ನಿಮಿಷಗಳ ಸನ್ನಿವೇಶಗಳನ್ನು ಸೇರಿಸಿ ಸಿನಿಮಾ ರೀ-ರಿಲೀಸ್ ಮಾಡುವ ತಯಾರಿ ನಡೀತಿದೆ.
'ಸಂಜು ವೆಡ್ಸ್ ಗೀತಾ'-2 ಸಿನಿಮಾ ಬಿಡುಗಡೆ ಸಮಯದಲ್ಲಿ ಕಾನೂನು ತೊಡಕು ಎದುರಾಗಿತ್ತು. ನಾಗಶೇಖರ್ ನಿರ್ದೇಶನದ ತೆಲುಗು ಸಿನಿಮಾವೊಂದರ ಫೈನಾನ್ಶಿಯರ್ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಹಾಗಾಗಿ ಹೈದರಾಬಾದ್ ಸಿಟಿ ಸಿವಿಲ್ ನ್ಯಾಯಾಲಯ ತಡೆ ಆದೇಶ ನೀಡಿತ್ತು. ಅಂತಹ ಸಮಯದಲ್ಲಿ 20 ನಿಮಿಷಗಳ ದೃಶ್ಯಗಳನ್ನು ಸೇರಿಸಿ ಸಿನಿಮಾ ಬಿಡುಗಡೆ ಮಾಡಲು ತೊಡಕು ಉಂಟಾಗಿತ್ತು. ಅದೇ ಕಾರಣಕ್ಕೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪಿರಲಿಲ್ಲ. ಹಾಗಾಗಿ ಇದೀಗ ಆ ದೃಶ್ಯಗಳನ್ನು ಸೇರಿಸಿ ಸಿನಿಮಾ ಬಿಡುಗಡೆ ಮಾಡ್ತೀವಿ ಎಂದು 'ಸಿನಿಮಾ ಎಕ್ಸ್‌ಪ್ರೆಸ್'ಗೆ ನಾಗಶೇಖರ್ ಮಾಹಿತಿ ನೀಡಿದ್ದಾರೆ.
ಚೇತನ್ ಚಂದ್ರ ಹಾಗೂ ರಾಗಿಣಿ ದ್ವಿವೇದಿ 'ಸಂಜು ವೆಡ್ಸ್ ಗೀತಾ'-2 ಚಿತ್ರದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ರಾಗಿಣಿ ಹಾಡು ಬಿಟ್ಟರೆ ಸನ್ನಿವೇಶಗಳು ಇರಲಿಲ್ಲ. ಇದೀಗ ಅದನ್ನು ಸೇರಿಸಲಾಗಿದೆ. ಮೊದಲು 2 ಗಂಟೆ 2 ನಿಮಿಷ ಕಾಲಾವಧಿ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ 2 ಗಂಟೆ 22 ನಿಮಿಷಗಳ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ನಡೀತಿದೆ.
'ಸಂಜು ವೆಡ್ಸ್ ಗೀತಾ'-2 ಚಿತ್ರದ ಕಥೆ ಏನು ಎನ್ನುವುದನ್ನು ನೋಡುವುದಾದರೆ ರೇಷ್ಮೆ ಕೈಮಗ್ಗ ವ್ಯಾಪಾರಿ ಸಂಜು ಹಾಗೂ ಉದ್ಯಮಿ ಮಗಳು ಗೀತಾ ಪ್ರೇಮಕಥೆ ಇಲ್ಲಿದೆ. ಸಂಜು ಕೊಟ್ಟ ಸೀರೆ ಉಟ್ಟು 'ಮಿಸ್ ಕರ್ನಾಟಕ' ಸ್ಪರ್ಧೆಯಲ್ಲಿ ಗೀತಾ ಕಿರೀಟ ಮುಡಿಗೇರಿಸಿಕೊಳ್ಳುತ್ತಾಳೆ. ಮುಂದೆ ಸಂಜು ಹಾಗೂ ಗೀತಾ ಸ್ನೇಹ ಪ್ರೀತಿಗೆ ತಿರುಗುತ್ತದೆ. ಇಬ್ಬರ ಪ್ರೀತಿ ಗೆಲ್ಲುತ್ತಾ? ಎನ್ನುವುದೇ ಸಿನಿಮಾ ಕಥೆ.
ಚಲವಾದಿ ಕುಮಾರ್ ನಿರ್ಮಾಣದ 'ಸಂಜು ವೆಡ್ಸ್ ಗೀತಾ'-2 ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು. ಶ್ರೀಧರ್ ವಿ. ಸಂಭ್ರಮ್ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ಶೀಘ್ರದಲ್ಲೇ ಸಿನಿಮಾ ಮರುಬಿಡುಗಡೆ ಮಾಡುವ ತಯಾರಿ ನಡೀತಿದೆ.


Click it and Unblock the Notifications











