ಸ್ಯಾಂಡಲ್‌ವುಡ್ ಸಂಕ್ರಾಂತಿ ಡಲ್ಲೋ ಡಲ್ಲು: ಸ್ಟಾರ್‌ಗಳ ಸುಳಿವೇ ಇಲ್ಲ!
ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಎಳ್ಳು ಬೆಲ್ಲ ಹಂಚಿ, ಎತ್ತುಗಳನ್ನು ಕಿಚ್ಚು ಹಾಯಿಸಲಾಯಿತು. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಸಂಕ್ರಾಂತಿ ಕೊಂಚ ಡಲ್ಲಾಗಿತ್ತು.
ಯಶ್, ರಕ್ಷಿತಾ ಪ್ರೇಮ್, ದರ್ಶನ್ ಹಬ್ಬವನ್ನು ಜೋರಾಗಿ ಆಚರಿಸಿದ್ದಾರೆ. ಆದರೆ ಯಾವುದೇ ಸಿನಿಮಾಗಳ ಅಪ್‌ಡೇಟ್, ಹೊಸ ಪೋಸ್ಟರ್, ಟೀಸರ್ ರಿಲೀಸ್ ಇಲ್ಲದೇ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ಕಾಣೆ ಆಗಿತ್ತು. ಯಾವುದೇ ದೊಡ್ಡ ಸಿನಿಮಾ ಕೂಡ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಲಿಲ್ಲ. ಇದ್ದಿದ್ದರಲ್ಲಿ 3 ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬಂದಿತ್ತು. 'ಆರ್ಕೇಸ್ಟ್ರಾ ಮೈಸೂರು' ಸಿನಿಮಾ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿ ಬಂದರೂ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಬರ ಎದುರಿಸುವಂತಾಯಿತು.
ಸುಗ್ಗಿ ಸಂಭ್ರಮದಲ್ಲಿ ರಾಜ್ಯದ ಬಹುತೇಕ ಥಿಯೇಟರ್‌ಗಳನ್ನು ಪರಭಾಷಾ ಸಿನಿಮಾಗಳೇ ಆವರಿಸಿಕೊಂಡಿವೆ. ಇದ್ದಿದ್ದರಲ್ಲಿ ಒಂದೆರಡು ಸಿನಿಮಾಗಳ ಹೊಸ ಪೋಸ್ಟರ್‌ಗಳು ರಿಲೀಸ್ ಆಯಿತು. 'ಕ್ರಾಂತಿ', 'ಕಬ್ಜ', 'UI', 'ಮಾರ್ಟಿನ್', 'ಭೀಮ', 'ಸಪ್ತ ಸಾಗರದಾಚೆ ಎಲ್ಲೋ', 'ಹೊಯ್ಸಳ', 'ಬ್ಯಾಡ್ ಮ್ಯಾನರ್ಸ್' ಹೀಗೆ ದೊಡ್ಡ ದೊಡ್ಡ ಸಿನಿಮಾಗಳ ಅಪ್‌ಡೇಟ್ ಆಗ್ಲಿ, ಹೊಸ ಪೋಸ್ಟರ್ ಆಗ್ಲಿ ಬರಲೇಯಿಲ್ಲ.

'ಬಾನ ದಾರಿಯಲ್ಲಿ' ಸಿಕ್ಕ ಗಣಿ
ಹೊಸ ವರ್ಷಕ್ಕೂ ಕೂಡ ಈ ಬಾರಿ ಸ್ಟಾರ್ ಸಿನಿಮಾಗಳ ಅಪ್‌ಡೇಟ್, ಪೋಸ್ಟರ್ ಬಂದಿರಲಿಲ್ಲ. ನಿಜ ಹೇಳಬೇಕು ಅಂದರೆ ಕಳೆದ 15 ದಿನಗಳಿಂದ ಸ್ಯಾಂಡಲ್‌ವುಡ್ ಸೈಲೆಂಟ್ ಆಗಿದೆ. ಅಂದಹಾಗೆ ಸಂಕ್ರಾಂತಿ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಹೊಸ ಪೋಸ್ಟರ್ ಸಮೇತ ರಿಲೀಸ್ ಡೇಟ್ ಘೋಷಿಸಿದೆ ಚಿತ್ರತಂಡ. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣಿ ನಟಿಸ್ತಿರೋದ್ರಿಂದ ಸಿನಿಮಾ ಕೊಂಚಮಟ್ಟಿಗೆ ಕುತೂಹಲ ಮೂಡಿಸಿದೆ.

'ಗೌಳಿ' ಹೊಸ ಪೋಸ್ಟರ್
ಶ್ರೀನಗರ ಕಿಟ್ಟಿ ನಟನೆಯ 'ಗೌಳಿ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಸೂರ ನಿರ್ದೇಶನದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. ಉತ್ತರ ಕರ್ನಾಟಕದ ಕೆಲವೆಡೆ ಹಾಲು ಮಾರುವವರನ್ನು 'ಗೌಳಿ' ಎಂದು ಕಡೆಯುತ್ತಾರೆ. ಆ ಗೌಳಿ ಸಮುದಾಯದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ತುಂಬಾ ಎಮೋಷನಲ್ ಆಗಿರುವ ವ್ಯಕ್ತಿಯೊಬ್ಬನ ಏಳುಬೀಳಿನ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗ್ತಿದೆ. ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ವಾಮನ' ಮಾಸ್ ಪೋಸ್ಟರ್
'ಬೈಟು ಲವ್' ನಂತರ ಧನ್ವೀರ್ ಗೌಡ ನಟನೆಯ ಮತ್ತೊಂದು ಸಿನಿಮಾ 'ವಾಮನ'. ಶಂಕರ್ ರಾಮನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಒನ್ಸ್ ಅಗೇನ್ ಧನ್ವೀರ್ ಮಾಸ್ ಹೀರೊ ಆಗಿ ಅಬ್ಬರಿಸಿದ್ದಾರೆ. ಎದುರಾಳಿ ತಲೆಯನ್ನು ನೆಲಕ್ಕೆ ಗುದ್ದಿ ಜಬರ್ದಸ್ತ್ ಲುಕ್‌ನಲ್ಲಿ ವಾಮನ ಧನ್ವೀರ್ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗಿದೆ. 'ವಾಮನ' ಜೊತೆಗೆ 'ಕೈವ' ಎನ್ನುವ ಮತ್ತೊಂದು ಚಿತ್ರದಲ್ಲಿ ಧನ್ವೀರ್ ಬಣ್ಣ ಹಚ್ಚಿದ್ದಾರೆ.

'ಸ್ವಾತಿ ಮುತ್ತಿನ' ಪೋಸ್ಟರ್ ಕಥೆ
ಇನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಿಂದ ಹೊಸ ಪೋಸ್ಟರ್ ಬಂದಿದೆ. ರಾಜ್- ಸಿರಿ ಕೈ ಹಿಡಿದಿರುವ ರೊಮ್ಯಾಂಟಿಕ್ ಪೋಸ್ಟರ್ ವೈರಲ್ ಆಗಿದೆ. ಆಪಲ್ ಬಾಕ್ಸ್ ಬ್ಯಾನರ್ ಅಡಿಯಲ್ಲಿ ನಟಿ ರಮ್ಯಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ರಾಜ್ ಬಿ ಶೆಟ್ಟಿ ಅಚ್ಚರಿ ಮೂಡಿಸಿದ್ದರು. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











