Sankranti 2026: ಸುಗ್ಗಿ ಸಂಭ್ರಮ ಹೆಚ್ಚಿಸಿದ ಬಹುನಿರೀಕ್ಷಿತ ಚಿತ್ರಗಳ ಟೀಸರ್, ಸಾಂಗ್, ಪೋಸ್ಟರ್
ಎಲ್ಲೆಲ್ಲೂ ಸಂಕ್ರಾಂತಿ ಸಡಗರ ಜೋರಾಗಿದೆ. ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕನ್ನಡ ಸಿನಿಮಾ ತಾರೆಯರು ಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಸಂಕ್ರಾಂತಿಗೆ ಯಾವುದೇ ದೊಡ್ಡ ಕನ್ನಡ ಸಿನಿಮಾ ಬಿಡುಗಡೆ ಆಗಲಿಲ್ಲ. ಬದಲಿಗೆ ಬಹುನಿರೀಕ್ಷಿತ ಚಿತ್ರಗಳ ಪೋಸ್ಟರ್, ಟೀಸರ್, ಸಾಂಗ್ ರಿಲೀಸ್ ಆಗಿದೆ. ಹಬ್ಬದ ಶುಭಾಶಯ ಕೋರಿದ್ದಾರೆ.
ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗ ಸೈಲೆಂಟ್ ಆಗಿದೆ. ಸುಗ್ಗಿ ಸಂಭ್ರಮದಲ್ಲಿ ಯಾವುದೇ ಕ್ರಾಂತಿ ಆಗಲಿಲ್ಲ. ತಿಂಗಳ ಕೊನೆಗೆ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ತೆರೆಗೆ ಬರಲಿದೆ. ಝೈದ್ ಖಾನ್ ಅಭಿನಯದ 'ಕಲ್ಟ್' ಸಿನಿಮಾ ಒಟ್ಟಿಗೆ ಬರ್ತಿದೆ.

'ಟಾಕ್ಸಿಕ್' ಹಾಗೂ 'ಕೆಡಿ' ಬಿಟ್ಟರೆ ಈ ವರ್ಷ ಯಾವುದೇ ಸಿನಿಮಾ ನಿರೀಕ್ಷೆ ಹುಟ್ಟಿಸಿಲ್ಲ. 'ಮಾರ್ಕ್' ಬಳಿಕ ಸುದೀಪ್ ನಟನೆಯ ಯಾವ ಸಿನಿಮಾ ತೆರೆಗೆ ಬರುತ್ತದೆ ಎನ್ನುವ ನಿರೀಕ್ಷೆ ಮೂಡಿದೆ. ಶಿವಣ್ಣ ಮಾತ್ರ ಪ್ರತಿವರ್ಷದಂತೆ ಈ ವರ್ಷ ಕೂಡ ದರ್ಬಾರ್ ನಡೆಸಲಿದ್ದಾರೆ. ಅವರ ಮೂರ್ನಾಲ್ಕು ಚಿತ್ರಗಳು ಚಿತ್ರೀಕರಣ ಭರದಿಂದ ಸಾಗಿದೆ.
1. ಡ್ಯಾಡ್ ಟೀಸರ್
ಸಂಕ್ರಾಂತಿ ಸಂಭ್ರಮದಲ್ಲಿ ಶಿವರಾಜ್‌ಕುಮಾರ್ ನಟನೆಯ 'ಡ್ಯಾಡ್' ಚಿತ್ರದ ಸಣ್ಣ ಟೀಸರ್ ಝಲಕ್ ರಿವೀಲ್ ಆಗಿದೆ. THE SWAG OF DAD ಹೆಸರಿನಲ್ಲಿ ಶಿವಣ್ಣ ಕಾರ್ ಇಳಿದು ಸೈಲಿಶ್ ಆಗಿ ಎಂಟ್ರಿ ಕೊಡುವ ಟೀಸರ್ ಇದು. ಈ ಚಿತ್ರದಲ್ಲಿ ತಂದೆ, ಮಗಳ ಬಾಂಧವ್ಯದ ಕಥೆಯಿದೆ. ಅನಿಲ್ ಕನ್ನೆಗೆಂಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಶರ್ಮಿಳಾ ಮಾಂಡ್ರೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

2. ಪಬ್ಬಾರ್ ಝಲಕ್
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧೀರೆನ್ ರಾಮ್‌ಕುಮಾರ್ ನಟನೆಯ ಸಿನಿಮಾ 'ಪಬ್ಬಾರ್'. ಸಂಕ್ರಾಂತಿ ಸಂಭ್ರಮದಲ್ಲಿ ನಾಯಕನ ಪಾತ್ರವನ್ನು ಪರಿಚಯಿಸುವ ಸಣ್ಣ ಝಲಕ್ ಹೊರಬಿದ್ದಿದೆ. ಸಂದೀಪ್ ಸುಂಕದ್ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಧೀರೆನ್ ಎಸಿಪಿ ಆಗಿ ನಟಿಸಿರುವಂತೆ ಕಾಣ್ತಿದೆ. 4 ನಿಮಿಷದ ಟೀಸರ್ ಗಮನ ಸೆಳೆಯುವಂತಿದೆ.
3. ಲ್ಯಾಂಡ್‌ಲಾರ್ಡ್ ಪೋಸ್ಟರ್
ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ 'ಲ್ಯಾಂಡ್‌ಲಾರ್ಡ್' ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ವಿಜಯ್ ಹಾಗೂ ಪುತ್ರಿ ರಿತನ್ಯಾ ಚಿತ್ರದಲ್ಲಿ ಕೂಡ ತಂದೆ, ಮಗಳ ಪಾತ್ರಗಳಲ್ಲೇ ನಟಿಸಿರುವುದು ವಿಶೇಷ. ಹೊಸ ಪೋಸ್ಟರ್ ಸಮೇತ ಟ್ರೈಲರ್ ಬಿಡುಗಡೆ ಬಗ್ಗೆ ಮಾಹಿತಿ ಕೊಡಲಾಗಿದೆ. ಜನವರಿ 18ರಂದು ಭಾನುವಾರ ಮಧ್ಯಾಹ್ನ 12.35 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ 2 ಹಾಡುಗಳು ಹಾಗೂ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ.
4. ಹಯಗ್ರೀವ
ಧನ್ವೀರ್ ಗೌಡ ನಟನೆಯ ಸಿನಿಮಾಗಳು ತೆರೆಗೆ ಬರುವುದು ತಡವಾಗುತ್ತಲೇ ಇದೆ. ಸದ್ಯ 'ಹಯಗ್ರೀವ' ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 27ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಲಾಗಿದೆ. ಖಡಕ್ ಪೋಸ್ಟರ್ ರಿವೀಲ್ ಆಗಿದೆ. ರಘುಕುಮಾರ್ ಚಿತ್ರದ ಸಾರಥ್ಯ ವಹಿಸಿದ್ದಾರೆ.
5. 'ಪೀಕಬೂ' ನಾಯಕ
ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಮೂಲ್ಯ ನಟಿಸುತ್ತಿರುವ ಸಿನಿಮಾ 'ಪೀಕಬೂ'. ಬಹಳ ವರ್ಷಗಳ ಬಳಿಕ ಅಮೂಲ್ಯ ಮತ್ತೆ ಬಣ್ಣ ಹಚ್ಚಿದ್ದಾರೆ. ಇದೀಗ ನಾಯಕನ ಪರಿಚಯಕ್ಕೆ ವಿಶೇಷ ಟೀಸರ್ ಮಾಡಿರೋ ಪೀಕಬೂ ನಿರ್ದೇಶಕ ಸಂಕ್ರಾಂತಿ ವಿಶೇಷ ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ನಟ ಶ್ರೀರಾಮ್ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 'ಇರುವುದೆಲ್ಲವ ಬಿಟ್ಟು', 'ಗಜಾನನಾ ಅಂಡ್ ಗ್ಯಾಂಗ್', 'ಹೊಂದಿಸಿ ಬರೆಯಿರಿ' ಸೇರಿ ಕೆಲ ಚಿತ್ರಗಳಲ್ಲಿ ಅವರು ನಟಿಸಿದ್ದರು.


Click it and Unblock the Notifications











