ತಂದೆ- ಮಗ, ಮಿಡ್ಲ್‌ಕ್ಲಾಸ್ ಫ್ಯಾಮಿಲಿ; 'ಯುವ' ಸಿನಿಮಾ ಕಥೆ ಹೇಳಿದ ಸಂತೋಷ್ ಆನಂದ್‌ರಾಮ್
ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾರ್ಚ್ 29ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಹೊಸಪೇಟೆಯಲ್ಲಿ 'ಯುವ' ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಸದ್ಯ ಚಿತ್ರದ 'ಅಪ್ಪುಗೆ' ಸಾಂಗ್ ಬಿಡುಗಡೆಯಾಗಿ ಸಿನಿರಸಿಕರ ಮನಗೆದ್ದಿದೆ.
ಸಂತೋಷ್ ಆನಂದ್‌ರಾಜ್ ಅಣ್ಣಾವ್ರ ಮೊಮ್ಮಗನ ಆರಂಗೇಟ್ರಂಗೆ ಸಾಥ್ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ 3 ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿದೆ. ಟೈಟಲ್ ಸಾಂಗ್ ಹಿಟ್ ಲಿಸ್ಟ್ ಸೇರಿದೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ 'ಯುವ' ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಯುವ, ಆನಂದ್‌ರಾಮ್, ಅಜನೀಶ್ ಲೋಕನಾಥ್ ಸೇರಿದಂತೆ ಚಿತ್ರತಂಡ ಹಲವರು ಭಾಗಿ ಆಗಿದ್ದರು.

ಯುವ ರಾಜ್‌ಕುಮಾರ್ ಮೊದಲ ಚಿತ್ರವನ್ನು ಮೊದಲು ಕನ್ನಡದಲ್ಲಿ ಮಾಡಬೇಕು ಎನ್ನುವ ಕಾರಣಕ್ಕೆ ಪ್ಯಾನ್ ಇಂಡಿಯಾ ಐಡಿಯಾ ಇರಲಿಲ್ಲ ಎಂದು ಚಿತ್ರತಂಡ ಹೇಳಿದೆ. ಕರ್ನಾಟಕದಲ್ಲಿ ಸಿಗುವ ರೆಸ್ಪಾನ್ಸ್ ನೋಡಿಕೊಂಡು ಮುಂದೆ ಬೇರೆ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಇನ್ನು 'ಯುವ' ಸಿನಿಮಾ ಕಥೆಯ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸುಳಿವು ಬಿಟ್ಟುಕೊಟ್ಟಿದ್ದಾರೆ. "ಯುವ ಸಿನಿಮಾ ಕಥೆ ತಂದೆ- ಮಗನ ಪ್ರೇಮಕಥೆ ಎನ್ನಬಹುದು. ಅಂದ್ರೆ ಅಷ್ಟರಮಟ್ಟಿಗೆ ಭಿನ್ನಾಭಿಪ್ರಾಯ, ಕಷ್ಟಗಳು ಇರುತ್ತವೆ. ಅದನ್ನೆಲ್ಲಾ ಮೀರಿ ಅಷ್ಟೇ ತಂದೆ-ಮಗನ ನಡುವೆ ಬಾಂಧವ್ಯ ಇರುತ್ತದೆ"
"ಈ ಕಾಲದ ತಂದೆ-ಮಗನ ಕಥೆ ಇದು. ಮೊದಲಾರ್ಧ ಯುವ ಜನತೆಗೆ ಇಷ್ಟವಾಗುವಂತೆ ಡಿಸೈನ್ ಮಾಡಿದ್ದೀವಿ. ಟೀಸರ್ ಹಾಗೂ ಮೊದಲೆರಡು ಹಾಡುಗಳಲ್ಲಿ ಕಂಡಂತೆ. ಆದರೆ ಟ್ರೈಲರ್ ಬಿಡುಗಡೆ ಬಳಿಕ ನಿಮಗೆ ಈ ಸಿನಿಮಾದ ಒಟ್ಟಾರೆ ಚಿತ್ರಣ ಗೊತ್ತಾಗುತ್ತದೆ. ನಮ್ಮನ್ನು ಜಗತ್ತಿಗೆ ಪರಿಚಯಿಸುವುದು ತಾಯಿ. ಬದುಕಿಗೆ ಪರಿಚಯಿಸುವುದು ತಂದೆ. ಇದು ಔಟ್ ಆಫ್ ದಿ ಬಾಕ್ಸ್ ಕಥೆ ಅಲ್ಲ. ಈ ಚಿತ್ರದಲ್ಲಿ ಬರುವ ಮಾತುಗಳು ನಿಮ್ಮ ತಂದೆಯ ಜೊತೆಗೆ ನೀವು ನನ್ನ ತಂದೆ ಜೊತೆ ನಾನು ಮಾತನಾಡಿದಂತಿರುತ್ತದೆ" ಎಂದು ಸಂತೋಷ್ ಹೇಳಿದ್ದಾರೆ.
"ಒಂದು ಪಕ್ಕಾ ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಕಥೆ ಇದು. ಅಂದ್ರೆ ಮಿಡ್ಲ್‌ಕ್ಲಾಸ್ ಫ್ಯಾಮಿಲಿಯಲ್ಲಿರುವ ಸಂಬಂಧಗಳು, ತಂದೆ ಮಗನ ಕಾಳಜಿಯ ವಿಚಾರಗಳು ಚಿತ್ರದಲ್ಲಿದೆ. ಅಪ್ಪುಗೆ ಹಾಡು ಇಡೀ ಚಿತ್ರಕ್ಕೆ ದೊಡ್ಡ ತಿರುವು ಕೊಡುತ್ತದೆ" ಎಂದು ನಿರ್ದೇಶಕರು ವಿವರಿಸಿದ್ದಾರೆ.
'ಯುವ' ಪವರ್‌ಫುಲ್ ಪಾತ್ರ, ಕಾಲೇಜು ವಿದ್ಯಾರ್ಥಿಯ ಪಾತ್ರ. ಕಥೆ ಬಿಟ್ಟು ಎಲ್ಲೂ ಹೊರ ಬರುವುದಿಲ್ಲ. ದೊಡ್ಮನೆಯಿಂದ ಗಡ್ಡ, ಮೀಸೆ ಬಿಟ್ಕೊಂಡು ಬಂದಿರುವ ಮೊದಲ ಹೀರೊ ಯುವ ರಾಜ್‌ಕುಮಾರ್. ಅದು ನನಗೆ ಹೊಸದು ಅನಿಸಿತು. ಯುವ ಕಣ್ಣುಗಳಲ್ಲಿ ಇಂಟೆನ್ಸ್ ಇದೆ. ಡ್ಯಾನ್ಸ್, ಫೈಟ್ ಎಲ್ಲದರಲ್ಲೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಯುವ ಪರ್ಫಾರ್ಮನ್ಸ್ ನೋಡಿ ಅಚ್ಚರಿ ಆಯಿತು ಎಂದು ಸಂತೋಷ್ ಆನಂದ್ ರಾಮ್ ವಿವರಿಸಿದ್ದಾರೆ.

'ಯುವ' ಚಿತ್ರದಲ್ಲಿ ಸುಧಾರಾಣಿ, ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವಿದೆ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗೆ ಬರಲಿದೆ. ಸದ್ಯ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ರೀ- ರಿಲೀಸ್ ಆಗಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ತಿಂಗಳಾಂತ್ಯಕ್ಕೆ 'ಯುವ' ಚಿತ್ರವನ್ನು ದೊಡ್ಡದಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











