ಅಜ್ಜಿ ಅಂತ್ಯಕ್ರಿಯೆ ವೇಳೆ ನಡೆದ ಕೆಲ ಘಟನೆಗಳ ಬಗ್ಗೆ ಸಾನ್ವಿ ಸುದೀಪ್ ಅಸಮಾಧಾನ
ನಟ ಸುದೀಪ್ ತಾಯಿ ಸರೋಜಾ ಸಂಜೀವ್ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಕುಟುಂಬ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಸಂಜೆ ವೇಳೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರೋಜಾ ಸಂಜೀವ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿತು. ಸುದೀಪ್ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ಸುದೀಪ್ ನೆರವೇರಿಸಿದ್ದರು.
ತಾಯಿಯನ್ನು ಕಳೆದುಕೊಂಡು ಸುದೀಪ್ ಆಘಾತಗೊಂಡಿದ್ದರು. ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ವೇಳೆ ಬಿಕ್ಕಿ ಬಿಕ್ಕಿ ಅತ್ತರು. ಚಿತ್ರರಂಗದ ಹಲವರು ಸರೋಜಾ ಸಂಜೀವ್ ಅಂತಿಮ ದರ್ಶನ ಪಡೆದರು. ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.

ತಾಯಿಯನ್ನು ಕಳೆದುಕೊಂಡು ಸುದೀಪ್ ಜೊತೆ ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಅಜ್ಜಿಯ ಅಗಲಿಕೆಗೆ ಸುದೀಪ್ ಮಗಳು ಸಾನ್ವಿ ಕಣ್ಣೀರಾದರು. ಅಂತ್ಯಕ್ರಿಯೆ ಬಳಿಕ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಜ್ಜಿಯ ಅಂತಿಮಯಾತ್ರೆ ಮತ್ತು ಅಂತ್ಯಕ್ರಿಯೆ ವೇಳೆ ನಡೆದ ಘಟನೆಗಳ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
ಬೆಳಗ್ಗೆ 7:04ಕ್ಕೆ ಸುದೀಪ್ ಅವರ ತಾಯಿ ಸರೋಜಾ ಇಹಲೋಕ ತ್ಯಜಿಸಿದ್ದರು. ಜಯನಗರ ಅಪೊಲೊ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಂತಿಮ ಯಾತ್ರೆ ನಡೆಸಿ ಪಾರ್ಥೀವ ಶರೀರವನ್ನು ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಸುದೀಪ್ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಚಿತಾಗಾರದ ಬಳಿ ನೆರೆದಿದ್ದರು.
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಅಂತ್ಯಕ್ರಿಯೆ ವೇಳೆ ತಳ್ಳಾಟ ನೂಕಾಟ ನಡೆಯಿತು. ಇನ್ನು ಚಿತಾಗಾರದಿಂದ ಹೊರಗೆ ಬಂದ ಬಳಿಕ ಸುದೀಪ್ ಅಭಿಮಾನಿಗಳು ಕೈಮುಗಿದು ನಮಸ್ಕರಿಸಿದ್ದರು. ಅಳುತ್ತಲೇ ಕಾರು ಏರಿ ಹೊರಟರು. ಜನ ಹೆಚ್ಚಾಗಿದ್ದರಿಂದ ಅಂತಿಮ ಯಾತ್ರೆ, ಅಂತ್ಯಕ್ರಿಯೆ ಸಮಯದಲ್ಲಿ ಕೊಂಚ ಗೊಂದಲ ಏರ್ಪಟ್ಟಿತ್ತು.

ಇದೇ ವಿಚಾರದ ಬಗ್ಗೆ ಸಾನ್ವಿ ಪ್ರತಿಕ್ರಿಯಿಸಿದ್ದು "ಇಂದು ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ಆದರೆ ನಮ್ಮ ಮನೆಯ ಹೊರಗೆ ಜಮಾಯಿಸಿದ್ದ ಜನರು, ಜೋರಾಗಿ ಹರ್ಷೋದ್ಗಾರ ಮಾಡುತ್ತಿದ್ದರು. ನಾನು ದುಃಖಿಸಲು ಪ್ರಯತ್ನಿಸುತ್ತಿರುವಾಗ ನನ್ನ ಮುಖಕ್ಕೆ ಕ್ಯಾಮೆರಾಗಳನ್ನು ಹಿಡಿದರು, ಇದು ಬಹಳ ಬೇಸರ ತರಿಸಿತ್ತು. ಕೆಲವರು ಇಷ್ಟು ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ" ಎಂದು ಸಾನ್ವಿ ಬರೆದುಕೊಂಡಿದ್ದಾರೆ.
"ನನ್ನ ತಂದೆ ತನ್ನ ತಾಯಿಗಾಗಿ ಅಳುತ್ತಿದ್ದಾಗ, ಜನರು ತಳ್ಳುತ್ತಿದ್ದರು, ಎಳೆಯುತ್ತಿದ್ದರು. ಆಕೆಗೆ ಉತ್ತಮವಾದ ರೀತಿಯಲ್ಲಿ ವಿದಾಯ ಹೇಳುವುದಕ್ಕೆ ನಾವು ತುಂಬಾ ತೊಂದರೆ ಅನುಭವಿಸಿದ್ದೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಕ್ಕೆ ನಾನು ಅಳುತ್ತಿದ್ದೇನೆ, ಆದರೆ ಈ ಜನ ರೀಲ್ಸ್ ಬಗ್ಗೆ ಕಾಳಜಿ ವಹಿಸಿದ್ದರು" ಎಂದು ಸಾನ್ವಿ ಬೇಸರ ಹೊರ ಹಾಕಿದ್ದಾರೆ.


Click it and Unblock the Notifications











