Sanvi Sudeep: 'ಐಯಾಮ್ ಲವರ್ ಆಲ್ಸೋ ಫೈಟರ್ ಆಲ್ಸೋ' ಎಂದು ಕುಣಿದ ಸಾನ್ವಿ
ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಕೂಡ ಕನ್ನಡ ಸಿನಿರಸಿಕರಿಗೆ ಚಿರಪರಿಚಿತ. ಒಳ್ಳೆ ಗಾಯಕಿ ಕೂಡ ಆಗಿರುವ ಸಾನ್ವಿ ಆಗಾಗ್ಗೆ ಹಾಡು ಹಾಡಿ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಇಂಗ್ಲೀಷ್ ಗೀತೆಗಳನ್ನು ಸಾನ್ವಿ ಹೆಚ್ಚು ಹಾಡುತ್ತಿರುತ್ತಾರೆ.
ಚಿಕ್ಕಂದಿನಿಂದಲೂ ಅಪ್ಪನ ಸಾಕಷ್ಟು ಸಿನಿಮಾ ಕಾರ್ಯಕ್ರಮಗಳನ್ನು ಸಾನ್ವಿ ಕಾಣಿಸಿಕೊಂಡಿದ್ದಾರೆ. ಈಗ ಆಕೆಯ ವಯಸ್ಸು 19 ವರ್ಷ. ಸುದೀಪ್‌ಗೆ ಇಷ್ಟು ದೊಡ್ಡ ಮಗಳು ಇದ್ದಾಳಾ ಎಂದು ಕೆಲವರು ಹುಬ್ಬೇರಿಸುವುದುಂಟು. ಇನ್ನು ಸಿನಿಮಾ ತಾರೆಯರ ಮಕ್ಕಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿರುತ್ತಾರೆ. ಹೀರೊ, ಹೀರೊಯಿನ್ ಕೆಲವೊಮ್ಮೆ ನಿರ್ದೇಶನ ಹೀಗೆ ತಂದೆ ಅಥವಾ ತಾಯಿ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸುತ್ತಾರೆ.

ಸುದೀಪ್ ಪುತ್ರಿ ಸಾನ್ವಿ ಚಿತ್ರರಂಗಕ್ಕೆ ಬರ್ತಾರಾ? ಎನ್ನುವ ಚರ್ಚೆ ಹಲವು ದಿನಗಳಿಂದ ಕೇಳಿಬರ್ತಿದೆ. ಸುದೀಪ್ ಸಹೋದರಿ ಪುತ್ರ ಸಂಚಿತ್ ಸಂಜೀವ್ 'ಜಿಮ್ಮಿ' ಸಿನಿಮಾ ಮೂಲಕ ನಿರ್ದೇಶಕ ಹಾಗೂ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 'ಜಿಮ್ಮಿ' ಕ್ಯಾರೆಕ್ಟರ್ ಗ್ಲಿಂಪ್ಸ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿತ್ತು. ಈ ಸ್ಪೆಷಲ್ ವಿಡಿಯೋ ಹಿನ್ನೆಲೆಯಲ್ಲಿ ಬರುವ ಹಾಡು ಸಿನಿರಸಿಕರ ಮನಗೆದ್ದಿತ್ತು. ಈ ಹಾಡನ್ನು ಹಾಡಿದ್ದು ಸ್ವತಃ ಸಾನ್ವಿ. ಹಾಗಾಗಿ ಶೀಘ್ರದಲ್ಲೇ ಸಾನ್ವಿ ಸಿನಿಮಾಗಳಲ್ಲಿ ಹಾಡು ಹಾಡುವ ಸಾಧ್ಯತೆಯಿದೆ.
ಸಾನ್ವಿ ಒಳ್ಳೆ ಗಾಯಕಿ ಅಷ್ಟೆ ಅಲ್ಲ. ಒಳ್ಳೆ ಡ್ಯಾನ್ಸರ್ ಕೂಡ. ಸದ್ಯ ಆಕೆ ಡ್ಯಾನ್ಸ್ ಮಾಡಿರುವ ಸಣ್ಣ ವಿಡಿಯೋ ವೈರಲ್ ಆಗ್ತಿದೆ. ತೆಲುಗಿನ 'ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ' ಚಿತ್ರದ ಸೂಪರ್ ಹಿಟ್ ಗೀತೆಗೆ ಸಾನ್ವಿ ಹೆಜ್ಜೆ ಹಾಕಿದ್ದಾರೆ. ಆಕೆಯ ಡ್ಯಾನ್ಸ್ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
"ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿ ಮೇಡಂ", "ಅಕ್ಕಾ ಡ್ಯಾನ್ಸ್ ಸೂಪರ್", "ಚಿತ್ರರಂಗಕ್ಕೆ ಎಂಟ್ರಿ ಯಾವಾಗ?" ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗೆ ಸಾನ್ವಿ ಮಾಡಿಸಿದ್ದ ಸ್ಪೆಷಲ್ ಫೋಟೊಶೂಟ್ ವೈರಲ್ ಆಗಿತ್ತು. ಬ್ಲಾಕ್ ಟೀಶರ್ಟ್, ಡೆನಿಮ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಡಾರ್ಕ್ ಮೊಡ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಅದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು.
ಇನ್ನು ಇತ್ತೀಚೆಗೆ ಸಾನ್ವಿ ಬಹಳ ಭಿನ್ನವಾಗಿ ಮೂಗುತಿ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಮೋಡಿ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಕಿಚ್ಚನ ಮಗಳು ಆದಷ್ಟು ಬೇಗ ಚಿತ್ರರಂಗ ಬರ್ತಾಳೆ ಎನ್ನುತ್ತಿದ್ದಾರೆ. ಗಾಯಕಿಯಾಗಿ ಹಾಡುಗಳನ್ನು ಹಾಡುವುದು ಗ್ಯಾರೆಂಟಿ ಎನ್ನುತ್ತಿದ್ದಾರೆ. 'ಜಿಮ್ಮಿ' ಸಿನಿಮಾ ಲಾಂಚ್ ಸಮಯದಲ್ಲಿ ಟೀಸರ್‌ನಲ್ಲಿದ್ದ ಸಾನ್ವಿ ಹಾಡು ಕೇಳಿ ಸುದೀಪ್ ಫಿದಾ ಆಗಿದ್ದರು. "ನನ್ನ ಮಗಳು ಹಾಡುತ್ತಾಳೆ ಅಂತ ಗೊತ್ತಿತ್ತು, ಇಷ್ಟು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತಿರಲಿಲ್ಲ" ಎಂದು ಹೇಳಿದ್ದರು.
ಇದೀಗ ಸಾನ್ವಿ ಡ್ಯಾನ್ಸ್ ವಿಡಿಯೋ ಸಖತ್ ಸದ್ದು ಮಾಡ್ತಿದೆ. "ಏನ್ ಟ್ಯಾಲೆಂಟ್ ರೀ ಡ್ಯಾನ್ಸ್, ಡ್ರಾಯಿಂಗ್, ಸಿಂಗಿಂಗ್ ಇನ್ನೂ ಏನ್ ಏನ್ ಟ್ಯಾಲೆಂಟ್ ಇದೆ ನಿಮ್ಮ ಹತ್ರ...ಸ್ಟೆಪ್ ಮಾತ್ರ ಸೂಪರ್" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. "ಕನ್ನಡ ಸಿನಿಮಾ ನಟಿಯರಿಗಿಂತ ನಿಮ್ಮ ಡ್ಯಾನ್ಸ್ ಚೆನ್ನಾಗಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಹಿಂದೆ ಸಾನ್ವಿ ಮಾಡಿದ್ದ ಡ್ರಾಯಿಂಗ್ ಫೋಟೊಗಳು ಸಹ ವೈರಲ್ ಆಗಿತ್ತು. ತಂದೆ ಸುದೀಪ್ ನಟಿಸಿದ 'ಬಚ್ಚನ್' ಸಿನಿಮಾ 10 ವರ್ಷ ಪೂರೈಸಿದ್ದಾಗ ಪೋಸ್ಟರ್ ಪೆನ್ಸಿಲ್ ಸ್ಕೆಚ್ ಮಾಡಿ ಸಾನ್ವಿ ತಂದೆಗೆ ನೀಡಿದ್ದರು.


Click it and Unblock the Notifications











