ಪರಭಾಷೆಯ ಸಿನಿರಂಗದಲ್ಲಿ ಮೋಡಿ ಮಾಡಿರುವ ರುಕ್ಷ್ಮಿಣಿ ವಸಂತ್
ಪ್ರಸ್ತುತ ಕನ್ನಡದ ಸ್ಟಾರ್ ನಟಿಯರಲ್ಲಿ ರುಕ್ಮಿಣಿ ವಸಂತ್ ಹೆಸರು ಮೊದಲಲ್ಲೇ ಇರುತ್ತದೆ. ಯಾಕೆಂದರೆ ಅವರ ನಟನೆಯ ಪ್ರತಿಯೊಂದು ಸಿನಿಮಾವೂ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಸದ್ಯ ಟಾಪ್ ಟ್ರೆಂಡ್‌ನಲ್ಲಿರುವ ಅವರು ಪ್ರತಿಭಾವಂತ ನಟಿಯರಲ್ಲಿ ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಲ್ಲೇ ಸ್ಥಾನವನ್ನು ಗಳಿಸಿದ್ದಾರೆ.
ಇವರ ಇನ್ನೊಂದು ಸ್ಪೆಷಾಲಿಟಿ ಏನಪ್ಪಾ ಅಂದ್ರೆ ನಟಿಸಿದ ಸಿನಿಮಾಗಳಲ್ಲೆಲ್ಲಾ ದುರಂತ ನಾಯಕಿಯಾಗಿ ಕಾಣಿಸಿಕೊಂಡಿರುವುದು. ಕೆಲವು ಅಭಿಮಾನಿಗಳಂತೂ ಇವರನ್ನು ಮುಂಗಾರು ಮಳೆ ಗಣೇಶ್ ಅವರಿಗೆ ಹೋಲಿಸುತ್ತಾರೆ. ಹಾಗೇ ನಟನೆಯ ಜೊತೆಗೆ ಇವರ ಫ್ಯಾಮಿಲಿ ಬ್ಯಾಗ್ರೌಂಡ್ ಕೂಡ ಅಷ್ಟೇ ಕುತೂಹಕಾರಿಯಾಗಿದೆ. ಅದೇನು ಅಂತ ನೋಡುವುದಾದರೇ.

ದಕ್ಷಿಣ ಭಾರತದ ಹೆಸರಾಂತ ನಟಿಯರಲ್ಲಿ ಒಬ್ಬರಾಗಿರುವ ರುಕ್ಮಿಣಿ ವಸಂತ್ ಅವರ ಸಿನಿ ಪಯಣ ಆರಂಭವಾದದ್ದು ಕನ್ನಡದ ವಿಶೇಷ ಚಿತ್ರ 'ಬೀರಬಲ್' ಮೂಲಕ. ಹೌದು, 2019ರಲ್ಲಿ 'ಬೀರಬಲ್ ಟ್ರೈಲಾಜಿ ಕೇಸ್ 1: ಫೈಂಡಿಂಗ್ ವಜ್ರಮುನಿ'ಯಲ್ಲಿ ಎಂ.ಜಿ. ಶ್ರೀನಿವಾಸ್ ಅವರೊಂದಿಗೆ ನಟಿಸಿದ್ದರು. ಈ ಮುಖಾಂತರ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದ ನಟಿ ಫೇಮಸ್ ಆಗಿದ್ದು 2023ರಲ್ಲಿ ತೆರೆಕಂಡ 'ಸಪ್ತಸಾಗರದ ಆಚೆ ಎಲ್ಲೋ' ಸಿನಿಮಾ ಬಳಿಕ.
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಂತರ ಅವರಿಗೆ ವ್ಯಾಪಕವಾದ ಜನಮನ್ನಣೆ ದೊರೆಯುವುದರೊಂದಿಗೆ ಇದರಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯೂ ದೊರೆಯಿತು. ನಿಷ್ಕಲ್ಮಶ ಪ್ರೀತಿಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ರುಕ್ಮಿಣಿ ವಸಂತ್ ಬೆಂಗಳೂರಿನ ಕನ್ನಡಿಗರ ಕುಟುಂಬವೊಂದರಲ್ಲಿ ಹುಟ್ಟಿದವರು.
ಇವರು ನಟಿಯಾಗಿ ಗುರುತಿಸಿಕೊಳ್ಳುವ ಮೊದಲೇ ಇವರ ಕುಟುಂಬ ಎಲ್ಲೆಡೆ ಗೌರವವನ್ನು ಪಡೆದದ್ದೇ ಆಗಿತ್ತು. ಅದಕ್ಕೆ ಕಾರಣ ರುಕ್ಮಿಣಿ ವಸಂತ್ ಅವರ ತಂದೆ. ಅವರ ಹೆಸರು ಕರ್ನಲ್ ವಸಂತ್ ವೇಣುಗೋಪಾಲ್. ಭಾರತದ ಅತ್ಯುನ್ನತ ಸೇನಾ ಪದಕವಾದ ಅಶೋಕ ಚಕ್ರವನ್ನು ಕರ್ನಾಟಕದಿಂದ ಪಡೆದ ಮೊದಲ ವ್ಯಕ್ತಿ ವಸಂತ್ ವೇಣುಗೋಪಾಲ್.
ರುಕ್ಮಿಣಿಯವರ ತಂದೆ 2007 ರಲ್ಲಿ ಸೇನಾ ಕಾರ್ಯಾಚರಣೆಯಲ್ಲಿದ್ದಾಗ ಮೃತಪಟ್ಟರು. ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಶಸ್ತ್ರಸಜ್ಜಿತ ನುಸುಳುಕೋರರನ್ನು ಗಡಿ ದಾಟದಂತೆ ತಡೆಯುತ್ತಿದ್ದಾಗ ಅವರು ವೀರ ಮರಣವನ್ನಪ್ಪಿದರು. ಈ ಘಟನೆಯ ಬಳಿಕ ರುಕ್ಮಿಣಿಯವರ ತಾಯಿ ಸುಭಾಷಿಣಿ ವಸಂತ್ ಕರ್ನಾಟಕದಲ್ಲಿರುವ ಯುದ್ಧದಲ್ಲಿ ಮಡಿದ ಯೋಧರ ಮಡದಿಯರಿಗಾಗಿ ಯುದ್ಧ ವಿಧವೆಯರ ಪ್ರತಿಷ್ಠಾನವನ್ನು ಸ್ಥಾಪಿಸಿದರು.
ಇದಲ್ಲದೆ ನಟಿಯ ತಾಯಿ ಹೆಸರಾಂತ ಭರತನಾಟ್ಯ ನೃತ್ಯಗಾರ್ತಿಯೂ ಹೌದು. ತಂದೆ ಆರ್ಮಿಯಲ್ಲಿದ್ದುದರಿಂದ ರುಕ್ಮಿಣಿಯವರು ತಮ್ಮ ಹೆಚ್ಚಿನ ಶಿಕ್ಷಣವನ್ನು ಆರ್ಮಿ ಸ್ಕೂಲ್‌ಗಳಲ್ಲೇ ಪೂರ್ಣಗೊಳಿಸಿದರು. ನಂತರ ಲಂಡನ್‌ನ ಬ್ಲೂಮ್ಸ್‌ಬರಿಯಲ್ಲಿರುವ ಪ್ರತಿಷ್ಠಿತ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ (RADA)ನಿಂದ ನಟನೆಯಲ್ಲಿ ಪದವಿ ಪಡೆದರು. ಇಲ್ಲಿ ದೊರೆತ ತರಬೇತಿಯು ಉತ್ತಮ ನಟಿಯಾಗಿ ಹೊರಹೊಮ್ಮಲು ಅವರಿಗೆ ಸಹಾಯಕವಾಯಿತು.
'ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ' ಮತ್ತು ಸೈಡ್ ಬಿನಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿದ್ದ ನಟಿ ಕನ್ನಡ ಪ್ರೇಕ್ಷಕರ ನೆಚ್ಚಿನ ಪುಟ್ಟಿಯಾಗಿ ಬದಲಾದರು. ಅವರ ಪ್ರಿಯಾ ಪಾತ್ರವು ಸಹಜತೆಯೊಂದಿಗೆ ಮೂಡಿಬಂದಿತ್ತಲ್ಲದೇ ಸಿನಿಮಾ ಯಶಸ್ವಿಯಾಗಲೂ ಕಾರಣವಾಯಿತು. ಈ ಸಿನಿಮಾದ ಬಳಿಕ ನಟ ಗಣೇಶ್ ಅವರಿಗೆ ನಾಯಕಿಯಾಗಿ 'ಬಾನದಾರಿಯಲ್ಲಿ' ಸಿನಿಮಾದಲ್ಲಿ ನಟಿಸಿದರು. ಶಿವರಾಜ್ ಕುಮಾರ್ ಅವರ 'ಭೈರತಿ ರಣಗಲ್', ಶ್ರೀಮುರಳಿಯವರ 'ಬಘೀರ' ಹೀಗೆ ಹೆಸರಾಂತ ಚಿತ್ರಗಳಿಗೆ ನಾಯಕಿಯಾಗುವ ಮುಖಾಂತರ ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಕನ್ನಡ ಮಾತ್ರವಲ್ಲದೆ ಹಿಂದಿ ಚಿತ್ರದಲ್ಲಿಯೂ ರುಕ್ಮಿಣಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ತೆರೆ ಕಂಡ ಹಿಂದಿ ಚಲನಚಿತ್ರ 'ಅಪ್‌ಸ್ಟಾರ್ಟ್ಸ್'ನಲ್ಲಿ ನಟಿ ಅಭಿನಯಿಸಿದ್ದರು. ಹಾಗೆಯೇ 2024ರಲ್ಲಿ ತೆರೆಕಂಡ 'ಅಪ್ಪು ಡೋ ಇಪ್ಪುಡೋ' ತೆಲುಗು ಸಿನಿಮಾದಲ್ಲಿ ನಟ ನಿಖಿಲ್ ಸಿದ್ದಾರ್ಥ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ತನಗೆ ದೊರಕಿರುವಂತಹ ಅವಕಾಶಗಳನ್ನು ಈಕೆ ಸದುಪಯೋಗಪಡಿಸಿಕೊಂಡಿದ್ದಾರೆ.


Click it and Unblock the Notifications











