"ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ"; ಶಿವಣ್ಣ ಕಿಡಿ
ಚಿತ್ರರಂಗದಲ್ಲಿ ನಟಿಯರಿಗೆ ಎದುರಾಗುತ್ತಿರುವ ಕಹಿ ಅನುಭವದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಭೆ, ಸಮಾರಂಭಗಳಲ್ಲಿ ನಟಿಯರನ್ನು ಕಂಡ ಕೂಡಲೇ ಪಾಪರಾಜಿಗಳು ಮುಗಿಬಿದ್ದು ವೀಡಿಯೋ ಮಾಡುವುದು, ಜೂನ್ ಮಾಡಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದು ಅತಿಯಾಗಿದೆ. ಈ ಬಗ್ಗೆ ನಟಿ ಸಪ್ತಮಿ ಗೌಡ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದ್ದಾರೆ.
ಸಪ್ತಮಿ ಗೌಡ ಸುದೀರ್ಘ ಪೋಸ್ಟ್ ಹಂಚಿಕೊಂಡು ಅಭಿಯಾನ ಶುರು ಮಾಡಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ವೀಡಿಯೋ ಚಿತ್ರೀಕರಿಸುವವರಿಗೆ ನಿಯಮ ಜಾರಿ ಆಗಬೇಕು. ಆಗ ಮಾತ್ರ ಇದಕ್ಕೆಲ್ಲಾ ಬ್ರೇಕ್ ಬೀಳುತ್ತದೆ ಎಂದಿದ್ದಾರೆ. ಸಪ್ತಮಿ ಗೌಡ ಮಾತನ್ನು ನಟಿಯರಾದ ರಮ್ಯಾ, ರಕ್ಷಿತಾ, ರುಕ್ಮಿಣಿ ವಸಂತ್ ಸೇರಿ ಹಲವರು ಬೆಂಬಲಿಸಿದ್ದಾರೆ. ಆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಯುವ ರಾಜ್‌ಕುಮಾರ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಇದೀಗ ನಟ ಶಿವರಾಜ್‌ಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣುಮಕ್ಕಳ, ನಟಿಯರ ಗೌರವರಕ್ಕೆ ಚ್ಯುತಿ ತರಬೇಡಿ" ಎಂದು ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಶಿವರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ನಟಿ ಸಪ್ತಮಿ ಗೌಡ ಈ ಕೆಟ್ಟ ವರ್ತನೆ ಬಗ್ಗೆ ಮಾತನಾಡಿದ್ದರು. ವೀವ್ಸ್, ಲೈಕ್ಸ್‌ಗಾಗಿ ಕೆಲವರು ಮನಸ್ಸಿಗೆ ಬಂದಂತೆ ನಟಿಯರ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ನಾನೇ ಅಂತಹ ವೀಡಿಯೋಗಳನ್ನು ನೋಡಿದ್ದೇನೆ. ಎಷ್ಟು ವಿಡಿಯೋ, ಕಾಮೆಂಟ್ ಡಿಲೀಟ್ ಮಾಡಿಸೋಕೆ ಸಾಧ್ಯ? ಎಂದು ಪ್ರಶ್ನಿಸಿದ್ದರು. "ಚಿತ್ರರಂಗದಲ್ಲಿರುವ ಮಹಿಳೆಯರಿಗಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ" ಎಂದು ಸಪ್ತಮಿ ಬರೆದುಕೊಂಡಿದ್ದರು.
"ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ. ಇಂತಹ ವರ್ತನೆ, ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಸ್ವೀರಕಾರವಲ್ಲ" ಎಂದು ಸಪ್ತಮಿ ಗೌಡ ಕಿಡಿ ಕಾರಿದ್ದರು.
"ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ" ಎಂದು ಸಪ್ತಮಿ ಪೋಸ್ಟ್ ಮಾಡಿದ್ದರು. ಸಾಕಷ್ಟು ಜನ ಫೋನ್ ಮಾಡಿ ಈ ಬಗ್ಗೆ ಅವರನ್ನು ವಿಚಾರಿಸಿದ್ದರು. ಅಭಿಮಾನಿಗಳು ಸಹ ಇದನ್ನು ಬೆಂಬಲಿಸಿದ್ದಾರೆ.
ಈ ಹಿಂದೆ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಕೂಡ ಪಾಪರಾಜಿಗಳ ವರ್ತನೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ತಮ್ಮ ಅಜ್ಜಿ ಅಂತ್ಯಕ್ರಿಯೆ ವೇಳೆ ಉಂಟಾಗಿದ್ದ ಗೊಂದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. "ಇಂದು ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಾನು ದುಃಖಿಸಲು ಪ್ರಯತ್ನಿಸುತ್ತಿರುವಾಗ ನನ್ನ ಮುಖಕ್ಕೆ ಕ್ಯಾಮೆರಾಗಳನ್ನು ಹಿಡಿದರು, ಇದು ಬಹಳ ಬೇಸರ ತರಿಸಿತ್ತು. ಕೆಲವರು ಇಷ್ಟು ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ" ಎಂದು ಸಾನ್ವಿ ಬರೆದುಕೊಂಡಿದ್ದರು.
"ನನ್ನ ತಂದೆ ತನ್ನ ತಾಯಿಗಾಗಿ ಅಳುತ್ತಿದ್ದಾಗ, ಜನರು ತಳ್ಳುತ್ತಿದ್ದರು, ಎಳೆಯುತ್ತಿದ್ದರು. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಕ್ಕೆ ನಾನು ಅಳುತ್ತಿದ್ದೆ, ಆದರೆ ಈ ಜನ ರೀಲ್ಸ್ ಬಗ್ಗೆ ಕಾಳಜಿ ವಹಿಸಿದ್ದರು" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಾನ್ವಿ ಸುದೀಪ್ ಪೋಸ್ಟ್ ಮಾಡಿದ್ದರು. ಇದೇ ರೀತಿ ಇನ್ನು ಕೆಲ ನಟ, ನಟಿಯರಿಗೆ ಕೆಟ್ಟ ಅನುಭವ ಆಗಿದ್ದು ಇದೆ.


Click it and Unblock the Notifications











