ಚಂದನವನದಲ್ಲಿ ಸಪ್ತಮಿ ರಂಗು; ಪರಭಾಷೆಯಿಂದಲೂ ಬರ್ತಿದೆ ಅವಕಾಶಗಳು
'ಕಾಂತಾರ' ಚಿತ್ರ ಮಾಡಿ ದೊಡ್ಡ ಸಕ್ಸಸ್ ಕಂಡು ಚೆಲುವೆ ಸಪ್ತಮಿ ಗೌಡ. ಲೀಲಾ ಆಗಿ ಮೋಡಿ ಮಾಡಿದ ಬೆನ್ನಲ್ಲೇ ಬಾಲಿವುಡ್‌ನಿಂದಲೂ ಅವಕಾಶಗಳು ಹುಡುಕಿ ಬಂದಿತ್ತು. ಬಳಿಕ ಯುವರಾಜ್‌ಕುಮಾರ್ ಜೋಡಿಯಾಗಿ ಮಿಂಚಿದ್ದು ಗೊತ್ತೇಯಿದೆ. ಸದ್ಯ ಕನ್ನಡ ಎರಡು, ತೆಲುಗಿನ ಒಂದು ಸಿನಿಮಾ ಸಿಂಗಾರ ಸಿರಿಯ ಚೆಲುವೆ ಕೈಯಲ್ಲಿದೆ.
ನಿನ್ನೆ(ಜೂನ್ 8) ಸಪ್ತಮಿ ಗೌಡ 29ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸರಳವಾಗಿ ಕುಟುಂಬ ಸದಸ್ಯರ ಜೊತೆ ಸಂಭ್ರಮಾಚರಣೆ ಮಾಡಿ ಖುಷಿಪಟ್ಟಿದ್ದಾರೆ. ಸದ್ಯ ಮುಂದಿನ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ. ಇನ್ನು ಸಪ್ತಮಿ ಗೌಡ ನಟನೆಯ ತೆಲುಗಿನ 'ತಮ್ಮುಡು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ನಿತಿನ್ ಹೀರೊ ಆಗಿ ನಟಿಸಿರುವ 'ತಮ್ಮುಡು' ಚಿತ್ರಕ್ಕೆ ಶ್ರೀರಾಮ್ ವೇಣು ಆಕ್ಷನ್ ಕಟ್ ಹೇಳಿದ್ದಾರೆ. ಸಪ್ತಮಿ ಗೌಡ ಜೊತೆಗೆ ವರ್ಷಾ ಬೊಳ್ಳಮ್ಮ, ಲಯಾ, ಸ್ವಾಸಿಕಾ ವಿಜಯ್ ಚಿತ್ರದ ತಾರಾಗಣದಲ್ಲಿದ್ದಾರೆ. ಜುಲೈ 4ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇನ್ನೆರಡು ದಿನಗಳಲ್ಲಿ ಚಿತ್ರದ ಅಫೀಶಿಯಲ್ ಟ್ರೈಲರ್ ಸಹ ರಿಲೀಸ್ ಆಗಲಿದೆ.
ಪವನ್ ಕಲ್ಯಾಣ್ ಹೀರೊ ಆಗಿ 'ತಮ್ಮುಡು' ಎಂಬ ಸಿನಿಮಾ ಬಂದು ಗೆದ್ದಿತ್ತು. ಇದೀಗ ಪವನ್ ಅಭಿಮಾನಿ ನಿತಿನ್ ಅದೇ ಟೈಟಲ್ ಸಿನಿಮಾದಲ್ಲಿ ನಟಿಸಿದ್ದಾರೆ. ದಿಲ್ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು 'ತಮ್ಮುಡು' ಜೊತೆ ಕನ್ನಡದಲ್ಲಿ 'ದಿ ರೈಸ್ ಆಫ್ ಅಶೋಕ' ಹಾಗೂ 'ಹಲಗಲಿ' ಎಂಬ ಐತಿಹಾಸಿಕ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ದಿ ರೈಸ್ ಆಫ್ ಅಶೋಕ' ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸಪ್ತಮಿ ನಟಿಸುತ್ತಾರೆ. ಸುಕೇಶ್ ಡಿಕೆ ನಿರ್ದೇಶನದ 'ಹಲಗಲಿ' ಚಿತ್ರದಲ್ಲಿ ಧನಂಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ 'ಪಾಪ್‌ಕಾರ್ನ್ ಮಂಕಿಟೈಗರ್' ಚಿತ್ರದಲ್ಲಿ ಧನಂಜಯ್ ಹಾಗೂ ಸಪ್ತಮಿ ಒಟ್ಟಿಗೆ ನಟಿಸಿದ್ದರು. ಅದು ಆಕೆಯ ಮೊದಲ ಸಿನಿಮಾ ಆಗಿತ್ತು. ಇನ್ನು 'ಕಾಂತಾರ' ಬೆನ್ನಲ್ಲೇ 'ದಿ ವಾಕ್ಸಿನ್ ವಾರ್' ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸಿ ಬಂದಿದ್ದರು. ಬಳಿಕ 'ಯುವ' ಚಿತ್ರಕ್ಕೆ ನಾಯಕಿ ಆಗಿದ್ದರು.
ತಮ್ಮ ಬ್ಯುಸಿ ಸಿನಿ ಜೀವನದ ಬಗ್ಗೆ ಸಪ್ತಮಿ ಗೌಡ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ತೆಲುಗಿನ 'ತಮ್ಮುಡು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಮೋಷನ್ ಶುರುವಾಗಿದೆ. ಕನ್ನಡದಲ್ಲಿ 'ದಿ ರೈಸ್ ಆಫ್ ಅಶೋಕ' ಸಿನಿಮಾ ಮುಗೀತು. 'ಹಲಗಲಿ' ಸಿನಿಮಾ ನಡೀತಿದೆ. ಅದು ಬಿಟ್ಟು ಯಾವುದೇ ಸಿನಿಮಾ ಇನ್ನು ಫೈನಲ್ ಆಗಿಲ್ಲ. 'ಕಾಳಿ' ಚಿತ್ರದ ಬಗ್ಗೆ ಮಾಹಿತಿಯಿಲ್ಲ" ಎಂದಿದ್ದಾರೆ.
ಬಾಲಿವುಡ್‌ನಲ್ಲಿ 'ತಮ' ಎಂಬ ಸಿನಿಮಾ ನಿರ್ಮಾಣವಾಗುತ್ತಿದೆ. ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಪ್ತಮಿ "ಇಲ್ಲ, ಅದೆಲ್ಲ ಸುಳ್ಳು. 'ತಮ' ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
"ಸದ್ಯ ಸಿನಿಮಾ ಬಿಟ್ಟು ಬೇರೆ ಯಾವುದೇ ಆಲೋಚನೆ ಇಲ್ಲ. ಸದ್ಯಕ್ಕೆ ಸಿನಿಮಾ ಕೆಲಸಗಳಲ್ಲೇ ಬ್ಯುಸಿಯಾಗಿದ್ದೀನಿ. ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದೇವೆ. ಎರಡ್ಮೂರು ಸಿನಿಮಾಗಳ ಮಾತುಕತೆ ನಡೀತಿದೆ. ತೆಲುಗು, ತಮಿಳಿನಿಂದಲೂ ಅವಕಾಶಗಳು ಬರ್ತಿವೆ. ಸ್ಕ್ರಿಪ್ಟ್ ಕೇಳ್ತಿದ್ದೀನಿ. ಯಾವುದು ಫೈನಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇನೆ" ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ ಉಮೇಶ್ ಪುತ್ರಿ ಸಪ್ತಮಿ ಗೌಡ. ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಉತ್ತಮ ಈಜುಪಟುವಾಗಿರುವ ಲೀಲಾ ನ್ಯಾಷನಲ್ ಲೆವೆನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲ ದಿನ ಕೆಲಸ ಮಾಡಿದ್ದರು. ಕೋವಿಡ್‌ಗೂ ಮುನ್ನ ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದರು. ಅಷ್ಟರಲ್ಲಿ ಲಾಕ್‌ಡೌನ್ ಆಗಿತ್ತು. ಅದೇ ಸಮಯದಲ್ಲಿ 'ಕಾಂತಾರ' ಚಿತ್ರಕ್ಕೆ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದರು.


Click it and Unblock the Notifications











