ಅಸಭ್ಯವಾಗಿ ನಟಿಯರ ವೀಡಿಯೋ ವೈರಲ್ ಮಾಡುವುದಕ್ಕೆ ಕಡಿವಾಣ ಬೀಳಬೇಕು.. ಇದಕ್ಕೆ ನಿಯಮ ಜಾರಿ ಆಗಬೇಕು- ಸಪ್ತಮಿ ಗೌಡ
ಸೋಶಿಯಲ್ ಮೀಡಿಯಾದಲ್ಲಿ ನಟಿಯರ ಫೋಟೊ, ವೀಡಿಯೋವನ್ನು ಅಸಭ್ಯವಾಗಿ ಪೋಸ್ಟ್ ಮಾಡಿವ ಹುಚ್ಚಾಟ ಹೆಚ್ಚುತ್ತಿದೆ. ಲೈಕ್ಸ್, ವೀವ್ಸ್‌ಗಾಗಿ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕನ್ನಡ ಚಿತ್ರರಂಗ ಗರಂ ಆಗಿದೆ. ಹೀಗೆ ಕೆಟ್ಟದಾಗಿ ಫೋಟೊ, ವಿಡಿಯೋ ಮಾಡಿ ವೈರಲ್ ಮಾಡುವವರಿಗೆ ಕಡಿವಾಣ ಹಾಕಬೇಕು ಎಂದು ಕನ್ನಡ ಸಿನಿಮಾ ತಾರೆಯರು ದನಿ ಎತ್ತಿದ್ದಾರೆ.
ಬಾಲಿವುಡ್‌ನಲ್ಲಿ ಕೂಡ ಇದೇ ರೀತಿ ನಟಿಯರು ಓಡಾಡುವಾಗ ಹಿಂಬದಿಯಿಂದ ಪಾಪರಾಜಿಗಳು ವೀಡಿಯೋ ಮಾಡುವುದು, ಜೂಮ್ ಮಾಡುವುದು ಮಾಡುತ್ತಿದ್ದರು. ಈ ಬಗ್ಗೆ ಕೆಲ ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕೆಟ್ಟ ವರ್ತನೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಅಂತ್ಯ ಹಾಡಲು ಸಪ್ತಮಿ ಗೌಡ ಮುಂದಾಗಿದ್ದಾರೆ. ಅದಕ್ಕಾಗಿ ಸಪ್ತಮಿ ಗೌಡ ಅಭಿಯಾನ, ಹೋರಾಟ ಆರಂಭಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನಟಿಯರಾದ ರಮ್ಯಾ, ರಕ್ಷಿತಾ ಪ್ರೇಮ್, ನಟ ಯುವ ರಾಜ್‌ಕುಮಾರ್ ಸೇರಿ ಹಲವರು ಹಂಚಿಕೊಂಡು ಬೆಂಬಲ ಸೂಚಿಸಿದ್ದಾರೆ. ಆ ಮೂಲಕ ನಟಿಯರ ದೇಹವನ್ನ ಅಸಭ್ಯ ಕೋನಗಳಿಂದ ಚಿತ್ರಿಸಿ ಪೋಸ್ಟ್ ಮಾಡುವವರ ವಿರುದ್ಧ ನಟಿಯರೆಲ್ಲಾ ಒಂದಾಗಿ ಪ್ರತಿಭಟಿಸಲು ಮುಂದಾಗಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ನಟಿ ಸಪ್ತಮಿ ಗೌಡ ಪ್ರತಿಕ್ರಿಯಿಸಿದ್ದಾರೆ.

"ಕೆಲವರ ಇಂತಹ ವರ್ತನೆ ಬಗ್ಗೆ ನನ್ನ ಅಭಿಯಾನಕ್ಕೆ ಸಾಕಷ್ಟು ಜನ ಬೆಂಬಲ ಸೂಚಿಸಿದ್ದಾರೆ. ಹಲವರು ಈ ಬಗ್ಗೆ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ನಮಗೆ ಇದರಿಂದ ಇಷ್ಟು ನೋವಾಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ. ಹೀಗೆ ಕೆಟ್ಟದಾಗಿ ವೀಡಿಯೋ ಮಾಡಿ ಪೋಸ್ಟ್ ಮಾಡುವವರಿಗೆ ಇದು ಮುಟ್ಟಬೇಕು. ಇದು ಮುಂದುವರೆದರೆ ಶಿಕ್ಷೆ ಆಗುತ್ತದೆ ಎನ್ನುವುದು ಅಂತಹವರಿಗೆ ಗೊತ್ತಾಗಬೇಕು" ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ.
ಎಲ್ಲರೂ ತಪ್ಪು ಮಾಡಿದ್ದಾರೆ ಎಂದು ನಾನು ಹೇಳ್ತಿಲ್ಲ. ಆದರೆ ತಪ್ಪು ಮಾಡಿದವರಿಗೆ ಇದು ಗೊತ್ತಾಗಬೇಕು ಎಂದು ಸಪ್ತಮಿ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಮ್ಮನ್ನು ಕೆಲವರು ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ 10 ಪೇಜ್‌ಗಳಲ್ಲಿ ಹೀಗೆ ಮಾಡುತ್ತಿದ್ದರೆ ಅದು ಎಷ್ಟು ವೈರಲ್ ಆಗುತ್ತದೆ. ಒಂದು ಪೇಜ್‌ನಲ್ಲಿ ಎಷ್ಟು ವೀವ್ಸ್, ಶೇರ್, ಕಾಮೆಂಟ್ ಬರುತ್ತದೆ. ಎಲ್ಲವನ್ನು ಡಿಲೀಟ್ ಮಾಡಿಸುತ್ತಾ ಕೂರಲು ಸಾಧ್ಯವಿಲ್ಲ. ಇದಕ್ಕೆಲ್ಲಾ ನಿಯಮ ಜಾರಿಗೆ ಬರಬೇಕು" ಎಂದು ಸಪ್ತಮಿ ಆಗ್ರಹಿಸಿದ್ದಾರೆ.

ಮಾಧ್ಯಮದವರು ಸಿನಿಮಾ ಕಾರ್ಯಕ್ರಮ, ಸುದ್ದಿಗೋಷ್ಠಿಗೆ ಬಂದರೆ ನಮಗೆ ಗೊತ್ತಾಗುತ್ತದೆ. ನಮ್ಮ ಜೊತೆ ನೇರವಾಗಿ ಮಾತನಾಡುತ್ತೀರಾ. ವೀಡಿಯೋ ಮಾಡಿ ಪ್ರಚಾರ ಮಾಡುತ್ತಾರೆ. ಆದರೆ ಕೆಲವರು ಯಾರು ಎನ್ನುವುದು ಗೊತ್ತಾಗಲ್ಲ. ಕ್ಯಾಮರಾ, ಮೊಬೈಲ್ ಹಿಡಿದು ವಿಡಿಯೋ ಚಿತ್ರೀಕರಿಸುತ್ತಾರೆ ಎಂದು ಸಪ್ತಮಿ ಬೇಸರ ವ್ಯಕ್ತಪಡಿಸಿದ್ದಾರೆ. "ಒಂದು ವೇಳೆ ಬಂದು ವೀಡಿಯೋ ಮಾಡಿದ್ರು, ಏನು ಚಿತ್ರೀಕರಿಸಿದ್ದೇವೆ ಎನ್ನುವುದನ್ನು ತೋರಿಸಬೇಕು. ಸುಖಾಸುಮ್ಮನೆ ಇಷ್ಟ ಬಂದಂತೆ ವಿಡಿಯೋ ಪೋಸ್ಟ್ ಮಾಡುತ್ತಾರೆ. ವೈಯಕ್ತಿಕವಾಗಿ ಪಿಆರ್ ಮಾಡಿಕೊಂಡರೆ ಮಾಡಿಕೊಳ್ಳಲಿ, ಆದರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಬಂದು ಹೀಗೆ ಮಾಡುವುದು ಸರಿಯಲ್ಲ" ಎಂದಿದ್ದಾರೆ.
ನಾನಾ ರೀತಿ ಕಾಮೆಂಟ್ ಮಾಡುತ್ತಾರೆ. ನಾವು ಹಾಕುವ ಬಟ್ಟೆ ಬಗ್ಗೆಯೂ ಮಾತನಾಡುತ್ತಾರೆ. ಪ್ಯಾಂಟ್, ಶರ್ಟ್ ಧರಿಸಿ ಹೋಗುತ್ತಿದ್ದರೆ ಹಿಂದಿನಿಂದ ವಿಡಿಯೋ ಮಾಡಿ, ಇದು ಯಾರು ಗೆಸ್ ಮಾಡಿ ಅಂತ ಪೋಸ್ಟ್ ಮಾಡ್ತಾರೆ. ಅದರ ಅವಶ್ಯಕತೆ ಇದ್ಯಾ? ಎಂದು ಸಪ್ತಮಿ ಪ್ರಶ್ನಿಸಿದ್ದಾರೆ. "ಸೋಶಿಯಲ್ ಮೀಡಿಯಾ ಇನ್‌ಫ್ಲುರೆನ್ಸರ್, ಯೂಟ್ಯೂಬರ್ಸ್ ಸಿನಿಮಾ ಕಾರ್ಯಕ್ರಮಗಳಿಗೆ ಬಂದ್ರೆ, ಒಂದು ವೇಳೆ ಚಿತ್ರತಂಡದವರೇ ಕರೆಸಿದರೂ ಜವಾಬ್ದಾರಿ ವಹಿಸಿಕೊಳ್ಳಬೇಕು" ಎಂದು ಸಪ್ತಮಿ ವಿವರಿಸಿದ್ದಾರೆ.
"ಸಿನಿಮಾ ಕಾರ್ಯಕ್ರಮ ಅಂದರೆ ಒಂದು ನಿಯಮ ಬರಬೇಕು. ಎಷ್ಟು ಜನ ಮಾಧ್ಯಮದವರು, ಯೂಟ್ಯೂಬರ್ಸ್ ಬರ್ತಾರೆ ಎನ್ನುವುದು ಗೊತ್ತಾಗಬೇಕು. ಅದಕ್ಕೊಂದು ರೀತಿ, ನೀತಿ ಇರಬೇಕು. ಹೀಗೆ ಬರುವವರ ಐಡೆಂಟಿಫಿಕೇಷನ್ ಇರಬೇಕು. ವೀಡಿಯೋ ಏನು ಚಿತ್ರೀಕರಿಸುತ್ತಾರೆ ಎನ್ನುವುದನ್ನು ನಮ್ಮ ಗಮನಕ್ಕೆ ತರಬೇಕು. ಆಗ ಬದಲಾವಣೆ ಆಗಬಹುದು" ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಕೆಲ AI ಫೋಟೊ, ವಿಡಿಯೋ ನೋಡಿದಾಗಲೂ ಅಚ್ಚರಿ ಆಗುತ್ತದೆ ಎಂದು ತಿಳಿಸಿದ್ದಾರೆ.


Click it and Unblock the Notifications











