ಆರ್‌ಸಿಬಿ ಸೇರಿದ ಸ್ಮೃತಿ ಮಂಧಾನಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಫುಲ್ ಸಪೋರ್ಟ್!
ಇಷ್ಟು ದಿನ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ನೋಡಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಈಗ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ನೋಡುವ ಅವಕಾಶವೂ ಸಹ ಒದಗಿ ಬಂದಿದೆ. ಹೌದು, ಈ ಬಾರಿ 'ವುಮೆನ್ಸ್ ಪ್ರೀಮಿಯರ್ ಲೀಗ್' ನಡೆಯುತ್ತಿದ್ದು, ಈ ಟೂರ್ನಿಗಾಗಿ ಇಂದು ( ಫೆಬ್ರವರಿ 13 ) ಹರಾಜು ಪ್ರಕ್ರಿಯೆ ನಡೆದಿದೆ.
ಈ ಮಹಿಳಾ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಒಂದು ತಂಡವಾಗಿದ್ದು, ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನ್ಯಾಷನಲ್ ಕ್ರಷ್ ಸ್ಮೃತಿ ಮಂಧಾನ ಅವರನ್ನು ಖರೀದಿಸಿದೆ. ಬರೋಬ್ಬರಿ 3.40 ಕೋಟಿ ರೂಪಾಯಿಗಳಿಗೆ ಸ್ಮೃತಿ ಮಂಧಾನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಹರಾಜಿಗೂ ಮುನ್ನವೇ ಸ್ಮೃತಿ ಮಂಧಾನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಲಿ ಎಂದು ಆಶಿಸಿದ್ದ ಆರ್‌ಸಿಬಿ ಫ್ಯಾನ್ಸ್ ತಮ್ಮ ಕೋರಿಕೆ ನಿಜವಾದ ಮೇಲಂತೂ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಇನ್ನು ಮೀಮ್ಸ್ ಮಾಡೋನು ಎಂಬ ಕನ್ನಡದ ಟ್ರೋಲಿಗ ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರ್ಪಡೆಯಾಗಿದ್ದರ ಕುರಿತು ಮೀಮ್ ಒಂದನ್ನು ಕಾಂತಾರ ಚಿತ್ರದ ದೃಶ್ಯ ಬಳಸಿ ಮಾಡಿದ್ದಾರೆ. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕಿ ಸಪ್ತಮಿ ಗೌಡಗೆ ಉದ್ಯೋಗ ಕೊಡಿಸುವ ಸಲುವಾಗಿ ದಣಿ ಬಳಿ ಕರೆದುಕೊಂಡು ಹೋದಾಗ 'ನಮ್ದೇ ಜನ ಸಪೋರ್ಟ್ ಮಾಡಿ' ಎಂಬ ಡೈಲಾಗ್ ಇದೆ. ಈ ದೃಶ್ಯವನ್ನು ಎಡಿಟ್ ಮಾಡಿರುವ ಈ ಟ್ರೋಲಿಗ ರಿಷಬ್ ಬದಲು ವಿರಾಟ್ ಕೊಹ್ಲಿ ಹಾಗೂ ಸಪ್ತಮಿ ಗೌಡ ಬದಲು ಸ್ಮೃತಿ ಮಂಧಾನ ಫೋಟೊ ಹಾಕಿ ಟ್ರೋಲ್ ಮಾಡಿದ್ದಾರೆ.
ಈ ಟ್ರೋಲ್‌ಗೆ ಸ್ಪಂದಿಸಿರುವ ಸಪ್ತಮಿ ಗೌಡ 'ಇದಕ್ಕೆಲ್ಲಾ ನಮ್ದು ಫುಲ್ಲು ಸಪೋರ್ಟ್ ಉಂಟು' ಎಂದು ಬರೆದುಕೊಂಡಿದ್ದಾರೆ. ಸದ್ಯ ಟ್ರೋಲಿಗ ಮಾಡಿರುವ ಈ ಮೀಮ್ ಹಾಗೂ ಇದಕ್ಕೆ ಸಪ್ತಮಿ ಗೌಡ ನೀಡಿರುವ ರಿಪ್ಲೈ ಟ್ವಿಟರ್‌ನಲ್ಲಿ ವೈರಲ್ ಆಗಿದೆ.


Click it and Unblock the Notifications











