ಸಪ್ತಮಿ ಗೌಡಗೆ ಹುಟ್ಟುಹಬ್ಬದ ಸಂಭ್ರಮ; ರಿವೀಲ್ ಆಯಿತು ಯುವ ಚಿತ್ರದಲ್ಲಿನ ಪಾತ್ರ
ಯುವ ಈ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಯಾವ ನಟ ಮೊದಲ ಚಿತ್ರಕ್ಕೂ ಹುಟ್ಟಿಕೊಳ್ಳದಿದ್ದ ಕ್ರೇಜ್ ಹಾಗೂ ನಿರೀಕ್ಷೆ ಈ ಚಿತ್ರದ ಮೇಲೆ ಹುಟ್ಟುಕೊಂಡಿದೆ.
ಹೌದು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಟ ಎಂಬ ದೊಡ್ಡ ಜವಾಬ್ದಾರಿ ಹಾಗೂ ನಂಬಿಕೆ ಯುವ ರಾಜ್‌ಕುಮಾರ್ ಮೇಲಿದ್ದು, ಚಿತ್ರದ ಮೇಲಿನ ನಿರೀಕ್ಷೆಗೆ ಈ ಅಂಶ ದೊಡ್ಡ ಕಾರಣವಾಗಿದೆ.

ಅದರ ಜತೆಗೆ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ಪ್ರತಿಷ್ಟಿತ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಹೀಗೆ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರ ಅಡಿಯಲ್ಲಿ ಯುವ ರಾಜ್‌ಕುಮಾರ್ ಲಾಂಚ್ ಆಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.
ಇನ್ನು ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್‌ನ ಈ ಚಿತ್ರ ಸೆಟ್ಟೇರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರಕ್ಕೆ ಯಾವ ಟೈಟಲ್ ಇಡಬಹುದು, ನಾಯಕಿ ಯಾರಾಗಬಹುದು ಎಂಬ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು.
ಹಲವು ಟೈಟಲ್‌ಗಳು ಹರಿದಾಡಿದ ನಂತರ ಅಂತಿಮವಾಗಿ ಚಿತ್ರಕ್ಕೆ ಯುವ ಎಂಬ ಟೈಟಲ್ ಅನ್ನು ಇಡಲಾಯಿತು. ಬಳಿಕ ಚಿತ್ರಕ್ಕೆ ಕಾಂತಾರ ಮೂಲಕ ಎಲ್ಲರ ಮನಗೆದ್ದಿದ್ದ ಸಪ್ತಮಿ ಗೌಡ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು.
ಹೀಗೆ ನಾಯಕಿಯನ್ನು ಘೋಷಿಸಿದ ಬಳಿಕ ಚಿತ್ರತಂಡ ಹೆಚ್ಚೇನೂ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಇದೀಗ ಇಂದು ( ಜೂನ್ 8 ) ಸಪ್ತಮಿ ಗೌಡ ಹುಟ್ಟುಹಬ್ಬದ ಪ್ರಯುಕ್ತ ಯುವ ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ.
ಈ ವಿಶೇಷ ಪೋಸ್ಟರ್ ಮೂಲಕ ಸಪ್ತಮಿ ಗೌಡಗೆ ಯುವ ಚಿತ್ರತಂಡ ಶುಭಕೋರಿದ್ದು, ಚಿತ್ರದಲ್ಲಿ ಸಪ್ತಮಿ ಗೌಡ ಪಾತ್ರವೇನು ಎಂಬುದು ಈ ಪೋಸ್ಟರ್ ಮೂಲಕ ತಿಳಿದು ಬಂದಿದೆ. ಪೋಸ್ಟರ್‌ನಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಸಿರಿ ಎಂದು ಚಿತ್ರತಂಡ ಶುಭ ಕೋರಿದ್ದು, ಚಿತ್ರದಲ್ಲಿ ಸಪ್ತಮಿ ಗೌಡ ಸಿರಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಸಪ್ತಮಿ ಗೌಡ ಪುಸ್ತಕವೊಂದನ್ನು ಹಿಡಿದು ಪೋಸ್ ಕೊಟ್ಟಿದ್ದು, ಚಿತ್ರದಲ್ಲಿ ಇವರದ್ದು ವಿದ್ಯಾರ್ಥಿನಿಯ ಪಾತ್ರ ಎಂಬುದು ತಿಳಿದುಬಂದಿದೆ. ಇನ್ನು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೇ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.
ಇನ್ನು ನಾಯಕಿಯನ್ನು ಘೋಷಿಸುವ ಮುನ್ನ ಹೊಂಬಾಳೆ ಫಿಲ್ಮ್ಸ್ ಯುವ ಚಿತ್ರದ ಟೀಸರ್ ಒಂದನ್ನು ಬಿಡುಗಡೆ ಮಾಡಿತ್ತು. ಈ ಟೀಸರ್‌ನಲ್ಲಿ ಯುವ ರಗಡ್ ಲುಕ್‌ನಲ್ಲಿ ಬೈಕ್ ಓಡಿಸಿ, ವಿಲನ್‌ಗಳಿಗೆ ನೀವ್ ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೇ ಹರಿಯುತ್ತೆ ಎಂದು ಖಡಕ್ ಡೈಲಾಗ್ ಹೊಡೆದಿದ್ದರು.
ಯುವ ರಾಜ್‌ಕುಮಾರ್ ಲುಕ್‌ಗೆ ಫಿದಾ ಆಗಿದ್ದ ಸಿನಿ ರಸಿಕರು ಟೀಸರ್‌ನ ಗುಣಮಟ್ಟವನ್ನು ಕೊಂಡಾಡಿದ್ದರು. ಪ್ರಕಾಶ್ ರಾಜ್ ಬ್ಯಾಕ್‌ಗ್ರೌಂಡ್ ಧ್ವನಿಯೊಂದಿಗೆ ಆರಂಭವಾಗುವ ಈ ಟೀಸರ್‌ನ ಪ್ರತಿಯೊಂದು ದೃಶ್ಯವೂ ಚಿತ್ರ ಎಷ್ಟು ರಿಚ್ ಆಗಿ ಮೂಡಿಬರಬಹುದು ಎಂಬುದನ್ನು ಹೇಳುತ್ತಿದ್ದವು.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವನ್ನು ಮಾಡಿದ್ದು, ಟೀಸರ್‌ನಲ್ಲಿನ ಮಾಸ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮೂಲಕವೇ ಸಿನಿ ರಸಿಕರ ಮನ ಗೆದ್ದಿದ್ದರು.


Click it and Unblock the Notifications











