ಅಣ್ಣಾವ್ರ ಮೇಲೆ ಊಟಿಯಲ್ಲಿ ಮಾರಣಾಂತಿಕ ಹಲ್ಲೆ, ಬಳಿಕ ಏನಾಯ್ತು? ಕ್ಷಮೆ ಕೇಳಿದ್ದ ಎಂಜಿಆರ್
ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹೇಳಿಕೆ ಹಿಂಪಡೆಯಲು ಕಮಲ್ ನಿರಾಕರಿಸಿದ್ದಾರೆ. ಮೊದಲಿನಿಂದಲೂ ಕನ್ನಡಿಗರ ಮೇಲೆ ತಮಿಳರು ದಬ್ಬಾಳಿಕೆ ನಡೆಸುತ್ತಲೇ ಬರುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ವರನಟ ಡಾ. ರಾಜ್‌ಕುಮಾರ್ ಮೇಲೆ ತಮಿಳುನಾಡಿನಲ್ಲಿ ಗಂಭೀರವಾಗಿ ಹಲ್ಲೆ ನಡೆದಿತ್ತು.
'ಯಾರಿವನು' ಸಿನಿಮಾ ಚಿತ್ರೀಕರಣದ ತಮಿಳುನಾಡಿನ ಊಟಿಯಲ್ಲಿ ನಡೆಯುತ್ತಿತ್ತು. ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಕೆಲವರು ನುಗ್ಗಿದ್ದರು. ಚಿತ್ರೀಕರಣಕ್ಕೆ ಅಡ್ಡಿಪಡಿಸಿ ಅಣ್ಣಾವ್ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪ್ರಾಣಾಪಾಯದಿಂದ ಡಾ. ರಾಜ್‌ಕುಮಾರ್ ಪಾರಾಗಿದ್ದರು. ಆಗ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಕೊನೆಗೆ ಅಣ್ಣಾವ್ರು ಎಲ್ಲರನ್ನು ಸಮಾಧಾನಪಡಿಸಿದ್ದರು. ಕೊನೆಗೆ ಅಂದಿನ ತಮಿಳುನಾಡು ಸಿಎಂ ಎಂಜಿಆರ್ ಕ್ಷಮೆ ಕೇಳಿದ್ದರು. ಆ ಘಟನೆಯನ್ನು ನಿರ್ಮಾಪಕ, ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರು ಆಗಿರುವ ಸಾರಾ ಗೋವಿಂದು ನೆನಪಿಸಿಕೊಂಡಿದ್ದಾರೆ.

"ಆಗ ಅಣ್ಣಾವ್ರ ನೇತೃತ್ವದಲ್ಲಿ ಗೋಕಾಕ್ ಚಳುವಳಿ ಯಶಸ್ವಿಯಾಗಿತ್ತು. ಬಳಿಕ ಎಂದಿನಂತೆ ಅವರು ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದರು. ಆಗ ಎ. ಕೆ ಸುಬ್ಬಯ್ಯ ಎಂದು ಜನತಾದಳದಲ್ಲಿ ಒಬ್ಬರು ಇದ್ದರು. ವಕೀಲರು ಕಮ್ ರಾಜಕಾರಣಿ. ಗೋಕಾಕ್ ಚಳುವಳಿ ಬಳಿಕ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗಿತ್ತು. ಆಗ 3 ಮತ್ತು 4ನೇ ದರ್ಜೆಯ ನೌಕಕರರಿಗೆ ಕನ್ನಡ ಕಡ್ಡಾಯವಾಗಿತ್ತು. ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಮಕೃಷ್ಣ ಹೆಗಡೆ ಅದನ್ನು ತೆಗೆದು ಹಾಕಿದ್ದರು. ಪರಭಾಷಿಕರು ಬಂದು ಇಲ್ಲಿ ಕೆಲಸ ಮಾಡಬಹುದು ಎನ್ನುವಂತಾಗಿತ್ತು. ಆಗ ಪತ್ರಿಕೆಗಳಲ್ಲಿ ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಚರ್ಚೆ ಶುರುವಾಗಿತ್ತು" ಎಂದು ಆ ಘಟನೆಯ ಆರಂಭವನ್ನು ಸಾರಾ ಗೋವಿಂದು ಮೆಲುಕು ಹಾಕಿದ್ದಾರೆ.
ಮಾತು ಮುಂದುವರೆಸಿದ ಸಾರಾ ಗೋವಿಂದು "ಕನ್ನಡದ ಮನೆಗೆ ಬೆಂಕಿ ಬಿದ್ದಿದೆ. ರಾಜ್‌ಕುಮಾರ್ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಆಗ ನಾವೆಲ್ಲಾ ಹೋರಾಟಕ್ಕೆ ಇಳಿದಿದ್ದೆವು. ಬೆಂಗಳೂರು ಬಂದ್ ಮಾಡಿ ದೊಡ್ಡ ಗಲಾಟೆ ಆಯಿತು. ಸರ್ಕಾರ ಈ ನಿರ್ಧಾರ ಹಿಂಪಡೆಯದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಅಣ್ಣಾವ್ರಿಂದ ಹೇಳಿಸಿದ್ದೆವು. ಇದು ದೊಡ್ಡ ರಾಜಕೀಯ ತಿರುವು ಪಡೆಯಿತು. ಆಗ ಎ. ಕೆ ಸುಬ್ಬಯ್ಯ ತಮಿಳುನಾಡಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಡಾ. ರಾಜ್‌ಕುಮಾರ್ ಹಾಗೂ ಅವರ ಹಿಂಬಾಲಕರು(ಅಭಿಮಾನಿಗಳು) ಪ್ರತಿಭಟನೆ ಮಾಡುತ್ತಿದ್ದಾರೆ. ತಮಿಳರ ಮೇಲೆ ದಬ್ಬಾಳಿಕೆ ನಡೆಸಿ ಕರ್ನಾಟಕದಲ್ಲಿ ಇರಲು ಬಿಡುತ್ತಿಲ್ಲ ಎಂದು ಹೇಳಿಕೆ ಕೊಟ್ಟುಬಿಟ್ಟರು. ಇದು ತಮಿಳರನ್ನು ಕೆರಳಿಸಿತ್ತು" ಎಂದು ವಿವರಿಸಿದ್ದಾರೆ.
"ನಮ್ಮವರೇ ಹೋಗಿ ಅಲ್ಲಿ ಸುದ್ದಿಗೋಷ್ಠಿ ನಡೆಸಿ ಇಂತಾದೊಂದು ಹೇಳಿಕೆ ಕೊಟ್ಟಾಗ ಅಲ್ಲಿನ ತಮಿಳರು ಮತ್ತಷ್ಟು ಗರಂ ಆಗಿದ್ದರು. ಅದೇ ಸಮಯದಲ್ಲಿ ಊಟಿಯಲ್ಲಿ 'ಯಾರಿವನು' ಸಿನಿಮಾ ಚಿತ್ರೀಕರಣ ನಡೀತಿತ್ತು. ಅಲ್ಲಿಗೆ ವಿದ್ಯಾರ್ಥಿ ಸಂಘಟನೆಯವರು ದಾಳಿ ಮಾಡಿದ್ದರು. 50ರಿಂದ 100 ಜನರ ಗುಂಪು ದಾಂಗುಡಿ ಇಟ್ಟು ಅಣ್ಣಾವ್ರ ಮೇಲೆ ಹಲ್ಲೆ ನಡೆಸಿದ್ದರು. ಕೂಡಲೇ ಅಲ್ಲಿದ್ದ ನಮ್ಮವರು ಅಣ್ಣಾವ್ರನ್ನು ರಕ್ಷಿಸಿ ಕಾರಿನಲ್ಲಿ ಕಳುಹಿಸಿಕೊಟ್ಟುಬಿಟ್ಟಿದ್ದರು. ಅಲ್ಲಿಂದ ಅಣ್ಣಾವ್ರು ಬೆಂಗಳೂರಿಗೆ ಬಂದುಬಿಟ್ಟರು. ವಿಷಯ ಗೊತ್ತಾಗಿ ರಾಜ್ಯದಲ್ಲಿ ಗಲಾಟೆ ಶುರುವಾಯಿತು. ಅದೇ ಸಮಯದಲ್ಲಿ 3 ದಿನಗಳ ಕಾಲ ನಿರಂತರ ಮನೆ ಬಂತು, ಅದರ ನಡುವೆಯೂ ಪ್ರತಿಭಟನೆಗಳು ನಡೆಯಿತು. ಆದರೆ ಬಳಿಕ ಅಣ್ಣಾವ್ರು ನನಗೆ ಏನು ಆಗಿಲ್ಲ, ಯಾರೂ ಕೂಡ ಬೇರೆಯವರಿಗೆ ತೊಂದರೆ ಮಾಡಬೇಡಿ ಅಭಿಮಾನಿಗಳು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದ್ದರು. ಅಣ್ಣಾವ್ರ ಮಾತಿಗೆ ಬೆಲೆಕೊಟ್ಟು ಅಭಿಮಾನಿಗಳು ಶಾಂತರಾಗಿದ್ದರು" ಎಂದು ಸಾರಾ ಗೋವಿಂದು ತಿಳಿಸಿದ್ದಾರೆ.

ಆ ಘಟನೆ ನಡೆದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಎಂಜಿಆರ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಹಾಗಾಗಿ ಘಟನೆಯ ಬಗ್ಗೆ ಅವರು ಕ್ಷಮೆ ಕೇಳಿದ್ದರು. ದೂರವಾಣಿ ಕರೆ ಮಾಡಿ ಡಾ. ರಾಜ್‌ಕುಮಾರ್ ಜೊತೆ ಘಟನೆ ಬಗ್ಗೆ ಮಾತನಾಡಿದ್ದರು. ಬಳಿಕ ಅಣ್ಣಾವ್ರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿ ಸಂಘಟನೆಯ ಕೆಲವರನ್ನು ಬಂಧಿಸಲಾಗಿತ್ತು. ಅಲ್ಲಿಗೆ ಎಲ್ಲವೂ ತಣ್ಣಗಾಯಿತು ಎಂದು ಸಾರಾ ಗೋವಿಂದು ಇಡೀ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
1984ರಲ್ಲಿ 'ಯಾರಿವನು' ಸಿನಿಮಾ ಮೂಡಿ ಬಂದಿತ್ತು. 'ಕಾವೇರಿ ಏಕೆ ಓಡುವೆ' ಹಾಡಿನ ಚಿತ್ರೀಕರಣದ ವೇಳೆ ಈ ಕಹಿ ಘಟನೆ ನಡೆದಿತ್ತು. ಆ ಬಳಿಕ ಅಣ್ಣಾವ್ರು ಮತ್ತೆ ಊಟಿಯಲ್ಲಿ ಚಿತ್ರೀಕರಣಕ್ಕೆ ಹೋಗಲಿಲ್ಲ ಎನ್ನಲಾಗುತ್ತದೆ. ಆ ಚಿತ್ರತಂಡದಲ್ಲಿದ್ದ ಕೆಲವರಿಗೂ ಆ ಘಟನೆ ದುಸ್ವಪ್ನವಾಗಿ ಕಾಡಿತ್ತು.
ಅಂದು ಸೈಕಲ್ ಚೈನ್ ಹಾಗೂ ರೇಜರ್ ಹಿಡಿದು ದುಷ್ಕರ್ಮಿಗಳು ಅಣ್ಣಾವ್ರ ಮೇಲೆ ದಾಳಿ ಮಾಡಿದ್ದರು. ಡಾ. ರಾಜ್‌ಕುಮಾರ್ ಬೆನ್ನಿನ ಮೇಲೆ ಗಂಭೀರವಾಗಿ ಪೆಟ್ಟಾಗಿತ್ತು. ಆದರೂ ನೋವು ನುಂಗಿ ಅಣ್ಣಾವ್ರು ಯಾವುದೇ ಗಲಾಟೆ ಆಗಬಾರದು, ಯಾರಿಗೂ ತೊಂದರೆ ಆಗಬಾರದು ಎಂದು ತಮಗೆ ಏನು ಆಗಲಿಲ್ಲ ಎಂದು ಹೇಳಿಕೆ ಕೊಟ್ಟು ಎಲ್ಲರನ್ನು ಸಮಾಧಾನಪಡಿಸಿದ್ದರು.
ಎ. ಸುಬ್ಬಯ್ಯ ಈ ಘಟನೆ ಅಣ್ಣಾವ್ರ ಅಭಿಮಾನಿಗಳ ವಿರೋಧ ಕಟ್ಟಿಕೊಳ್ಳುವಂತಾಗಿತ್ತು. ಇದರಿಂದ ಕೆಲ ದಿನಗಳ ಸಮಸ್ಯೆ ಎದುರಿಸುವಂತಾಗಿತ್ತು. ಬಳಿಕ ಎಲ್ಲವೂ ತಿಳಿಯಾಗಿತ್ತು. ಕೊಡಗಿನ ಮೂಲದ ಸುಬ್ಬಯ್ಯ ಜನಸಂಘದ ಮೂಲಕ ಬೆಳೆದು ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದರು. ವಕೀಲರಾಗಿದ್ದ ಅವರು ಮುಂದೆ ರಾಜಕಾರಣ ಆರಂಭಿಸಿದ್ದರು. ವಾಜಪೇಯಿ ಒಡನಾಟ ಬೆಳೆಸಿಕೊಂಡಿದ್ದರು. 1984ರಲ್ಲಿ 'ಕನ್ನಡ ನಾಡು' ಎಂಬ ಪ್ರಾದೇಶಿಕ ಪಕ್ಷ ಸಹ ಕಟ್ಟಿದ್ದರು.
ಸುಖಾಸುಮ್ಮನೆ ತಮಿಳರು ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಡುವುದು ಬಳಿಕ ವಿಷಾದ ವ್ಯಕ್ತಪಡಿಸುವ ಮಾತನಾಡುವುದು ಮಾಡುತ್ತಾರೆ. 'ಕಾಂಚಿ ತಲೈವನ್' ಚಿತ್ರದಲ್ಲಿ ಚಾಲುಕ್ಯರ ದೊರೆ ಇಮ್ಮಡಿ ಪುಲಿಕೇಶಿಯನ್ನು ತಪ್ಪಾಗಿ ಬಿಂಬಿಸಿದ್ದರು. ಚಾಲಕ್ಯರ ಧ್ವಜಕ್ಕೆ ಅಪಮಾನ ಮಾಡುವಂತಹ ಸನ್ನಿವೇಶಗಳು ಚಿತ್ರದಲ್ಲಿತ್ತು. ಈ ಬಗ್ಗೆ ಕರ್ನಾಟಕದಲ್ಲಿ ಪ್ರತಿಭಟನೆ ನಡೆದಾಗ ಕ್ಷಮೆ ಕೇಳಿ ಆ ದೃಶ್ಯಗಳನ್ನು ಚಿತ್ರದಿಂದ ತೆಗೆದು ಹಾಕಲಾಗಿತ್ತು.
ಕಾವೇರಿ ಹೋರಾಟದ ಸಮಯದಲ್ಲಿ ಕನ್ನಡಿಗರ ಬಗ್ಗೆ ನಟರಾದ ರಜನಿಕಾಂತ್ ಹಾಗೂ ಸತ್ಯರಾಜ್ ಉದ್ಧಟತನದ ಹೇಳಿಕೆ ಕೊಟ್ಟಿದ್ದರು. ಕನ್ನಡ ಹೋರಾಟಗಾರನ್ನು ಒದೆಯಬೇಕು, ಹೊಡೆಯಬೇಕು ಎಂದಿದ್ದರು. ಈ ಬಗ್ಗೆ ಪ್ರತಿಭಟನೆಗಳು ನಡೆದು ಆಕ್ರೋಶ ಹೆಚ್ಚಾಗಿತ್ತು. ಆಗ ಕರ್ನಾಟಕದಲ್ಲಿ ತಮ್ಮ ಸಿನಿಮಾಗಳ ಬಿಡುಗಡೆಗೆ ಸಮಸ್ಯೆ ಆದಾಗ ವಿಷಾದ ವ್ಯಕ್ತಪಡಿಸುವ ನಾಟಕ ಮಾಡಿದ್ದರು. ಇದೀಗ ಕಮಲ್ ಹಾಸನ್ ಕೂಡ ಕ್ಷಮೆ ಕೇಳದೇ ಮೊಂಡುವಾದ ಮುಂದುವರೆಸಿದ್ದಾರೆ.
ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳಲ್ಲ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ತಾವು ನಟಿಸಿರುವ 'ಥಗ್ ಲೈಫ್' ಚಿತ್ರ ಬಿಡುಗಡೆ ಆಗದಿದ್ದರೂ ಪರವಾಗಿಲ್ಲ, ನಾನು ಯಾವುದೇ ಬೆದರಿಕೆಗೆ ಹೆದರಲ್ಲ ಎಂದು ಕಮಲ್ ಹೇಳುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಭದ್ರತೆ ಒದಗಿಸುವಂತೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಕೂಡ ಅವರಿಗೆ ಹಿನ್ನಡೆಯಾಗಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ಕೊಟ್ಟಿರುವ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಕೋರ್ಟ್ ಸಹ ಹೇಳಿದೆ. ಕ್ಷಮೆ ಕೇಳಿದ ಬಳಿಕವೇ ಅರ್ಜಿಯ ವಿಚಾರಣೆ ಎಂದು ಕಿವಿಮಾತು ಹೇಳಿದೆ. ಆದರೂ ಕೂಡ ಕಮಲ್ ಹಾಸನ್ ತಲೆ ಕೆಡಿಸಿಕೊಳ್ಳುತ್ತಿಲ್ಲ.


Click it and Unblock the Notifications











