twitter
    For Quick Alerts
    ALLOW NOTIFICATIONS  
    For Daily Alerts

    ಶಿಸ್ತಿನ ಸಿಪಾಯಿ

    By *ಸತ್ಯನಾರಾಯಣ
    |

    ಚಿತ್ರ ನಿರ್ಮಾಣದಲ್ಲಿ ಶಿಸ್ತು ಇರಬೇಕು. ಕರೆಕ್ಟ್‌. ಶಿಸ್ತು ಇದ್ದರೆ ಎಲ್ಲಾ ಕೆಲಸಗಳು ಅಂದುಕೊಂಡಂತೆ ನಡೆಯುತ್ತದೆ. ಅದೂ ನಿಜಾನೇ. ಸಾ.ರಾ. ಗೋವಿಂದು ಅಂಥಾ ಗಳಲ್ಲಿ ಒಬ್ಬರು. ಅದನ್ನು ಸುಳ್ಳು ಅನ್ನುವ ಧೈರ್ಯ ಯಾರಿಗಿದೆ ?

    ಆದರೆ ಶಿಸ್ತು ಪಾಲನೆ ಸಾಧ್ಯವಾಗುವುದು ಹೇಗೆ ? ಫಿಲಂ ಛೇಂಬರ್‌ನ ನೂತನ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟರ ಪ್ರಕಾರ ಭಯ ಇರುವಲ್ಲಿ ಶಿಸ್ತು ಇರುತ್ತೆ. ಅವರ ಮಾತನ್ನು ಅಲ್ಲಗಳೆಯುವಂತೆ ಇಲ್ಲ. ಯಾಕೆಂದರೆ ಚಿತ್ರರಂಗದಲ್ಲಿ ಅವರ ಸರ್ವಿಸ್‌ ಮೂವತ್ತು ವರ್ಷ ದಾಟಿದೆ.

    ಸಾರಾ ಗೋವಿಂದು ಮುಖ ನೋಡಿದ್ರೇನೇ ಭಯ ಆಗುತ್ತದೆ" ಶೆಟ್ರು ಮಾತು ಮುಂದುವರಿಯುತ್ತದೆ. ' ಆದ ಕಾರಣ ಎಲ್ಲರೂ ಅವರ ಮಾತನ್ನು ಕೇಳುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ನನಗೂ ಅವರಿಂದ ಉಪಕಾರವಾಗಿದೆ. ಈಗಿನ ಕಾಲದಲ್ಲಿ ಹೀಗಿದ್ರೇನೇ ಸರಿ. ಸಾಲಿಗ್ರಾಮದಿಂದ ಬಂದ ಮೂವರ ಪೈಕಿ ಚಿನ್ನೇಗೌಡ, ಗೋವಿಂದ ರಾಜು ಅವರು ಸೌಮ್ಯವಾದಿಗಳಾಗಿದ್ದರೆ ಗೋವಿಂದು ಮಾತ್ರ ಕೊಂಚ ಉಗ್ರ. "

    ನಂಜುಂಡ ಶೆಟ್ಟರು ನಗು ನಗುತ್ತಾ ಮಾತನಾಡುತ್ತಿದ್ದರು. ಆದರೆ ಅವರ ಮಾತಿನ ಒಳಧ್ವನಿ ಎಲ್ಲರಿಗೂ ಅರ್ಥವಾಗುವಂತಿತ್ತು. ವೇದಿಕೆಯಲ್ಲಿದ್ದ ಗೋವಿಂದು ಕೂಡ ಕಷ್ಟಪಟ್ಟು ನಗುತ್ತಿದ್ದರು.

    ಕಳೆದ ಗುರುವಾರ ಬೆಂಗಳೂರಿನ ಆಚೆ ಇರುವ ಜೇಡ್‌ ಗಾರ್ಡನ್‌ನ ಕ್ಲಬ್‌ ಕಬಾನಾದಲ್ಲಿ ನಡೆದ ಗೋವಿಂದು ' ಚಿತ್ರೋತ್ಸವ"ದ ಹೈಲೈಟು ಇದು. ಆವತ್ತು ತ್ರೀ ಇನ್‌ ಒನ್‌ ಕಾರ್ಯಕ್ರಮ. ಕನಸುಗಾರ ಚಿತ್ರದ ಶತದಿನೋತ್ಸವ, ಮುತ್ತು ಚಿತ್ರದ ಕ್ಯಾಸೆಟ್‌ ಬಿಡುಗಡೆ ಹಾಗೂ ಹೊಸ ಚಿತ್ರ 'ಚಂದು"ವಿನ ಮುಹೂರ್ತ. ಈ ಮೂರೂ ಚಿತ್ರಗಳೂ ಗೋವಿಂದು ಅವರದೇ.

    ಯಶಸ್ಸಿನ ಏಣಿಯ ನಾಲ್ಕು ಮೆಟ್ಟಿಲು ದಾಟಿದ ಕೂಡಲೇ ಮನುಷ್ಯನ ಆದ್ಯತೆಗಳು ಬದಲಾಗುತ್ತವೆ ಅನ್ನೋದಕ್ಕೆ ಗೋವಿಂದು ಸಾಕ್ಷಿಯಂತಿದ್ದರು. ವೇದಿಕೆ ಮತ್ತು ಮೈಕ್‌ ಸಿಕ್ಕಾಕ್ಷಣ ರಾಜ್‌ಕುಮಾರ್‌ ಭಜನೆ ಮಾಡುತ್ತಿದ್ದ ಗೋವಿಂದು ಆವತ್ತು ಫಾರ್‌ ಎ ಚೇಂಜ್‌ ಗೋವಿಂದರಾಜ್‌ ಭಜನೆ ಮಾಡಿದರು. ಸಾಲಿಗ್ರಾಮದಿಂದ ತಮ್ಮನ್ನು ಕರೆತಂದು, ತುತ್ತು ಅನ್ನ ಹಾಕಿ, ಕೆಲಸವನ್ನೂ ಕೊಡಿಸಿ, ಈ ಹಂತಕ್ಕೆ ತಂದವರೇ ಗೋವಿಂದರಾಜ್‌ ಎಂದರು.

    ಚಪ್ಪಾಳೆ ಹೊಡೆದ ಕೈಗಳನ್ನು ಮರೆಯಬಹುದು. ಆದರೆ ಕೈ ಹಿಡಿದು ಮೇಲೆತ್ತಿದ ಕೈಗಳನ್ನು ಮರೆಯಬಾರದು ಎಂದು ಗೋವಿಂದು ಅಪ್ಪಣೆ ಕೊಡಿಸುತ್ತಿದ್ದಂತೆ ಅಲ್ಲಿ ನೇರಿದ ನೂರಾರು ಜನ ಚಪ್ಪಾಳೆ ಹೊಡೆಯುವುದನ್ನೇ ಮರೆತರು. ರಾಜ್‌ಕುಮಾರ್‌ ಅಭಿಮಾನಿ ಸಂಘದ ಕಾಯಂ ಅಧ್ಯಕ್ಷರ ಬಾಯಿಂದ ಇಂಥಾ ಅಣಿಮುತ್ತುಗಳು ಬಂದರೆ ಯಾರಿಗೇ ಆದರೂ ಗಾಬರಿಯಾಗುವುದು ಸಹಜ. ಆದರೆ ಗೋವಿಂದು ಬಹಳ ಪ್ರಾಕ್ಟಿಕಲ್‌ ಮನುಷ್ಯ. ಅವರಿಗೆ ಈಗ ಯಾರ ಹಂಗೂ ಬೇಕಿಲ್ಲ. ಕನಸುಗಾರ ಚಿತ್ರದಲ್ಲಿ ಕೋಟಿ ಲಾಭ ಗಳಿಸಿದ್ದಾಗಿದೆ. ಕನ್ನಡದ ಸ್ಟಾರ್‌ಗಳ ಕಾಲ್‌ಷೀಟ್‌ ಪಡೆಯುವುದು ಅವರಿಗೆ ದೊಡ್ಡ ಕೆಲಸವೇನಲ್ಲ. ಉಪೇಂದ್ರನನ್ನು ಮುಂದಿನ ಚಿತ್ರಕ್ಕೆ ಬುಕ್‌ ಮಾಡಿಕೊಂಡಿದ್ದಾಗಿದೆ. ಸದ್ಯಕ್ಕೆ ಅತಿ ಹೆಚ್ಚಿನ ಬೇಡಿಕೆಯಲ್ಲಿರುವ ನಟ ಸುದೀಪ್‌ ಚಂದು ಚಿತ್ರದ ನಾಯಕ. ಶಿವರಾಜ್‌ಕುಮಾರ್‌ ಕಾಲ್‌ ಷೀಟ್‌ ಸಿಕ್ಕರೂ ಗೋವಿಂದುಗೆ ಬೇಕಾಗಿಲ್ಲ. ಯಾಕೆಂದರೆ ಅವರೀಗ ಫ್ಲಾಪ್‌ ಹೀರೋ. ಹಾಗಿರುವಾಗ ನೀನ್ಯಾಕೋ ನಿನ್ನ ಹಂಗ್ಯಾಕೋ ಎಂದು ದಾಸರ ಪದ ಹಾಡುವುದರಲ್ಲಿ ತಪ್ಪೇನಿದೆ ?

    ಆವತ್ತಿನ ಸಂಜೆ ಸಾಲಿಗ್ರಾಮದ ಸ್ನೇಹಿತರ ಪುನರ್ವಿಲನಕ್ಕೂ ಸಾಕ್ಷಿಯಾಗಿತ್ತು. ರಾಜ್‌ ಕ್ಯಾಂಪ್‌ನಿಂದ ಹೊರಬಿದ್ದ ನಂತರ ಚಿನ್ನೇಗೌಡರು ಮನೆಯಾಚೆ ಬಂದಿದ್ದೇ ಕಡಿಮೆ. ಅವರು ಸ್ವತಂತ್ರವಾಗಿ ನಿರ್ಮಿಸಿದ ನಾಲ್ಕು ಚಿತ್ರಗಳು ನೆಲಕಚ್ಚಿದ್ದವು. ರಾಜ್‌ ಕಂಪನಿಯಲ್ಲಿದ್ದಾಗ ದುಡಿದ ಹಣ ಕರಗಿ ಅವರು ಸಾಲಗಾರನಾಗಿದ್ದರು. ಎಸ್‌. ಎ. ಗೋವಿಂದರಾಜು ಕೂಡ ರಾಜ್‌ ಕೃಪಾಕಟಾಕ್ಷವನ್ನು ಕಳಕೊಂಡಿದ್ದರು. ವೀರಪ್ಪನ್‌ ಕೈಗೆ ಮಾವ ಅಳಿಯಂದಿರಿಬ್ಬರೂ ಜೊತೆಯಾಗಿ ಸಿಕ್ಕಿದ್ದರಿಂದ ಮಾವ ಅಳಿಯನ ಸಂಬಂಧ ಸ್ವಲ್ಪ ಸುಧಾರಿಸಿತ್ತು. ಆದರೆ ಕಳೆದ ಐದಾರು ವರ್ಷಗಳಲ್ಲಿ ಗೋವಿಂದು, ಗೋವಿಂದರಾಜ್‌ ಮತ್ತು ಚಿನ್ನೇಗೌಡರನ್ನು ಒಂದೇ ವೇದಿಕೆಯಡಿ ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿರಲಿಲ್ಲ. ಪರಿಸ್ಥಿತಿಯ ಪಿತೂರಿಯಿಂದ ಅದು ಸಾಧ್ಯವಾಗಿದೆ. ಈಗ ಚಿನ್ನೇಗೌಡರು ಫಿಲಂ ಚೇಂಬರ್‌ ಪದಾಧಿಕಾರಿ, ಜೊತೆಗೆ ಮಗನನ್ನೂ ಹೀರೋ ಆಗಿಸುವ ಪ್ರಯತ್ನದಲ್ಲಿದ್ದಾರೆ. ಅತ್ತ ಕಡೆ ಪುನೀತ್‌ ಹೀರೋ ಆಗುತ್ತಿದ್ದರೆ, ಅದೇ ಹೊತ್ತಿಗೆ ಇಲ್ಲಿ ಗೌಡರ ಪುತ್ರ ವಿಜಯ ರಾಘವೇಂದ್ರ ನಾಯಕ ಪಟ್ಟವೇರುತ್ತಿದ್ದಾನೆ. ಹಾಗಿರುವಾಗ ಗೌಡರ ಕೈ ಬಲಪಡಿಸಲು ಸಾಲಿಗ್ರಾಮದ ಬಂಧುಗಳು ಹಾತೊರೆಯುತ್ತಿರುವುದು ಸಹಜವೇ ಆಗಿದೆ.

    ' ಅಂದ ಹಾಗೆ ನಾವೆಲ್ಲರೂ ರಾಜ್‌ ಹಾಕಿದ ಮಾರ್ಗದಲ್ಲೇ ನಡೆಯುತ್ತೇವೆ "ಎನ್ನುವುದರೊಂದಿಗೆ ಗೋವಿಂದು ಭಾಷಣ ಮುಕ್ತಾಯ ಗೊಂಡಿತು.

    English summary
    Sa.Ra. Govingu away from remake , Chandu starring Sudeep
    Monday, July 8, 2013, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X