14 ವರ್ಷ,2ಚಿತ್ರ,ಸಾರಥಿ vs ಡೆವಿಲ್ ; ದರ್ಶನ್ ಗೈರು ಹಾಜರಾತಿ - ಅಭಿಮಾನಿಗಳನ್ನು ಹೆಚ್ಚು ಸೆಳೆದ ಸಿನಿಮಾ ಯಾವುದು?
ತಮ್ಮ ಆಪ್ತ ವಲಯ ಮತ್ತು ಹೊಸಬರ ಚಿತ್ರಕ್ಕೆ ತಮ್ಮ ಚಿತ್ರಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಶೇಷತೆ. ಕೆಲ ಒಮ್ಮೆ ತಮ್ಮ ಚಿತ್ರಕ್ಕೆ ಕೊಡದಷ್ಟು ಮಹತ್ವವನ್ನು ಬೇರೆಯವರಿಗೆ ದರ್ಶನ್ ಕೊಡೋದಿದೆ. ಆದರೆ, ದರ್ಶನ್ ಅವರ ವಿಚಾರದಲ್ಲಿ ಚಿತ್ರರಂಗದ ಹಲವರು ಮೌನಕ್ಕೆ ಶರಣಾಗುತ್ತಾರೆ. ಅದರಲ್ಲಿಯೂ ರೇಣುಕಾಸ್ವಾಮಿ ಪ್ರಕರಣದ ನಂತರ ದರ್ಶನ್ ವಿಚಾರ ಹಲವರ ಪಾಲಿಗೆ ಬಿಸಿ ತುಪ್ಪವಾಗಿದೆ.
ಇನ್ನೂ.. ಕಳೆದ ವರ್ಷ ದರ್ಶನ್ ಪರಪ್ಪನ ಅಗ್ರಹಾರದ ಪಾಲಾದಾಗ ಕೆಲವರು ತಮ್ಮಿಂದ ಸಹಾಯ ಪಡೆದು ಕಷ್ಟಕಾಲದಲ್ಲಿ ನೋಡಲು ಬರಲಿಲ್ಲ ಎಂದು ದರ್ಶನ್ ಅಂದುಕೊಂಡರೆ ಎಂಬ ಭಯದಲ್ಲಾದರೂ ಓಡಿಕೊಂಡು ಬಂದು ದರ್ಶನ ಪಡೆದು ಹೋಗಿದ್ದರು. ಮತ್ತೂ ಕೆಲವರು ದರ್ಶನ್ ಹೊರ ಬಂದ ಮೇಲೆ ಯಾರೆಲ್ಲ ಬಂದಿಲ್ಲ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದರೆ ಏನು ಗತಿ ಎಂದು ಹೆದರಿಕೊಂಡು ಕೂಡ ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬಂದಿದ್ದರು.

ಆದರೆ ಈ ಬಾರಿ ದರ್ಶನ್ ಅವರಿಂದ ಒಂದು ಕಾಲದಲ್ಲಿ ಸಹಾಯ ಪಡೆದ ಹಲವರನ್ನು ದುರ್ಬಿನ್ ಹಾಕಿಕೊಂಡು ಹುಡುಕಿದರೂ ಕೂಡ ಯಾರಿಗೂ ಕಣ್ಣಿಗೆ ಕಾಣ್ತಿಲ್ಲ. ಬದಲಿಗೆ ಈ ಹಿಂದೆ ಕಾಣಿಸಿದಂತೆ ದರ್ಶನ್ ಅವರ ಸುತ್ತ ಕಾಣಿಸುತ್ತಿರುವುದು ಕೇವಲ ಅವರ ಅಭಿಮಾನಿಗಳು ಮಾತ್ರ. ಅಂದು-ಇಂದು-ಮುಂದೆಂದೂ ನಿಮ್ಮ ಜೊತೆಯೇ ಎಂದು ದರ್ಶನ್ ಅವರಿಗೆ ಮೊದಲಿಂದ ಹೇಳಿಕೊಂಡು ಬಂದೇ ಇದೇ ಅಭಿಮಾನಿಗಳು ಇಂದು ದರ್ಶನ್ ಅನುಪಸ್ಥಿತಿಯಲ್ಲಿ ಕರುನಾಡಿನೆಲ್ಲೆಡೆ ''ಡೆವಿಲ್'' ಜಾತ್ರೆ ಮಾಡಿದ್ದಾರೆ. ತಮ್ಮ ನೆಚ್ಚಿನ ನಾಯಕನ ಚಿತ್ರಕ್ಕೆ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಹಲವರು ರಾತ್ರಿಯೆಲ್ಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸ್ಟಾರ್ ಕಟ್ಟಿದ್ದಾರೆ. ದೊಡ್ಡ ಗಾತ್ರದ ಹಾರ ಹಾಕಿದ್ದಾರೆ. ಹಾಲಿನ ಅಭಿಷೇಕ ಮಾಡಿ ಸಂಭ್ರಮ ಪಟ್ಟಿದ್ದಾರೆ. ಬೆಳ್ಳಂ ಬೆಳಿಗ್ಗೆಯೇ ಇಂದು ( ಡಿಸೆಂಬರ್ 11 ) ಬೆಳ್ಳಿತೆರೆಯಲ್ಲಿ ''ಡೆವಿಲ್'' ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದೇ ತರಹದ ವಾತಾವರಣ 14 ವರ್ಷದ ಹಿಂದೆ ನಿರ್ಮಾಣವಾಗಿತ್ತು. ''ಸಾರಥಿ'' ಚಿತ್ರ ಕೂಡ ದರ್ಶನ್ ಗೈರು ಹಾಜರಾತಿಯಲ್ಲಿಯೇ ಬೆಳ್ಳಿತೆರೆಯಲ್ಲಿ ಧಗಧಗಿಸಿತ್ತು.
ನಿಜಾ .. ''ಸಾರಥಿ'' ಮತ್ತು ''ಡೆವಿಲ್'' ಎರಡು ಬೇರೆ ಜಾನರ್‌ನ ಚಿತ್ರಗಳು. ಇನ್ನು ಎರಡು ಚಿತ್ರಗಳು ಬಿಡುಗಡೆಯಾದ ಕಾಲ ಬೇರೆ. ಈ ಒಂದೂವರೆ ದಶಕದಲ್ಲಿ ಚಿತ್ರ ಹೇಳುವ ಶೈಲಿಯಲ್ಲಿ ಬದಲಾವಣೆಗಿದೆ. ಆದರೂ ಕೂಡ ಎರಡು ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ದರ್ಶನ್ ಇರದ ಹಿನ್ನೆಲೆ ಎರಡರಲ್ಲಿ ಮೊದಲ ಆಯ್ಕೆ ಯಾವುದು..? ಇಂದು ( ಡಿಸೆಂಬರ್ 11 ) ಬಿಡುಗಡೆಯಾದ ಡೆವಿಲ್ ಚಿತ್ರ ಹೇಗಿದೆ..? ಚಿತ್ರದಲ್ಲಿ ಇಷ್ಟವಾದ ಅಂಶ ಯಾವುದು..? ಎಂದು ತಿಳಿಯುವ ಪ್ರಯತ್ನವನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ತಂಡ ಅಭಿಮಾನಿಗಳಿಂದ ತಿಳಿಯುವ ಪ್ರಯತ್ನ ಮಾಡಿತ್ತು. ''ಡೆವಿಲ್'' ಚಿತ್ರದ ಕುರಿತು ಪ್ರಾಮಾಣಿಕ ವಿಮರ್ಶೆ ತಿಳಿದುಕೊಳ್ಳುವ ದಿಸೆಯಲ್ಲಿ ದರ್ಶನ್ ಅವರ ಅಪ್ಪಟ ಅಭಿಮಾನಿಗಳನ್ನು ಕೂಡ ಸಂಪರ್ಕ ಮಾಡಿತ್ತು. ಹೀಗೆ ಸಂಪರ್ಕ ಮಾಡಿದಾಗ ದಾಖಲಾದ ಕೆಲ ಅಭಿಮಾನಿಗಳ ಮನದ ಮಾತು ಇಲ್ಲಿವೆ.
ಪೈಸಾ ವಸೂಲ್ ಸಿನಿಮಾ
ದರ್ಶನ್ ಜೈಲು ಪಾಲಾದ ನಂತರ ಚಿತ್ರಮಂದಿರದಿಂದ ವಿಮುಖರಾದ ಪ್ರೇಕ್ಷಕರಲ್ಲಿ ಒಬ್ಬರಾದ ಅತ್ತಿಗುಪ್ಪೆ ನಿವಾಸಿ ಜನಾರ್ಧನ್, ಒಂದು -ಒಂದೂವರೆ ವರ್ಷದ ನಂತರ ಚಿತ್ರಮಂದಿರಕ್ಕೆ ತೆರಳಿದ್ದರು. ಬೆಳಗ್ಗೆ ಆರು ಗಂಟೆಗೆ ಬೆಂಗಳೂರಿನ ಸುಕಂದಕಟ್ಟೆಯ ಮೋಹನ್ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿದರು. ಆ ನಂತರ ತಮ್ಮ ಮನದ ಮಾತುಗಳನ್ನು ಕೂಡ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡರು.

''ಡೆವಿಲ್'' ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಜನಾರ್ಧನ್ ಬೆಳ್ಳಿಪರದೆಯಲ್ಲಿ ಎರಡು ವರ್ಷಗಳ ನಂತರ ದರ್ಶನ್ ಅವರನ್ನು ನೋಡಿ ತುಂಬಾ ಖುಷಿಯಾಯ್ತು ಎಂದು ಹೇಳಿದ್ದಾರೆ. ಚಿತ್ರದ ಮೊದಲಾರ್ಧ ಚೂರು ಬೋರ್ ಆಯ್ತು ಆದರೆ ವ್ಯೆಯಕ್ತಿಕವಾಗಿ ನನಗೆ ಚಿತ್ರದ ಸೆಕೆಂಡ್ ಹಾಫ್ ತುಂಬಾ ಇಷ್ಟವಾಯ್ತು ಎಂದು ಹೇಳಿರುವ ಜನಾರ್ಧನ್ ಚಿತ್ರದಲ್ಲಿ ಟ್ವಿಸ್ಟ್ & ಟರ್ನ್ ಚೆನ್ನಾಗಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ದರ್ಶನ್ ಅವರನ್ನು ಹೊರತು ಪಡಿಸಿದರೆ ಅಚ್ಯುತ್ ರಾವ್ ಅವರ ಅಭಿನಯ ಸೊಗಸಾಗಿದೆ ಎಂದು ಹೇಳಿದ್ದಾರೆ. ಚಿತ್ರದ ಹಾಡುಗಳಲ್ಲಿ ಇದ್ರೆ ನೆಮ್ಮದಿಯಾಗಿರಬೇಕ್ ಹಾಡು ಖುಷಿ ಕೊಡ್ತು ಎಂದು ಹೇಳಿದ್ದಾರೆ.
ಸಾರಥಿ ವರ್ಸಸ್ ಡೆವಿಲ್ ? ಯಾವುದು ನಿಮ್ಮ ಆಯ್ಕೆ ?
ಇನ್ನೂ ಸಾರಥಿ ಮತ್ತು ಡೆವಿಲ್ ಈ ಎರಡಲ್ಲಿ ಯಾವುದು ಇಷ್ಟವಾಯ್ತು ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಜನಾರ್ಧನ್, ಎರಡರಲ್ಲಿ ಒಂದು ಆಯ್ಕೆ ಮಾಡುವುದು ಕಷ್ಟ ಆದರೂ ''ಸಾರಥಿ'' ನನಗೆ ಇಷ್ಟ ಎಂದು ಹೇಳಿದ್ದಾರೆ. ''ಸಾರಥಿ''ಯಲ್ಲಿ ಭಾವನಾತ್ಮಕವಾದ ದೃಶ್ಯಗಳಿದ್ದವು.. ತಾಯಿ-ಮಗನ ಸಂಬಂಧದ ಕತೆ ಇತ್ತು.. ''ಸಾರಥಿ'' ಚಿತ್ರಕ್ಕೆ ಹೋಲಿಸಿದರೆ ''ಡೆವಿಲ್''ನಲ್ಲಿ ಸೆಂಟಿಮೆಂಟ್ ದೃಶ್ಯಗಳು ಕಡಿಮೆ ಇವೆ ಆದರೂ ಕೂಡ ಅಭಿಮಾನಿಗಳಿಗೆ ''ಡೆವಿಲ್'' ಹಬ್ಬದೂಟ ಎಂದು ಹೇಳಿದ್ದಾರೆ.

ಡಬಲ್ ಆಕ್ಟಿಂಗ್‌ನಲ್ಲಿ ಬಾಸ್ ಬೆಂಕಿ
ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ''ಡೆವಿಲ್'' ಚಿತ್ರದಲ್ಲಿ ದರ್ಶನ್ ಅವರದ್ದು ದ್ವೀಪಾತ್ರ. ಒಂದು ಕಡೆ ಧನುಷ್ ಮತ್ತೊಂದು ಕಡೆ ಕೃಷ್ಣ. ಎರಡು ವಿಭಿನ್ನ ಮ್ಯಾನರಿಸಂನ ಪಾತ್ರವನ್ನು ದರ್ಶನ್ ಮಾಡಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಮೂಡಲಪಾಳ್ಯದ ನಿವಾಸಿ ನಂದೀಶ್, ಚಿತ್ರದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸುವುದು ಕಷ್ಟ. ಆದರೆ.. ದರ್ಶನ್ ಅವರು ಎರಡು ಪಾತ್ರವನ್ನು ತುಂಬಾನೇ ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಅದರಲ್ಲಿಯೂ ''ಡೆವಿಲ್'' ಪಾತ್ರದಲ್ಲಿ ಅವರ ವಾಯ್ಸ್ ಮತ್ತು ಸ್ಟೈಲ್ ತುಂಬಾನೇ ಚೆನ್ನಾಗಿದೆ ಎಂದು ಹೇಳಿರುವ ನಂದೀಶ್ ಮೊದಲ ಚಿತ್ರವಾದರೂ ರಚನಾ ರೈ ಚೆನ್ನಾಗಿ ಅಭಿನಯಿಸಿದ್ದಾರೆ. ತೆರೆಯ ಮೇಲೆ ಚೆನ್ನಾಗಿ ಕಾಣಿಸುತ್ತಾರೆ ಎಂದು ಕೂಡ ಹೇಳಿದ್ದಾರೆ. ಗಿಲ್ಲಿ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇಲ್ಲವಾದರೂ ಅವರ ಕಾಮಿಡಿ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಇನ್ನೂ ''ಸಾರಥಿ'' ಮತ್ತು ''ಡೆವಿಲ್'' ಈ ಎರಡು ಚಿತ್ರದಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಕೇಳಲಾದ ಪ್ರಶ್ನೆಗೆ ನಂದೀಶ್ ಕೂಡ ''ಸಾರಥಿ''ಗೆ ಜೈ ಎಂದು ಹೇಳಿದ್ದಾರೆ. ಈ ಎರಡು ಚಿತ್ರಗಳಲ್ಲಿ ನಿಮ್ಮ ನೆಚ್ಚಿನ ಚಿತ್ರ ಯಾವುದು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.


Click it and Unblock the Notifications











