ಉಪಗ್ರಹಕ್ಕೆ ಪುನೀತ್ ರಾಜ್‌ಕುಮಾರ್ ಹೆಸರು!
ಪುನೀತ್ ರಾಜ್‌ಕುಮಾರ್ ಅಗಲಿ ನಾಲ್ಕು ತಿಂಗಳಾಗಿವೆ. ಈವರೆಗೆ ರಾಜ್ಯದ ಹಲವು ರಸ್ತೆ, ವೃತ್ತಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರು ಇಡಲಾಗಿದೆ. ಬಿಬಿಎಂಪಿ ಸಹ 12 ಕಿ.ಮೀ ಉದ್ದ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರನ್ನು ಅಧಿಕೃತವಾಗಿ ಇಟ್ಟಿದೆ.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಪಗ್ರಹ (ಸ್ಯಾಟಲೈಟ್)ಗೆ ಪುನೀತ್ ರಾಜ್‌ಕುಮಾರ್ ಹೆಸರು ಇಡಲಾಗಿದೆ. ವಿಶೇಷವೆಂದರೆ ಈ ಉಪಗ್ರಹವನ್ನು ವಿದ್ಯಾರ್ಥಿಗಳೇ ತಯಾರು ಮಾಡಿ ನಭಕ್ಕೆ ಹಾರಿಸುತ್ತಿದ್ದಾರೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಹಂಚಿಕೊಂಡಿದ್ದಾರೆ.
ಇಂದು ರಾಷ್ಟ್ರೀಯ ವಿಜ್ಞಾನ ದಿನವಾಗಿದ್ದ ಇದರ ಪ್ರಯುಕ್ತ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75ನೇ ವರ್ಷ ಆದ ಹಿನ್ನೆಲೆಯಲ್ಲಿ, ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹ ರಾಜ್ಯ ಸರ್ಕಾರದ ಸಹಕಾರದಲ್ಲಿ ತಯಾರಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳು ಇದನ್ನು ನಿರ್ಮಿಸುತ್ತಿದ್ದು, ರಾಜ್ಯ ಸರ್ಕಾರವೇ ಇದಕ್ಕೆ ಹಣ ಒದಗಿಸುತ್ತಿದೆ ಎಂದರು.

''ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹವನ್ನು ರಾಜ್ಯ ಸರ್ಕಾರದ ಸಹಕಾರದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ನಿರ್ಮಿಸುತ್ತಿದ್ದು, ಇದಕ್ಕೆ 1.90 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ'' ಎಂದರು.
ಈ ಉಪಗ್ರಹವು 1.50 ಕೆ.ಜಿ. ತೂಕವಿರಲಿದ್ದು, ಯೋಜನೆಯ ಗ್ರೌಂಡ್ ಸ್ಟೇಷನ್ ಕೂಡ ಮಲ್ಲೇಶ್ವರದ ಇದೇ ಕಾಲೇಜಿನ ಆವರಣದಲ್ಲಿ ಇರಲಿದೆ. ಎಲ್ಲ ನಿರ್ವಹಣೆಯೂ ಇಲ್ಲಿಂದಲೇ ಆಗಲಿದೆ. ಯೋಜನೆಗೆ 20 ಸರ್ಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ. ಈ ಉಪಗ್ರಹ ನಿರ್ಮಾಣ ಯೋಜನೆಯ ಗ್ರೌಂಡ್ ಸ್ಟೇಷನ್ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲೇ ಇರಲಿದೆ.
ಈ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಆನ್-ಲೈನ್, ಆಫ್-ಲೈನ್, ಹ್ಯಾಂಡ್ಸ್-ಆನ್ ಮತ್ತು ಟ್ಯುಟೋರಿಯಲ್ ಮಾದರಿಗಳಲ್ಲಿ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜತೆಗೆ, ಎರಡೂ ಭಾಷೆಗಳಲ್ಲಿ ಅಗತ್ಯ ಪಠ್ಯಗಳ ವೆಬ್-ಲಿಂಕ್ ಒದಗಿಸಲಾಗುವುದು. ಈ ಸಂಬಂಧದ ತರಗತಿಗಳು ಏಪ್ರಿಲ್ 22ರಿಂದ ಆರಂಭವಾಗಲಿವೆ ಎಂದು ಅವರು ಮಾಹಿತಿ ನೀಡಿದರು. ಈ ತರಬೇತಿಯಲ್ಲಿ ಉಪಗ್ರಹ ಪೇಲೋಡ್ ತಿಳಿವಳಿಕೆ, ನ್ಯಾನೋ ಉಪಗ್ರಹಗಳ ಪರಿಚಯ, ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ, ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ, ವಿಜ್ಞಾನಿಗಳೊಂದಿಗೆ ಸಂವಾದ, ಗ್ರೌಂಡ್ ಸ್ಟೇಷನ್ ನಲ್ಲಿ ತರಬೇತಿ, ಅಗತ್ಯ ಪುಸ್ತಕಗಳ ಪ್ರಕಟಣೆ ಮುಂತಾದ ಚಟುವಟಿಕೆಗಳು ಇರಲಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಮತ್ತು ಭಾರತೀಯ ತಂತ್ರಜ್ಞಾನ ಸಮಾವೇಶ ಒಕ್ಕೂಟ (ಐಟಿಸಿಎ) ಮಾಡಿಕೊಂಡ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು.


Click it and Unblock the Notifications











