ಮತ್ತೆ ಬರ್ತಿದ್ದಾನೆ 'ಅಯೋಗ್ಯ'; ರಚ್ಚುಗೆ ಹೊಸ ಬಿರುದು ಕೊಟ್ಟ ಟೀಂ
ಕನ್ನಡದಲ್ಲಿ 6 ವರ್ಷಗಳ ಹಿಂದೆ ಬಂದಿದ್ದ 'ಅಯೋಗ್ಯ' ಸಿನಿಮಾ ಸೂಪರ್ ಹಿಟ್ ಆಗಿತ್ತು. ನೀನಾಸಂ ಸತೀಶ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದರು. ಹಾಸ್ಯದ ಲೇಪನದೊಂದಿಗೆ ಒಂದು ಹಳ್ಳಿ ಸೊಗಡಿನ ಲವ್‌ಸ್ಟೋರಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಬಹಳ ದಿನಗಳಿಂದ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ನಡೀತಿತ್ತು.
ಇದೀಗ ನಿರ್ದೇಶಕ ಮಹೇಶ್ ಕುಮಾರ್ ಮತ್ತೆ 'ಅಯೋಗ್ಯ'ನನ್ನು ಕರೆ ತರುತ್ತಿದ್ದಾರೆ. ಅರ್ಥಾತ್ ಚಿತ್ರದ ಸೀಕ್ವೆಲ್ ಖಚಿತವಾಗಿದೆ. ಸ್ಪೆಷಲ್ ವೀಡಿಯೋ ಮೂಲಕ ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಚಿತ್ರಕ್ಕೆ ಮೂವರು ಸಹಿ ಮಾಡಿರುವ ಸ್ಪೆಷಲ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಡಿಸೆಂಬರ್ 11ಕ್ಕೆ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

'ಅಯೋಗ್ಯ' ಚಿತ್ರದ ಹಾಡುಗಳು ಇವತ್ತಿಗೂ ಜನಪ್ರಿಯವಾಗಿದೆ. ಅರ್ಜುನ್ ಜನ್ಯಾ ಟ್ಯೂನ್, ಚೇತನ್ ಕುಮಾರ್ ಸಾಹಿತ್ಯ ಮಾಡಿದ್ದ ಮೋಡಿ ಅಂಥಾದ್ದು. ಹೆಚ್ಚು ಕಮ್ಮಿ ಆ ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಸೀಕ್ವೆಲ್‌ಗೆ ಕೈ ಹಾಕಿದೆ. ನಿರ್ಮಾಪಕರು ಮಾತ್ರ ಬದಲಾಗಿದ್ದಾರೆ. ಎಸ್‌ವಿಸಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮುನೇ ಗೌಡ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ವಿಶ್ವಜಿತ್ ರಾವ್ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ 'ಅಯೋಗ್ಯ-2' ಚಿತ್ರಕ್ಕೆ ಇರಲಿದೆ. ಮಹೇಶ್ ಕುಮಾರ್ ಚೊಚ್ಚಲ ಪ್ರಯತ್ನದಲ್ಲೇ 'ಅಯೋಗ್ಯ' ಸಿನಿಮಾ ಮಾಡಿ ಗೆದ್ದಿದ್ದರು. ಬಳಿಕ ಶ್ರೀಮುರಳಿ ನಟನೆಯ 'ಮದಗಜ' ಚಿತ್ರ ಕಟ್ಟಿಕೊಟ್ಟಿದ್ದರು. ಬಳಿಕ ಅಭಿಷೇಕ್ ಅಂಬರೀಶ್ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ ಅದನ್ನು ಪಕ್ಕಕ್ಕಿಟ್ಟು ತಮಗೆ ಹಿಟ್ ಕೊಟ್ಟ ಚಿತ್ರದ ಕಥೆ ಮುಂದುವರೆಸಲಿದ್ದಾರೆ.
'ಅಯೋಗ್ಯ' ಚಿತ್ರದಲ್ಲಿ ಮಂಡ್ಯ ಹೈದ ಸಿದ್ದೇಗೌಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲುವ ಕಥೆ ಇತ್ತು. ಹಾಲಿ ಪಂಚಾಯ್ತಿ ಸದಸ್ಯ ಬಚ್ಚೇಗೌಡ(ಆರ್ಮುಗ ರವಿಶಂಕರ್)ನನ್ನು ಸೋಲಿಸುವಲ್ಲಿ ಸಿದ್ದೇಗೌಡ ಗೆದ್ದಿದ್ದ. ಜೊತೆಗೆ ನಂದಿನಿ(ರಚಿತಾ ರಾಮ್)ಯನ್ನು ಮದುವೆ ಕೂಡ ಆಗಿದ್ದ. ಅಲ್ಲಿಂದ ಮುಂದೆ ಕಥೆ ಏನು ಎನ್ನುವುದನ್ನು ಮಹೇಶ್ ಸೀಕ್ವೆಲ್‌ನಲ್ಲಿ ಹೇಳಲು ಹೊರಟಿದ್ದಾರೆ.
ಒಂದೊಳ್ಳೆ ಬ್ರೇಕ್‌ಗಾಗಿ ನೀನಾಸಂ ಸತೀಶ್ ಕಾಯುತ್ತಿದ್ದಾರೆ. ಹಾಗಾಗಿ ಮತ್ತೆ ಸಿದ್ದೇಗೌಡನಾಗಿ ಪ್ರೇಕ್ಷಕರನ್ನು ರಂಜಿಸುವ ಲೆಕ್ಕಾಚಾರದಲ್ಲಿದ್ದಾರೆ. ಕನ್ನಡದಲ್ಲಿ ಆಗೊಂದು ಈಗೊಂದು ಸೀಕ್ವೆಲ್ ಸಿನಿಮಾಗಳು ಬರ್ತಿವೆ. ಅದೇ ಸಾಲಿಗೆ 'ಅಯೋಗ್ಯ' ಸೇರಿಕೊಳ್ತಿದೆ. ರಚಿತಾ ರಾಮ್ ಹವಾ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಕಮ್ಮಿ ಆಗಿದೆ. ಆಕೆ ಸಹ ಮತ್ತೆ ಮೋಡಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ಇನ್ನು 'ಅಯೋಗ್ಯ'-2 ಚಿತ್ರತಂಡ ನಟಿ ರಚಿತಾ ರಾಮ್ ಅವರಿಗೆ ಹೊಸ ಬಿರುದು ಕೊಟ್ಟಿದ್ದಾರೆ. 'ಸ್ಯಾಂಡಲ್‌ವುಡ್ ಲೇಡಿ ಸೂಪರ್ ಸ್ಟಾರ್' ರಚಿತಾ ರಾಮ್ ಎಂದು ಅನೌನ್ಸ್‌ಮೆಂಟ್ ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ. "ಅತಿಯಾದ್ರೆ ಬಂದುಬಿಡುತ್ತೆ ವೈರಾಗ್ಯ, ಧಿಮಾಕಲ್ಲೇ ಧೂಳೆಬ್ಬಿಸ್ತಾನೆ ಅಯೋಗ್ಯ" ಎಂಬ ಸಣ್ಣ ಡೈಲಾಗ್ ಕೂಡ ವೀಡಿಯೋದಲ್ಲಿದೆ.
'ಅಯೋಗ್ಯ'-2 ಚಿತ್ರವನ್ನು ಕನ್ನಡ ಜೊತೆಗೆ ತೆಲುಗು, ತಮಿಳಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಚಿತ್ರದ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಕನ್ನಡದಲ್ಲಿ ಹಳ್ಳಿ ಸೊಗಡಿನ ಸಿನಿಮಾಗಳು ಕಮ್ಮಿ ಆಗುತ್ತಿದೆ. ಇದೀಗ 'ಅಯೋಗ್ಯ'-2 ಚಿತ್ರದಲ್ಲಿ ಮತ್ತೆ ಹಳ್ಳಿ ಕಥೆ ಹೇಳುವ ಪ್ರಯತ್ನ ನಡೀತಿರೋದು ವಿಶೇಷ.
'ಮ್ಯಾಟ್ನಿ' ಬಳಿಕ ಸತೀಶ್ ಹಾಗೂ ರಚಿತಾ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸತೀಶ್ ನಟನೆಯ ಒಂದು ತಮಿಳು, ಎರಡು ಕನ್ನಡ ಚಿತ್ರಗಳು ಚಿತ್ರೀಕರಣದ ಹಂತದಲ್ಲಿದೆ. ಇತ್ತ ರಚಿತಾ ರಾಮ್ ಕೂಡ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಇವು ತಡವಾಗುತ್ತಿದೆ. ಇದೀಗ ಇಬ್ಬರು ಒಟ್ಟಿಗೆ ಮತ್ತೊಮ್ಮೆ ಜೊತೆಯಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.


Click it and Unblock the Notifications











