»   » ಸುದ್ದಿಯಲ್ಲಿ ಸಾವರ್ಕರ್‌!

ಸುದ್ದಿಯಲ್ಲಿ ಸಾವರ್ಕರ್‌!

Posted By: *ರಾಜಲಕ್ಷ್ಮಿ ಕೆ. ರಾವ್‌
Subscribe to Filmibeat Kannada

ಈ ದೇಶದಲ್ಲಿ ವಾಸಿಸುವ ಎಲ್ಲ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಒಂದು ವಿಷಯವನ್ನು ಅರ್ಥ ಮಾಡಿಸಬೇಕಾಗಿದೆ. ಎಲ್ಲಕ್ಕಿಂತ ಮೊದಲು ಅವರು ಹಿಂದುಸ್ತಾನಿಗಳು..." ಇದು ಸಂಘ ಪರಿವಾರದ ಭಾಷಣವಲ್ಲ. ಸದ್ಯದಲ್ಲೇ ಬಿಡುಗಡೆಯಾಗಲಿರುವ ವೀರ ಸಾವರ್ಕರ್‌ ಹಿಂದಿ ಚಲನಚಿತ್ರದಲ್ಲಿ ವಿನಾಯಕ ದಾಮೋದರ ಸಾವರ್ಕರ್‌ ಭಾಷಣದ ಸಾಲು!

ಬ್ರಿಟಿಷರ ಕೈಯಿಂದ ಚಳ್ಳಂಗಾಯಿಯ ಹಾಗೆ ತಪ್ಪಿಸಿಕೊಂಡು ಸಮುದ್ರ ಈಜಿದ ದೈತ್ಯ ಸಾಮರ್ಥ್ಯದ ಮನುಷ್ಯನೀತ.

ಮಹಾತ್ಮಾ ಗಾಂಧಿಯ ಕೊಲೆಗೆ ಸಂಚು ಮಾಡಿದ ಸಾವರ್ಕರ್‌ ಎನ್ನುವ ಈ ಪ್ರಚಂಡ ಜೈಲಿನ ಗೋಡೆಗಳಲ್ಲಿ ಮೊಳೆಯ ಮೂಲಕ 'ಕಮಲ " ಎಂಬ ಕಾವ್ಯ ಬರೆದವ ಎಂದರೆ ಆತನ ಮಹತ್ವ ನಿಮಗೆ ಅರ್ಥವಾದೀತು.

ಹುಟ್ಟೂರು ನಾಸಿಕದಲ್ಲಿ ಈತ ಹನ್ನೊಂದರ ವಯಸ್ಸಿನಲ್ಲೇ ವಾನರ ಸೇನೆಯನ್ನು ಕಟ್ಟಿದ. ಕಾಲೇಜು ದಿನಗಳಲ್ಲಿ ತನ್ನ ಗುರು ಛತ್ರಪತಿ ಶಿವಾಜಿಯ ಉತ್ಸವ ಹಾಗೂ ಗಣೇಶೋತ್ಸವಗಳನ್ನು ನಡೆಸಿದ. ದೇಶ ಮಿಲಿಟರಿ ಕ್ಷೇತ್ರದಲ್ಲಿ ಸಶಕ್ತವಾಗಿರಬೇಕು ಎನ್ನುವುದು ಸಾವರ್ಕರ್‌ ಕನಸು. ಪ್ರತಿ ಮನುಷ್ಯನೂ ದೈಹಿಕವಾಗಿ ಸಬಲವಾಗಿರಬೇಕು ಎನ್ನುವುದು ಆತನ ಆಸೆ. ರಾಜಕೀಯ ಕಾರಣಗಳಿಗಾಗಿ ಕಾಲೇಜಿನಿಂದ ಹೊರದಬ್ಬಲ್ಪಟ್ಟ ಪ್ರಥಮ ಭಾರತೀಯ ವಿದ್ಯಾರ್ಥಿ ಎನ್ನುವುದು ಆತನ ಅಗ್ಗಳಿಕೆಯೋ.. ಕುಖ್ಯಾತಿಯೋ ನಿರ್ಧರಿಸುವುದು ನಿಮಗೆ ಬಿಟ್ಟಿದ್ದು .

ಹುಟ್ಟಾ ಕ್ರಾಂತಿಕಾರಿ
ಡಿಶೂಂ ಡಿಶೂಂ ಪ್ರವೃತ್ತಿಯ ಈ ಹುಟ್ಟಾ ಕ್ರಾಂತಿಕಾರಿಗೆ ಬ್ರಿಟಿಷರೆಂದರೆ ಜಿದ್ದಾಜಿದ್ದಿ ದ್ವೇಷ. 'ಸಿಪಾಯಿ ದಂಗೆಯ ಸಮಗ್ರ ಅಧ್ಯಯನ ಗ್ರಂಥ " ಬರೆಯಲು ಲಂಡನ್‌- ಭಾರತವೆಲ್ಲಾ ಸುತ್ತಾಡಿದ ಸಾವರ್ಕರ್‌ ಪ್ರಯತ್ನ, ಹಸ್ತಪ್ರತಿಯನ್ನು ಬ್ರಿಟಿಷರು ಎತ್ತಂಗಡಿ ಮಾಡುವುದರೊಂದಿಗೆ ಮುಕ್ತಾಯವಾಯಿತು. ಆತನ ಮರಾಠಿ ಪತ್ರಿಕೆಯ ಹೆಸರು 'ತಲ್ವಾರ್‌ " (ಕತ್ತಿ).

ಸೇನೆ ತಯಾರಿಸಿ ಬ್ರಿಟಿಷರನ್ನು ಪೇರಿಕೀಳುವಂತೆ ಮಾಡುವುದು ಜೀವನ ಧ್ಯೇಯ. ಕ್ರಾಂತಿ ಮಾನವರೆಂದರೆ ಇನ್ನಷ್ಟು ಇಷ್ಟ. ಅದಕ್ಕೆ ಸಾಕ್ಷ್ಯವೆಂಬಂತೆ, ಕ್ರಾಂತಿಪ್ರಿಯ, ಆಧುನಿಕ ಇಟಲಿಯ ನಾಯಕ, ಗೈಸೆಪ್‌ ಮಾರಿkುದಿಯ ಜೀವನ ಚರಿತ್ರೆ ಬರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ.

ಯುವಕರಲ್ಲಿ ಬ್ರಿಟಿಷರ ವಿರುದ್ಧ ರಕ್ತ ಕುದಿಯುವಂತೆ ಭಾಷಣ ಮಾಡುತ್ತಿದ್ದ, ಶಸ್ತ್ರಾಸ್ತ್ರ ಸಾಗಾಣಿಕೆಗೆ ಸಹಕರಿಸುತ್ತಿದ್ದ . ಪರಿಣಾಮ ಬ್ರಿಟಿಷ್‌ ಸರಕಾರ ಅಂಡಮಾನ್‌ನಲ್ಲಿ 50 ವರ್ಷಗಳ ಕಾಳಾಪಾನಿ ಶಿಕ್ಷೆ ವಿಧಿಸಿತು. 15 ವರ್ಷ ಕತ್ತಲೆ ವಾಸ. ಜೈಲಿನಲ್ಲಿ ಗೋಡೆ ಮೇಲೆ ದೇಶಭಕ್ತಿಯ ಕಾವ್ಯದ ಕೆತ್ತನೆ. ನಂತರ ರತ್ನಗಿರಿಗೆ ಸ್ಥಳಾಂತರ.

ಪಾಕಿಸ್ತಾನ ವಿಭಜನೆಯನ್ನು ವಿರೋಧಿಸಿದ್ದ ಸಾವರ್ಕರ್‌ಗೆ ಗಾಂಧಿಯ ಕೊಲೆಗೆ ಸಹಕರಿಸಿದ ಆಪಾದನೆಯೂ ಹತ್ತಿಕೊಂಡಿತು. ಸ್ವಾತಂತ್ರ್ಯಕ್ಕಾಗಿ ಗಾಂಧಿಯ ಅಹಿಂಸೆ, ಸಾವರ್ಕರ್‌ರ ಯುದ್ಧ ನೀತಿ ಮಾರ್ಗಗಳು ಒಂದಕ್ಕೊಂದು ತಾಳೆಯಾಗಿರಲಿಲ್ಲ. 1883 ರಿಂದ 1966ರವರೆಗೂ ಸಾವರ್ಕರ್‌ ಅವರದು ಹೋರಾಟದ ಬದುಕು.

ಭಗತ್‌ಸಿಂಗ್‌ನಂತಹ ಅನುಯಾಯಿಯನ್ನು ದಕ್ಕಿಸಿಕೊಂಡ ಸಾವರ್ಕರ್‌ಗೆ ಇವತ್ತಿಗೂ ಕ್ರಾಂತ್ರಿಕಾರಿ ಅಭಿಮಾನಿಗಳಿದ್ದಾರೆ. ಅವರ ಧೋರಣೆಗಳೆಲ್ಲ ಆರ್‌ಎಸ್‌ಎಸ್‌ನೊಂದಿಗೆ ಸಾಮ್ಯ ಕಂಡುಕೊಂಡು, ವಿಮರ್ಶೆಯಿಂದಾಚೆಗೆ ತೆರಳಿವೆ.

ಗಾಂಧಿ ತತ್ವ ವಿರೋಧಿಯ ಸಿನೆಮಾವೆಂದರೆ...
ಇಂಥಹ ದೇಶಭಕ್ತನ ಬಗ್ಗೆ ತೆಗೆಯಲಾಗಿರುವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.. ಸಿಪಿಐ(ಎಂ)ನವರು ಇನ್ನೊಂದು ಭಾಷಣ ಬರೆಯಲು ಸ್ಫೂರ್ತಿ ಕೊಡುವ ಹಾಗೆ ಪ್ರೋಮೋ ಗಳಲ್ಲಿ ಮೇಲಿನ ವಾಕ್ಯಗಳನ್ನೇ ಮತ್ತೆ ಮತ್ತೆ ಧ್ವನಿಸಲಾಗುತ್ತಿದೆ .

ಸಿನೆಮಾ ಬಿಡುಗಡೆಯಾಗುತ್ತಿರುವುದು ನವೆಂಬರ್‌ 30ಕ್ಕೆ. ಆದರೆ ಈ ಪ್ರೋಮೋ ಈಗಾಗಲೇ ವಿವಾದವನ್ನು ಕೈಬೀಸಿ ಕರೆದುಕೊಳ್ಳುತ್ತಿದೆ. ಮತ್ತದೇ ಮಾಮೂಲಿ ವಿವಾದ. ನಮ್ಮದು ಸರ್ವಧರ್ಮ ಸಹಿಷ್ಣುತೆಯ ದೇಶ. ಹೀಗೆಲ್ಲಾ ಮಾತಾಡಿದರೆ ಬೇರೆಯವರ ಮನಸ್ಸಿನ ನೋವಾಗುತ್ತದೆ....

ಸಿನೆಮಾದಲ್ಲಿ ಮನಸ್ಸಿಗೆ, ನಂಬಿಕೆಗೆ, ಕಲ್ಪನೆಗೆ, ಬಲವಾದ ಭ್ರಮೆಗಳಿಗೆ ಕಿರಿಕಿರಿ ಉಂಟು ಮಾಡುವ ಹಲವು ವಾಕ್ಯಗಳಿವೆ. ಉದಾಹರಿಸುವುದಿದ್ದರೆ ಹೈಪಿಚ್‌ನಲ್ಲಿ ಸಾವರ್ಕರ್‌ ಹೇಳುತ್ತಾನೆ... 'ಸಂಪೂರ್ಣ ಅಹಿಂಸೆ ಎನ್ನುವುದು ಸಾಧ್ಯವೇ ಇಲ್ಲ ".

ಜೊತೆಗೆ ಪೂಜ್ಯ ಬಾಪೂಜಿಯ ಜೊತೆಗೆ ಸೂಕ್ಷ್ಮ ವಿಷಯಗಳ ಕುರಿತು ಸಾವರ್ಕರ್‌ ನಡೆಸಿದ ಬಿಸಿ ಬಿಸಿ ಚರ್ಚೆ, ಅವರ ನಿಲುವುಗಳೆಲ್ಲವೂ ಸುಳ್ಳು ಎಂದು ಪ್ರತಿಪಾದಿಸುವ ಮಾತುಗಳು ಥಿಯೇಟರ್‌ನಲ್ಲಿ ಗಲಭೆ ಎಬ್ಬಿಸುವ ಸಾಧ್ಯತೆ ಸಾಕಷ್ಟಿದೆ... ಹೀಗೆ ಸಾವರ್ಕರ್‌ ಸಿನಿಮಾದ ಬಗೆಗಿನ ವಿರೋಧದ ಧ್ವನಿಗಳು ಕೇಳುತ್ತಿವೆ. ಅಂದಹಾಗೆ, ಸಿನೆಮಾ ತೆಗೆದಿರುವುದು ಸಾವರ್ಕರ್‌ ದರ್ಶನ ಪ್ರತಿಷ್ಠಾನ. ಸಂಘ ಪರಿವಾರದ ಆದರ್ಶಗಳನ್ನು ಜನಪ್ರಿಯಗೊಳಿಸುವ ಉದ್ದೇಶದ ಮೊದಲ ಹಂತವಾಗಿ ಈ ಸಿನೆಮಾ ಹೊರಬಂದು ಸದ್ದು ಮಾಡುತ್ತಿದೆ.

'ಸ್ವತಂತ್ರ ಭಾರತದಿಂದ ನಿರ್ಲಕ್ಷಿಸಲ್ಪಟ್ಟ ಸ್ವಾತಂತ್ರ್ಯಯೋಧ"
ಚೀಫ್‌ ಪ್ರೊಡಕ್ಷನ್‌ ಕಂಟ್ರೋಲರ್‌ ಪ್ರಭಾಕರ್‌ ಮೋನ್‌ ಅವರ ಪ್ರಕಾರ- ಸಿನೆಮಾದಲ್ಲಿ ಜನರ ಮನಸ್ಸಿಗೆ ಕಿರಿಕಿರಿ ಮಾಡುವ ವಿಷಯಗಳೇನಿಲ್ಲ. ಗಾಂಧಿ ಮತ್ತು ಸುಭಾಷ್‌ ಚಂದ್ರ ಭೋಸ್‌ ಜೊತೆಗೆ ಸಾವರ್ಕರ್‌ ಅವರ ಚಾರಿತ್ರಿಕ ಭೇಟಿಗಳು, ಅವರ ದೇಶಭಕ್ತಿಯ ಆಳ ಮತ್ತು ಸಾರ್ವಕರ್‌ ಅವರ ಜೀವನ ಸತ್ಯಗಳನ್ನು ಸಿನೆಮಾ ಬಿಂಬಿಸುತ್ತದೆ. ಚಿತ್ರ ನಿರ್ದೇಶಕ ವೇದ ರಾಹಿ ಹೇಳುವುದು ಹೀಗೆ- ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಪಂಕ್ತಿಯಲ್ಲಿರುವಾತ. ಆದರೆ ಸ್ವತಂತ್ರ ಭಾರತದಿಂದ ಅಲಕ್ಷ್ಯಕ್ಕೊಳಗಾದವನು.

ಬಿಡುಗಡೆಗೆ ಮುನ್ನ ಚಿತ್ರವನ್ನು ಭಾಳಾ ಠಾಕ್ರೆ ನೋಡಬೇಕಂತೆ. ಅವರು ಸಾವರ್ಕರ್‌ ಅಭಿಮಾನಿಯಾದ್ದರಿಂದ ಈ ಸಿನೆಮಾ ನೋಡಲು ಬಯಸುತ್ತಾರಷ್ಟೆ. ಬೇರೆ ಯಾವುದೇ ಕಾರಣಗಳಿಲ್ಲ ಎಂದು ಸಹ ನಿರ್ದೇಶಕ ಸಂಜಯ್‌ ವಾಜಪೇಯಿ ತಣ್ಣಗೆ ಕಾರಣ ಕೊಡುತ್ತಾರೆ.

ಕಿರುತೆರೆಯ ನಟ ಶೈಲೇಂದ್ರ ಗೌರ್‌ ಸಾವರ್ಕರ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧೀರ್‌ ಫಡ್ಕೆ ಸಂಗೀತ ಸಂಯೋಜಿಸಿದ್ದಾರೆ. ಲಂಡನ್‌ನಲ್ಲಿ ಸಾವರ್ಕರ್‌, ಫ್ರಾನ್ಸ್‌ನಲ್ಲಿ ಸಾವರ್ಕರ್‌, ಅಂಡಮಾನ್‌ನಲ್ಲಿ ಸಾವರ್ಕರ್‌ ಮತ್ತು ರತ್ನಗಿರಿ- ಮುಂಬಯಿಗಳಲ್ಲಿ ಸಾವರ್ಕರ್‌ ಎಂಬ ನಾಲ್ಕು ಭಾಗಗಳಲ್ಲಿ ಸಿನಿಮಾ ಸಾಗುತ್ತದೆ.

ಅಂದಹಾಗೆ- ನಿಷೇಧಕ್ಕೆ ತುತ್ತಾಗದಿದ್ದರೆ ಸಾವರ್ಕರ್‌ ಸಿನಿಮಾ ಇವತ್ತಲ್ಲ ನಾಳೆ ಕರ್ನಾಟಕಕ್ಕೆ, ನಿಮ್ಮೂರಿಗೆ ಬರುತ್ತದೆ. ನೀವು ನೋಡುತ್ತೀರಾ? ನೋಡುವುದಾದರೆ ಯಾತಕ್ಕಾಗಿ? ದೇಶಭಕ್ತನೆಂದಾ ಅಥವಾ ವಿವಾದದಲ್ಲಿದ್ದಾನೆಂದಾ?

English summary
Contoversial stuff ! Movie on Veer Savarkar by Savarkar prathistana is ready to create Controversy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada