ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಶ್ರೇಷ್ಠ ನಟಿ, ಅವರಿಗೆ ಸೂಕ್ತ ಭದ್ರತೆ ನೀಡಿ ಎಂದು ಅಮಿತ್ ಶಾಗೆ ಪತ್ರ..!
ರಶ್ಮಿಕಾ ಮಂದಣ್ಣ ಕೊಡಗಿನವರು. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ಕರುನಾಡಿನಲ್ಲಿ ಜನ್ಮ ಪಡೆದು, ಹೆಸರು, ಹಣ, ಕೀರ್ತಿಯನ್ನು ಆರಂಭದ ದಿನಗಳಲ್ಲಿ ಇಲ್ಲಿ ಗಳಿಸಿದ ರಶ್ಮಿಕಾಗೆ ಕನ್ನಡ ಅಂದರೆ ಅಷ್ಟಕಷ್ಟೇ. ಸಡನ್ನಾಗಿ ಯಾರಾದರೂ ಕನ್ನಡದಲ್ಲಿ ಮಾತನಾಡಿ ಎಂಬ ಮನವಿಯನ್ನು ಮಾಡಿದರೆ ರಶ್ಮಿಕಾ ಮಂದಣ್ಣ ಹೌಹಾರಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣಗೆ ಕನ್ನಡ ಕಬ್ಬಿಣದ ಕಡಲೆಯಾಗಿ ಉಳಿದಿದೆ.
ಇನ್ನು ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎಂದು ಕರೆಯುವ ಹುಚ್ಚು ಹತ್ತಿಸಿಕೊಂಡಿರುವ ರಶ್ಮಿಕಾ ಅನೇಕ ಬಾರಿ ನಾನಾ ವೇದಿಕೆಗಳಲ್ಲಿ ಕನ್ನಡಕ್ಕೆ ಮತ್ತು ಕರುನಾಡಿಗೆ ಅವಮಾನವಾಗುವಂತೆ ಮಾತನಾಡುತ್ತಲೇ ಬಂದಿದ್ದಾರೆ. ಆದರೂ ವಿಶಾಲ ಹೃದಯದ ಕನ್ನಡಿಗರು ನಮ್ಮ ಮನೆ ಮಗಳೆಂದೇ ಹೆಮ್ಮೆ ಪಟ್ಟಿದ್ದಾರೆ. ಕಾಲ ಉರುಳಿದಂತೆ ರಶ್ಮಿಕಾ ಮಂದಣ್ಣ ಅವರನ್ನು ಕ್ಷಮಿಸಿ ಮತ್ತೆ ಅವರ ಪರಭಾಷೆಯ ಚಿತ್ರಗಳನ್ನು ತಲೆ ಮೇಲೆ ಹೊತ್ತು ಮೆರೆಸಿದ್ದಾರೆ.

ಬಹುಶಃ ಹೀಗಾಗಿಯೇ ಕನ್ನಡಿಗರನ್ನು ಆಗಾಗ ಕೆಣಕುವುದನ್ನೇ ಅಭ್ಯಾಸವನ್ನು ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ಮೊನ್ನೆ ಮೊನ್ನೆಯಷ್ಟೇ ನಾನು ಹೈದರಾಬಾದ್‌ನವಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇವತ್ತು ಕೂಡ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶದ ಅಲೆ ಇದೆ. ಮೊನ್ನೆಯ ಹೇಳಿಕೆಗೆ ರಶ್ಮಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಹೀಗಿರುವಾಗ ರಶ್ಮಿಕಾ ಮಂದಣ್ಣಗೆ ಭದ್ರತೆಯನ್ನು ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.
ಹೌದು, ಕೊಡಗಿನವರಾದರೂ ನಾನು ಕೊಡಗಿನ ಕುವರಿ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುವ ರಶ್ಮಿಕಾ ಬೆನ್ನ ಹಿಂದೆ ಈಗ ಕೊಡವ ನ್ಯಾಷನಲ್ ಕೌನ್ಸಿಲ್ ನಿಂತುಕೊಂಡಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಗೃಹ ಸಚಿವ ಪರಮೇಶ್ವರ ಅವರಿಗೆ ಪತ್ರವನ್ನು ಬರೆದಿರುವ ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ಎನ್‌ಯು ನಾಚಪ್ಪ, ರಶ್ಮಿಕಾ ಮಂದಣ್ಣಗೆ ಸೂಕ್ರ ಭದ್ರತೆ ಒದಗಿಸುವಂತೆ ಒತ್ತಾಯವನ್ನು ಮಾಡಿದ್ದಾರೆ.
ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ತಮ್ಮ ಕಠಿಣ ಶ್ರಮ ಮತ್ತು ಪರಿಶ್ರಮದಿಂದ ಭಾರತೀಯ ಚಲನಚಿತ್ರರಂಗದಲ್ಲಿ ಇಂದು ಈ ಸ್ಥಾನ ಸಂಪಾದಿಸಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ಇವರು ರಶ್ಮಿಕಾ ಪರಿಶ್ರಮ ಮತ್ತು ಪ್ರತಿಭೆ ಬಗ್ಗೆ ಗೊತ್ತಿರದ ಕೆಲವರು ಅನವಶ್ಯಕವಾಗಿ ರಶ್ಮಿಕಾ ವಿರುದ್ದ ಟೀಕೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಶ್ಮಿಕಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದು ಬೆದರಿಕೆಗೆ ಸಮ ಎಂದು ಕೂಡ ಎನ್ ಯು ನಾಚಪ್ಪ ಪತ್ರದಲ್ಲಿ ಬರೆದಿದ್ದಾರೆ.
ಇನ್ನು ಭಾರತೀಯ ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಸಿಕ್ಕಿದ್ದೇ ಸೌಭಾಗ್ಯ ಎಂಬರ್ಥದಲ್ಲಿ ಪತ್ರವನ್ನು ಬರೆದಿರುವ ಎನ್‌ಯು ನಾಚಪ್ಪ, ರಶ್ಮಿಕಾ ಶ್ರೇಷ್ಠ ನಟಿ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ ಅವರ ಸ್ವಂತ ನಿರ್ಧಾರ ಮತ್ತು ಅವರ ಆಯ್ಕೆಗಳನ್ನು ಸ್ವಾತಂತ್ರ್ಯದ ಹಕ್ಕನ್ನು ನಾವೆಲ್ಲರೂ ಗೌರವಿಸಬೇಕು ಅದನ್ನು ಬಿಟ್ಟು ಬೇರೆ ಯಾರದ್ದೋ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು ಎಂದಿರುವ ನಾಚಪ್ಪ ಅವರು ರಶ್ಮಿಕಾ ಮಂದಣ್ಣ ಅವರು ಕೊಡವ ಸಮಾಜಕ್ಕೆ ಸೇರಿರುವ ಕಾರಣದಿಂದಲೇ ಬೇಕು ಬೇಕೆಂದೇ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹೀಗೆ ಮಾಡುವರನ್ನು ಕೊಡವ ಪೋಬಿಯಾ ಎಂದು ಗುರುತಿಸಬೇಕಾಗುತ್ತೆ ಎಂದು ಹೇಳಿದ್ದಾರೆ.
ಮುಂದುವರೆದು ಮಂಡ್ಯ ಜಿಲ್ಲೆಯ ಶಾಸಕ ಗಣಿಗ ರವಿ ಅವರ ಹೇಳಿಕೆಗೆ ಕೂಡ ಉತ್ತರ ನೀಡಿರುವ ಎನ್ ಯು ನಾಚಪ್ಪ ಕಾವೇರಿ ನದಿಯನ್ನು ನೆಚ್ಚಿಕೊಂಡಿರುವ ಮಂಡ್ಯ ಶಾಸಕರು ಅದೇ ಕಾವೇರಿ ಮಾತೆಯ ಪುತ್ರಿಯಾಗಿರುವ ರಶ್ಮಿಕಾ ಮಂದಣ್ಣ ಅವರನ್ನು ಅಗೌರವದಿಂದ ಕಂಡಿರುವುದು ಬೇಸರದ ವಿಚಾರ ಎಂದು ಹೇಳಿದ್ದಾರೆ. ಶಾಸಕರು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಹಾಗೂ ಜನರನ್ನು ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸಿದವರು. ಈ ರೀತಿ ಅರ್ಥಹೀನ ಟೀಕಾಪ್ರಹಾರ ಖಂಡನೀಯ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











