ಜೈಲಿನಿಂದ ಬರ್ತಾ ಅವತ್ತು ದರ್ಶನ್ ಹೇಳಿದ್ದ ಮಾತು 13 ವರ್ಷಗಳ ಬಳಿಕ ನಿಜವಾಯ್ತಾ?
ಬಾಯ್ತಪ್ಪಿ ಹೇಳುವ ಮಾತುಗಳು ಕೆಲವೊಮ್ಮೆ ನಿಜವಾಗಿಬಿಡುತ್ತದೆ. ಅದಕ್ಕೆ ಮಾತನಾಡುವಾಗ ಹಿಂದು ಮುಂದು ಯೋಚಿಸಿ ಮಾತನಾಡಬೇಕು ಎನ್ನುವವರು ಇದ್ದಾರೆ. ಹಿಂದೆ ದರ್ಶನ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. 13 ವರ್ಷಗಳ ಬಳಿಕ ರೇಣುಕಾಸ್ವಾಮಿ ಪ್ರಕರಣದಲ್ಲಿ ಮತ್ತೆ ಅಲ್ಲಿಗೆ ಹೋಗುವಂತಾಗಿದೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿಚಾರಣಾಧೀನ ಕೈದಿಯಾಗಿ ಕಳೆದೊಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯ ವಿಐಪಿ ಸೆಲ್‌ನಲ್ಲಿ ಅವರನ್ನು ಇರಿಸಲಾಗಿದೆ. ಆಗಸ್ಟ್ 1ರವರೆಗೆ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಸದ್ಯಕ್ಕೆ ದರ್ಶನ್‌ಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗ್ತಿದೆ. ಪತ್ನಿ ವಿಜಯಲಕ್ಷ್ಮಿ ಸೇರಿ ಆಪ್ತರು ಆದಷ್ಟು ಬೇಗ ಅವರನ್ನು ಹೊರಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಮನೆಯಿಂದ ಹೊರ ಬರುವಾಗ ಅಥವಾ ನೆಂಟರ, ಸ್ನೇಹಿತರ ಮನೆಯಿಂದ ಹೊರಡುವಾಗ ಹೋಗಿಬರುವುದಾಗಿ ಹೇಳುತ್ತೇನೆ. ಆದರೆ ಸಾವಿನ ಮನೆಗೆ ಹೋದಾಗ ಅಥವಾ ಇನ್ನು ಕೆಲವು ಜಾಗಗಳಿಗೆ ಹೋದವರು ಹೋಗಿ ಬರ್ತೀನಿ ಎನ್ನಬಾರದು. ಇದು ತಪ್ಪು, ಬಾಯ್ತಪ್ಪಿ ಹೇಳಿದಂತೆ ಆಗಿ ಬಿಡುತ್ತದೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಿರುತ್ತಾರೆ.
ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಈ ಹಿಂದೆ ನಟ ದರ್ಶನ್ ಜೈಲು ಸೇರುವಂತಾಗಿತ್ತು. 28 ದಿನಗಳ ಕಾಲ ಜೈಲಿನಲ್ಲಿದ್ದರು. ಆ ಸಮಯದಲ್ಲಿ ನಿವೃತ್ತ ಜೈಲಾಧಿಕಾರಿ ಸತೀಶ್ ಪರಪ್ಪನ ಅಗ್ರಹಾರದಲ್ಲಿ ಸಹಾಯಕ ಅಧೀಕ್ಷಕರಾಗಿದ್ದರು. ನಟ ದರ್ಶನ್ ಆಗ ಜೈಲಿನಲ್ಲಿದ್ದ ಬಗ್ಗೆ ನ್ಯೂಸ್‌ಫಸ್ಟ್ ವಾಹಿನಿಗೆ ನಿವೃತ್ತ ಜೈಲಾಧಿಕಾರಿ ಸತೀಶ್ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಜೊತೆಗಿನ ಆಗಿನ ಮಾತುಕತೆ ಬಗ್ಗೆಯೂ ಹೇಳಿದ್ದಾರೆ.

"ಜೈಲಿಗೆ ಬಂದ ದಿನ ದರ್ಶನ್ ಬಹಳ ಒತ್ತಡಕ್ಕೆ ಒಳಗಾಗಿದ್ದರು, ಜೈಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೇ ಹುಷಾರು ತಪ್ಪಿದ್ದರು ಎಂದು ಸತೀಶ್ ನೆನಪಿಸಿಕೊಂಡಿದ್ದಾರೆ. ನಿಧಾನವಾಗಿ ಜೈಲಿನ ಪರಿಸ್ಥಿತಿಗೆ ಹೊಂದಿಕೊಂಡ ಅವರು ಆರಾಮಾಗಿ ಇರುತ್ತಿದ್ದರು. ಪತ್ನಿ ವಿಜಯಲಕ್ಷ್ಮಿ ಬಂದು ಮಾತನಾಡಿದ ನಂತರ ನಿರಾಳರಾಗಿದ್ದರು, ಕರ್ನಾಟಕದ ಜನ ನನಗೆ ಒಳ್ಳೆ ಸ್ಥಾನ ಕೊಟ್ಟಿದ್ದಾರೆ, ಸಣ್ಣ ತಪ್ಪಿನಿಂದ ಜೈಲು ಸೇರಬೇಕಾಯಿತು ಎಂದು ಪಶ್ಚಾತಾಪ ಪಟ್ಟಿದ್ದರು"
ಸಾರಥಿ ಸಿನಿಮಾ ಬಿಡುಗಡೆ ಬಗ್ಗೆಯೂ ದರ್ಶನ್ ಮಾತನಾಡಿದ್ದರು. ದರ್ಶನ್ ಜೈಲಿನಲ್ಲಿ ಇದ್ದಾಗಲೇ ಸಿನಿಮಾ ರಿಲೀಸ್ ಆಗಿತ್ತು. ಸತೀಶ್ ಸರ್, ಸಿನಿಮಾ ರಿಲೀಸ್ ಆಗಿದೆ. ನಾನು ಬೇಸರ ಮಾಡಿಕೊಳ್ತೀನಿ ಅಂತ ನಾಳೆ ನನ್ನನ್ನು ನೋಡೊಕೆ ಬರುವವರು, ಫ್ಯಾನ್ಸ್ ಸಿನಿಮಾ ಚೆನ್ನಾಗಿದೆ, ಕಲೆಕ್ಷನ್ ಚೆನ್ನಾಗಿದೆ ಎಂದು ಹೇಳುತ್ತಾರೆ. ನೀವು ಯಾರಿಗಾದರೂ ಫೋನ್ ಮಾಡಿ ಕೇಳಿ ಹೇಳಿ, ಸಿನಿಮಾ ಹೇಗಿದೆ ಎಂದು ಕೇಳಿದ್ದರು" ಎಂದಿದ್ದಾರೆ.
"ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ, ತಪ್ಪು ತಿದ್ದಿಕೊಂಡು ನಡೆಯುತ್ತೇನೆ ಎಂದು ಹೇಳಿದ್ದ ದರ್ಶನ್‌ಗೆ ಪತ್ನಿ ಧೈರ್ಯ ತುಂಬಿದ್ದರು. ಜೈಲಿನಿಂದ ಬಿಡುಗಡೆಯಾಗಿ ಹೊರಬರುವಾಗ ಜೈಲು ಅಧಿಕಾರಿಗಳ ಬಳಿ 'ಹೋಗ್ ಬರ್ತೀನಿ ಸರ್" ಎಂದು ಹೇಳಿದ್ದರು ಎಂದು ಸತೀಶ್ ವಿವರಿಸಿದ್ದಾರೆ.
ನಾವು ಯಾರೇ ಜೈಲಿನಿಂದ ಹೊರಗೆ ಬರುವಾಗ ಹೋಗಿ ಬರ್ತೀನಿ ಎಂದು ಹೇಳಬೇಡ ಎಂದು ಹೇಳ್ತೀವಿ. ಹೋಗ್ತೀನಿ ಅಂತ ಹೋಗು ಅಂತ. ಅದೇನೋ ದರ್ಶನ್ ಅದ್ಯಾವ ಟೈಮಲ್ಲಿ ಹೇಳಿದ್ರೋ ಕಾಕತಾಳೀಯ, ಪುನಃ ಈಗ ಅದೇ ಜೈಲಿಗೆ ಹೋಗಿದ್ದಾರೆ. ಹಿಂಗಾಗಬಾರದಿತ್ತು" ಎಂದು ಸತೀಶ್ ವಿವರಿಸಿದ್ದಾರೆ.


Click it and Unblock the Notifications











