ಚಂದನ್ ಶೆಟ್ಟಿ ಜೊತೆ ಮದುವೆಯಾದ ಸೀತಾ ವಲ್ಲಭ ನಟಿ ಸುಪ್ರೀತಾ ನಾರಾಯಣ್..!
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ. ಸುಪ್ರೀತಾ ನಾರಾಯಣ್ ಮತ್ತು ಚಂದನ್ ಶೆಟ್ಟಿ ಸದ್ಯ ಈ ಸಾಂಸ್ಥಿಕ ವ್ಯವಸ್ಥೆಯ ಭಾಗವಾಗಿದ್ದಾರೆ. ಹೊಸ ಬದುಕಿಗೆ ಮುನ್ನುಡಿಯನ್ನು ಬರೆದಿದ್ದಾರೆ.
ಹೌದು. ಸುಪ್ರೀತಾ ನಾರಾಯಣ್.. ಸೀತಾ ವಲ್ಲಭ ಧಾರಾವಾಹಿಯ ಮೂಲಕ ಮೈಥಿಲಿ ಎಂದೇ ಜನಪ್ರಿಯರಾದ ಚೆಲುವೆ. 2018ರಿಂದ 2020ರ ಅವಧಿಯಲ್ಲಿ ಸುಮಾರು 500 ಸಂಚಿಕಗಳನ್ನು ಪೂರೈಸಿದ್ದ ಧಾರಾವಾಹಿ ಇದು.ಕೇವಲ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲಿ ಕೂಡ ಸುಪ್ರೀತಾ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಲಾಂಗ್ ಡ್ರೈವ್, ಮೆಲೊಡಿ ಡ್ರಾಮಾ, ಚಿತ್ರಗಳಲ್ಲಿ ಅಭಿನಯಿಸಿದ್ದರು.

ತಮ್ಮ ಅಭಿನಯದಿಂದ ಅನೇಕರ ಹೃದಯ ಗೆದ್ದ ಸುಪ್ರೀತಾ ನಾರಾಯಣ್ ಅವರ ಹೃದಯವನ್ನು ಚಂದನ್ ಶೆಟ್ಟಿ ಗೆದ್ದಿದ್ದು ಇಂದು ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಗುರು ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದಿದ್ದಾರೆ.
ಕಿರುತೆರೆಯ ಕಲಾವಿದರಾದ ನೇಹಾ ಗೌಡ, ಇಶಿತಾ ವರ್ಷ, ರಶ್ಮಿ ಪ್ರಭಾಕರ್, ಚಂದನ್ ಗೌಡ, ವೀಣಾ ಸುಂದರ್ ಹೀಗೆ ಅನೇಕರು ಮದುವೆಯ ಸಮಾರಂಭದಲ್ಲಿ ಇಂದು ಭಾಗವಹಿಸಿ ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ.
ಇನ್ನು ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಕಿರುತೆರೆಯಲ್ಲಿ ಕೂಡ ಸುಪ್ರೀತಾ ಹೆಸರು ಸಂಪಾದಿಸಿದ್ದಾರೆ. ಅಲ್ಲಿನ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ಅಲ್ಲಿನ ಹಲವು ತಾರೆಯರು ಕೂಡ ಮದುವೆಗೆ ಬಂದು ಸುಪ್ರೀತಾಗೆ ಶುಭ ಹಾರೈಸಿದ್ದಾರೆ.
ಅಂದ್ಹಾಗೇ ಸುಪ್ರೀತಾ ನಾರಾಯಣನ್ ಅವರನ್ನು ಮದುವೆಯಾದ ಚಂದನ್ ಶೆಟ್ಟಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಇಷ್ಟೇ ಅಲ್ಲ ಡಿಜಿಟಲ್ ಕ್ರಿಯೇಟರ್ ಕೂಡ ಹೌದು. ಹೀಗೆ ಹೊಸ ಬಾಳಿಗೆ ಕಾಲಿಟ್ಟಿರುವ ಸುಪ್ರೀತಾ ನಾರಾಯಣ್ ಮತ್ತು ಚಂದನ್ ಶೆಟ್ಟಿ ಕಳೆದ ಕೆಲ ದಿನಗಳ ಹಿಂದೆ ಅಂದರೆ ಮಾರ್ಚ್ ಹನ್ನೆರಡರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ತಮ್ಮ ಎಂಗೇಜ್ಮೆಂಟ್ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದ ಸುಪ್ರೀತಾ ನಾರಾಯಣ್ ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ನಿನ್ನ ಧ್ವನಿ ಕೇಳಿದಾಗ ಮೊದಲನೆಯ 'ಹೆಲೋ' ಎಂದಾಗ ಪ್ರೀತಿ ಆಯ್ತು ಅಂತ ಹೇಳುವುದರಿಂದ ಪ್ರಾರಂಭಿಸಲೇ..? ನಿನ್ನ ನಗು, ನನ್ನ ಮಧುರ ನಗು, ಅದನ್ನು ನೋಡುವುದಕ್ಕೆ ನಾನು ಏನೇ ಮಾಡಿದರೂ ಸರಿ" ಎಂದು ಬರೆದುಕೊಂಡಿದ್ದರು.
ನಾನು ದೇವರಲ್ಲಿ ಸಂತೋಷಕ್ಕಾಗಿ ಪ್ರಾರ್ಥಿಸಿದಾಗ, ನೀನು ನನಗೆ ಆಶೀರ್ವಾದವಾಗಿ ಬಂದೆ. ನನ್ನ ಜೀವನಕ್ಕೆ ಬಂದು, ನಿಜವಾದ ಪ್ರೀತಿಯ ಅರ್ಥವನ್ನು ತೋರಿಸಿ, ನನ್ನ ಜೀವನವನ್ನು ಅತೀ ಸುಂದರ ಯಾತ್ರೆಯನ್ನಾಗಿ ಮಾಡಿದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದ ಸುಪ್ರೀತಾ ನಾರಾಯಣ್, ನಾನು ನಿನಗೆ ಶಾಂತಿ, ನಗು, ಸಂತೋಷ ಎಂದು ವಾಗ್ದಾನ ನೀಡುತ್ತೇನೆ. ಜೀವನದ ಎಲ್ಲ ಋತುಗಳಲ್ಲಿಯೂ ನಿನ್ನ ಜೊತೆ ನಿಲ್ಲುತ್ತೇನೆ, ಪ್ರತಿಯೊಂದು ಸಣ್ಣ ಕ್ಷಣವನ್ನೂ ನಿನ್ನ ಜೊತೆ ಆಚರಿಸುತ್ತೇನೆ. ಪ್ರತಿಯೊಂದು ದಿನ, ಪ್ರತಿಯೊಂದು ಜನ್ಮದಲ್ಲೂ, ಪ್ರತಿಯೊಂದು ಸಾಧ್ಯವಾದ ದಾರಿಯಲ್ಲಿ ನಿನ್ನನ್ನು ಆರಿಸುತ್ತೇನೆ ಎಂದು ಮಾತು ನೀಡುತೇನೆ ಎಂದು ಹೇಳಿದ್ದರು.
ನಾನು ನಿನ್ನನ್ನು ಪ್ರೀತಿಸುತ್ತೇನೆ ಕಂದ, ನಿನ್ನ ಮಡಿಲಲ್ಲಿ ನಾನು ನನ್ನ ಮನೆ ಕಂಡೆ ಮತ್ತು ನನ್ನ ಹೃದಯ ಸದಾ ನಿನಗೆ ಸೇರಿದೆ.. ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು.. ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಸದ್ಯ ಸುಪ್ರೀತಾ ನಾರಾಯಣ್ ಮತ್ತು ಚಂದನ್ ಶೆಟ್ಟಿ ಮದುವೆಯ ಬಂಧನಕ್ಕೊಳಗಾಗಿದ್ದು ನವ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











