»   » ಭೈರಪ್ಪನವರ ಮತ‘ದಾನ’ಕ್ಕೆ ರಾಯಲ್ಟಿ ಕಾರಣವೇ?

ಭೈರಪ್ಪನವರ ಮತ‘ದಾನ’ಕ್ಕೆ ರಾಯಲ್ಟಿ ಕಾರಣವೇ?

By: *ಸತ್ಯನಾರಾಯಣ
Subscribe to Filmibeat Kannada

ಕನ್ನಡ ಸಿನಿಮಾಗಳನ್ನು ಪೂರ್ವಜನ್ಮದ ಶತ್ರು ಥರ ಕಾಣುವ ಎಸ್‌.ಎಲ್‌. ಭೈರಪ್ಪನವರು ತಮ್ಮ ಮತದಾನ ಕಾದಂಬರಿಯನ್ನು ಸರ್ಕಾರಿ ಅಧಿಕಾರಿ ಐ.ಎಂ. ವಿಠಲಮೂರ್ತಿಯವರ ಕೈಗೊಪ್ಪಿಸಿದ್ದಾರೆ. ಒಳ್ಳೇ ಚಿತ್ರಗಳನ್ನಷ್ಟೇ ನಿರ್ಮಿಸುವ ಸಂಕಲ್ಪ ಹೊತ್ತಿರುವ ಅನಿಕೇತನ ಸಂಸ್ಥೆ ಮತದಾನವನ್ನು ತೆರೆಗಿಳಿಸುತ್ತಿದೆ. ಇದು ಮಾಯಾಮೃಗ ಟಿ.ಎನ್‌. ಸೀತಾರಾಂ ನಿರ್ದೇಶನದ ಮೊದಲ ಚಿತ್ರ.

ಮೇಲ್ನೋಟಕ್ಕೆ ಭೈರಪ್ಪನವರು ಮತದಾನಕ್ಕೆ ಅನುಮತಿ ಕೊಟ್ಟಿರುವುದಕ್ಕೆ ಯಾವುದೇ ಸಮರ್ಥನೆ ಕಾಣಿಸುತ್ತಿಲ್ಲ . ಯಾಕೆಂದರೆ ಭೈರಪ್ಪನವರು ಸಿನಿಮಾ ದ್ವೇಷಿ, ಸೀತಾರಾಂ ಸಿನಿಮಾ ಕ್ಷೇತ್ರದಲ್ಲಿ ಅನನುಭವಿ, ಅನಿಕೇತನ ಈಗಷ್ಟೇ ಕಣ್ಣು ಬಿಡುತ್ತಿರುವ ಹೊಸ ನಿರ್ಮಾಣ ಸಂಸ್ಥೆ . ಇದೂ ಸಾಲದು ಎಂಬಂತೆ ಭೈರಪ್ಪ ತಮ್ಮ ಕಾದಂಬರಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ನಿರ್ಮಾಪಕರಿಗೆ ಅನುಮತಿ ಕೊಟ್ಟಿದ್ದಾರೆ. ಬದಲಾವಣೆಯಾದರೂ ಎಂಥಾದ್ದು. ಕಾದಂಬರಿ ನಡೆಯುವುದು ಬಯಲು ಸೀಮೆಯಲ್ಲಿ , ಸಿನಿಮಾ ನಡೆಯೋದು ಮಲೆನಾಡಿನಲ್ಲಿ . ಕಾದಂಬರಿಯದ್ದು ಒರಟು ಭಾಷೆ, ಸಿನಿಮಾದ್ದು ಮೆಲು ಧ್ವನಿ. ಕಾದಂಬರಿಯಲ್ಲಿ ಪಾತ್ರಗಳಾಡುವ ಮಾತಿನ ಹಿಂದಿನ ಭಾವನೆಗಳು ಅಂತರ್ಗತ, ಸಿನಿಮಾದಲ್ಲಿ ಎಲ್ಲವೂ ವಾಚ್ಯ ಮತ್ತು ಸವಿವರ. ಕಾದಂಬರಿಯಲ್ಲಿಲ್ಲದ ಒಂದೆರಡು ಪಾತ್ರಗಳು ಸಿನಿಮಾದಲ್ಲಿ ಪ್ರತ್ಯಕ್ಷವಾದರೂ ಅಚ್ಚರಿಯಿಲ್ಲ ಎಂದು ನಿರ್ದೇಶಕರೇ ಹೇಳಿದ್ದಾರೆ! ಅವರ ಪ್ರಕಾರ ಕಾದಂಬರಿಯ ದೇಹ ಬದಲಾಗುತ್ತದೆ, ಆತ್ಮ ಹಾಗೆಯೇ ಇರುತ್ತದೆ.

ಕುಹಕಿಗಳಿಗೆ ಇಷ್ಟು ಸಾಕು. ಕಾದಂಬರಿ ಚಿತ್ರವಾಗಿ ಸೋತರೆ ಜನ ನಿರ್ದೇಶನ ಸರಿಯಿರಲಿಲ್ಲ ಅಂತಾರೆ. ಸಿನಿಮಾ ಗೆದ್ದರೆ ಕಾದಂಬರಿಯೇ ಚೆನ್ನಾಗಿತ್ತು ಅಂತಾರೆ ಎಂಬ ಭೈರಪ್ಪನವರ ಮಾತು ಟೀಕಾಕಾರರ ಕಣ್ಣಿಗೆ ಮುಂಜಾಗರೂಕತಾ ಜಾಮೀನು ಥರಾ ಕೇಳಿಸಿದೆ. ಇನ್ನೂ ಒಂದು ಗಮನಿಸಬೇಕಾದ ಸಂಗತಿಯೆಂದರೆ ಮತದಾನ ಅಂಥಾ ಜನಪ್ರಿಯ ಕಾದಂಬರಿಯಲ್ಲ, ಅದರ ಬಗ್ಗೆ ಅಂಥಾ ಚರ್ಚೆಯೂ ಆಗಿಲ್ಲ . ಆದರೆ ಸಿನಿಮಾ ಆಗುವ ಸುದ್ದಿ ಬಂದದ್ದೇ ತಡ, ಅದು ರಿಪ್ರಿಂಟ್‌ ಆಗಿದೆ. ಇದು ಸೀತಾರಾಂ ಇಮೇಜನ್ನೂ, ಭೈರಪ್ಪನವರ ಇಗೋವನ್ನು ಸಂತೃಪ್ತಿಗೊಳಿಸಬಹುದು.

ಭೈರಪ್ಪನವರು ಸೀತಾರಾಮ್‌ ಬರೆದ ನಾಟಕಗಳನ್ನು ಓದಿದ್ದರಿಂದ ಮತದಾನವನ್ನು ಚಿತ್ರವಾಗಿಸಲು ಅನುಮತಿ ಕೊಟ್ಟರು ಅನ್ನುತ್ತಾರೆ ವಿಠಲಮೂರ್ತಿ ಆದರೆ ಇನ್ನೊಂದು ಮೂಲದ ಪ್ರಕಾರ ಅಲ್ಲಿ ನಡೆದ ಸಂಭಾಷಣೆ ಹೀಗಿತ್ತು :

ಭೈರಪ್ಪ : ಸೀತಾರಾಂ ಅವರೇ ನೀವು ಬರೆದ ನಾಟಕಗಳನ್ನು ನೋಡಿದ್ದೇನೆ. ಆದರೆ ನೀವು ಅಂಥ ಅದ್ಭುತ ನಿರ್ದೇಶಕ ಎಂದೇನೂ ನನಗನ್ನಿಸಲಿಲ್ಲ .

ಸೀತಾರಾಮ್‌ : ಇರಬಹುದು. ನಾನು ಕೂಡ ನಿಮ್ಮೆಲ್ಲಾ ಕಾದಂಬರಿಗಳನ್ನು ಓದಿದ್ದೇನೆ. ನೀವು ಅಂಥ ಅದ್ಭುತ ಕಾದಂಬರಿಕಾರರು ಎಂದು ನನಗೇನೂ ಅನಿಸಲಿಲ್ಲ .

ಈ ಸಂದರ್ಭದಲ್ಲಿ ಮೂರ್ತಿ ಪ್ರವೇಶವಾಗುತ್ತದೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ. ಅಂದಹಾಗೆ ಭೈರಪ್ಪನವರು ತಮ್ಮ ಯಾವ ಕಾದಂಬರಿಗಳನ್ನೂ ದಾನ ಮಾಡುವವರಲ್ಲ . ಮತದಾನಕ್ಕೆ ಅವರಿಗೆ ಸಿಕ್ಕಿರುವ ರಾಯಲ್ಟಿ ಎಷ್ಟಿರಬಹುದು? ಅದೇ ಅವರ ಮನಸ್ಸನ್ನು ಬದಲಾಯಿಸಿರಬಹುದೆ?

English summary
Matadana : Sl byrappas first novel to become a cinema

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada