ಮುದ್ದು ಮಗಳ ನೆನಪಲ್ಲಿ ಅಮೃತಾ ನಾಯ್ಡು ಬೇಬಿ ಬಂಪ್ ಪೋಟೊಶೂಟ್
ಕನ್ನಡ ಖ್ಯಾತ ಕಿರುತೆರೆ ನಟಿ ಅಮೃತಾ ನಾಯ್ಡು. ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ಮಗಳೊಂದಿಗೆ ಹಿಂತಿರುಗುವಾಗ ಅಪಘಾತವಾಗಿತ್ತು. ಹಿಂಬದಿಯಿಂದ ಲಾರಿಯೊಂದು ಸ್ಕೂಟರ್‌ಗೆ ಗುದ್ದಿದ ಪರಿಣಾಮ ಅಮೃತಾ ನಾಯ್ಡು ಪುತ್ರಿ ಕೊನೆಯುಸಿರೆಳೆದಿದ್ದರು. ಮುದ್ದಾದ ಮಗಳನ್ನು ಕಳೆದುಕೊಂಡಿದ್ದ ತಂದೆ-ತಾಯಿಯ ಗೋಳನ್ನು ಕಂಡು ಕನ್ನಡ ನಾಡು ಮರುಕ ಪಟ್ಟಿತ್ತು.
ಅಮೃತಾ ನಾಯ್ಡು ಗರ್ಭಿಣಿಯಾಗಿದ್ದರೂ ತಮ್ಮ ಮಗಳು ಸಮನ್ವಿಗಾಗಿ ರಿಯಾಲಿಟಿ ಶೋನಲ್ಲಿ ಭಾಗಹಿಸಿ, ಕನ್ನಡಿಗರ ಮನಗೆದ್ದಿದ್ದರು. ಆದರೆ, ಎಲ್ಲಾ ಚೆನ್ನಾಗಿದೆ ಎನ್ನುವಷ್ಟರಲ್ಲಿ ಅಮೃತಾ ನಾಯ್ಡು ಮುದ್ದಿನ ಮಗಳು ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಳು. ಈ ಅಘಾತದಿಂದ ಅಮೃತಾ ನಾಯ್ಡು ಹಾಗೂ ಪತಿ ರೂಪೇಶ್ ಕುಗ್ಗಿ ಹೋಗಿದ್ದರು. ಸದ್ಯ ಈಗ ಅಮೃತಾ, ಮಗಳು ಕಳೆದುಕೊಂಡ ದುಖಃದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಗರ್ಭದಲ್ಲಿರುವ ಮಗುವಿನಲ್ಲಿ ಸಮನ್ವಿಯನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ಈಗ 8 ತಿಂಗಳು ತುಂಬಿರುವ ಹಿನ್ನಲೆ ಅಮೃತಾ ಹಾಗೂ ರೂಪೇಶ್ ದಂಪತಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ಹೊಟ್ಟೆಯಲ್ಲಿರುವ ಮಗುವಿನಲ್ಲೇ ಸಮನ್ವಿ ಕಾಣುತ್ತಿರುವ ನಟಿ
ಸಮನ್ವಿಯನ್ನು ಮತ್ತೆ ಈ ಭೂಮಿಗೆ ತರುವ ತವಕದಲ್ಲಿರುವ ಅಮೃತಾ ಹಾಗೂ ರೂಪೇಶ್ ದಂಪತಿ ಈಗ ತಮ್ಮ ಹೊಟ್ಟೆಯಲ್ಲಿರುವ ಮಗುವಿನಲ್ಲೇ ಸಮನ್ವಿಯನ್ನು ಹುಡುಕುವ ಕೆಲಸ ಮಾಡ್ತಿದ್ದಾರೆ. ಆ ಮೂಲಕವಾದರೂ ಸಮನ್ವಿ ನಮ್ಮ ಒಟ್ಟಿಗೆ ಇದ್ದಾಳೆ ಎಂದು ಭಾವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಅಮೃತಾ ನಾಯ್ಡು ಕೂಡ ಮಗಳ ಸಾವಿನ ನೋವಿದ್ದರೂ ಸಹ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗಬಾರದೆಂದು ಖುಷಿಯಿಂದ ಇರಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ 8 ತಿಂಗಳು ತುಂಬಿದ ಸಂಭ್ರಮದಲ್ಲಿ ಬೇಬಿ ಬಂಪ್ ಪೋಟೊಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ಅಮೃತಾ ನಾಯ್ಡು ತಮ್ಮ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ಅಮೃತಾ ಬಗ್ಗೆ ಪೋಟೊಗ್ರಾಫರ್ ಕರುಣಾ ಭಾವುಕ ನುಡಿ
ಇನ್‌ಸ್ಟಾಗ್ರಾಂನಲ್ಲಿ ಪೋಟೊಗ್ರಾಫರ್ ಕರುಣಾ ಅಮೃತಾ ನಾಯ್ಡು ಅವರ ಪ್ರೆಗ್ನೆನ್ಸಿ ಪೋಟೊಗಳನ್ನು ಹಂಚಿಕೊಂಡು ಭಾವುಕರಾಗಿ ಬರೆದುಕೊಂಡಿದ್ದಾರೆ. "ಕೆಲವು ತಿಂಗಳುಗಳ ಹಿಂದೆ ಸಮನ್ವಿ ಜೊತೆಗೆ ಈ ಪೋಟೊಶೂಟ್ ಮಾಡಬೇಕು ಎಂದು ಕೊಂಡಿದ್ದೆವು. ಆದರೆ ದುರಂತ ನಡೆದು ಹೋಯಿತು. ಬೆಳ್ಳಂಬೆಳ್ಳಗ್ಗೆ ಕರೆ ಮಾಡಿ ಸಮನ್ವಿ ಇಲ್ಲದೆ ನಾನು ಹೇಗೆ ಇರಲಿ ಎಂದು ಅಮೃತಾ ನನ್ನ ಬಳಿ ಹೇಳಿ ಅತ್ತು ಬಿಟ್ಟರು. ಅವರಿಗೆ ಧೈರ್ಯ ತುಂಬುವ ಶಕ್ತಿ ನನ್ನಲ್ಲಿ ಇರಲಿಲ್ಲ. ಅವರಿಗೆ ಈಗ ಇರುವುದು ಒಂದೇ ಧೈರ್ಯ ಅದು ಅವರ ಹೊಟ್ಟೆಯಲ್ಲಿರುವ ಪುಟ್ಟ ಕಂದ. ಸಾಕಷ್ಟು ತೋಳಲಾಟದ ಮಧ್ಯೆ ನಾನು ಈ ಪೋಟೊಶೂಟ್‌ಗಾಗಿ ಕೆಲಸ ಮಾಡೋದು ನನಗೆ ಸವಾಲಾಗಿತ್ತು. ಹೀಗಾಗಿ ಇದು ನನಗೆ ವಿಶೇಷವಾದುದು. ಈ ಪುಟ್ಟ ಕಂದನಿಗಾಗಿ ಈ ಜೋಡಿಯ ಉಪಸ್ಥಿತಿಯಲ್ಲಿ ನಾನು ಮಾಡಿದ ಕೆಲಸ ಹಾಗೂ ಅದಕ್ಕೆ ಸಿಕ್ಕ ಪ್ರತಿಫಲವು ಸರಿಯಾದ ನ್ಯಾಯ ಒದಗಿಸಿದೆ ಎಂದು ನಾನು ಭಾವಿಸುತ್ತೇನೆ. ಪ್ರೀತಿ ನೆನಪುಗಳ ಮೂಲಕ ಇರುವುದು. ನೆನಪುಗಳು ಪೋಟೊಗಳ ಸಮೇತ ಇರುವುದು. ಅದನ್ನೇ ನಾನು ಪೋಟೋಗ್ರಫಿ ಎಂದು ನಾನು ಕರೆಯುತ್ತೇನೆ ಎಂದು ತಮ್ಮ ಅಂತರಾಳದ ಭಾವನೆಯನ್ನು ಪೋಟೊಗ್ರಾಫರ್ ಕರುಣಾ ಹೇಳಿಕೊಂಡಿದ್ದಾರೆ.

ಪರಭಾಷೆ ಸೀರಿಯಲ್‌ನಲ್ಲೂ ಅಮೃತಾ ನಾಯ್ಡು ನಟನೆ
ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳಾದ ಅಮೃತಾ ನಾಯ್ಡು ಕಿರುತೆರೆಯಲ್ಲಿ 25 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದರಲ್ಲಿ 'ಗಂಗೋತ್ರಿ' ಧಾರಾವಾಹಿ ಅಮೃತಾ ಅವರಿಗೆ ಹೆಚ್ಚಿನ ಪ್ರಖ್ಯಾತಿ ತಂದುಕೊಟ್ಟಿತ್ತು. ಇದಾದ ಬಳಿಕ 'ಪುಣ್ಯಕೋಟಿ', 'ಕುಸುಮಾಂಜಲಿ', 'ಮನೆಯೊಂದು ಮೂರು ಬಾಗಿಲು', 'ಅಮೃತ ವರ್ಷಿಣಿ', 'ನಾಗಿಣಿ', 'ಗೀತಾ' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಅಮೃತಾ ನಟನೆ ಮಾಡಿದ್ದರು.

ಅಪಘಾತದಲ್ಲಿ ಅಮೃತಾ ನಾಯ್ಡು ಮಗಳು ಸಮನ್ವಿ ಸಾವು
ಕಳೆದ ಜನವರಿ 14 ರಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಸಮೀಪ ಅಮೃತಾ ನಾಯ್ಡು ತಮ್ಮ ಮಗಳ ಜೊತೆ ಮನೆಗೆ ವಾಪಾಸ್ ಹೋಗುವ ವೇಳೆ ಯಮನಂತೆ ಹಿಂದೆ ಬಂದ ಲಾರಿ ಅಮೃತಾ ನಾಯ್ಡು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಘಟನೆಯಲ್ಲಿ ಸಮನ್ವಿ ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಳು. ಅಮೃತಾ ನಾಯ್ಡುಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಕೂಡಲೇ ಅಮೃತಾ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಮಗಳು ತೀರಿ ಹೋದ ಆಘಾತದಲ್ಲಿ ನಟಿ ಅಮೃತಾ ಇಷ್ಟು ದಿನ ಕಾಲ ಕಳೆದಿದ್ದರು. ಸದ್ಯ ಈಗ ಅವರ ಬದುಕಲ್ಲಿ ಮತ್ತೆ ಸಮನ್ವಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಮತ್ತೆ ಸಮನ್ವಿಯನ್ನು ನೋಡಲು ಅಮೃತಾ ದಂಪತಿ ಕಾಯುತ್ತಿದೆ.


Click it and Unblock the Notifications











