Jersey vs KGF 2: ರಾಕಿ ಭಾಯ್ ಯಶ್ ಎದುರು ನಿಲ್ಲಬಲ್ಲರೇ ಶಾಹಿದ್ ಕಪೂರ್?
ಕನ್ನಡದ 'ಕೆಜಿಎಫ್ 2', ಭಾರತದ ಬಹುನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆ ಏಪ್ರಿಲ್ 14ಕ್ಕೆ ನಿಗದಿಯಾಗಿದ್ದು ಕೆಲವೇ ದಿನಗಳಲ್ಲಿ ಪ್ರಚಾರ ಕಾರ್ಯ ಆರಂಭವಾಗಲಿದೆ.
'ಕೆಜಿಎಫ್' ಮೊದಲ ಭಾಗ ಬಿಡುಗಡೆ ಆದಾಗ ಬಾಲಿವುಡ್‌ನ ಕಿಂಗ್ ಖಾನ್ ಎನಿಸಿಕೊಳ್ಳುವ ಶಾರುಖ್ ಖಾನ್‌ರ ಸಿನಿಮಾ ಎದುರಾಗಿತ್ತು. ಆದರೆ ಶಾರುಖ್ ಸಿನಿಮಾ ನೆಲಕಚ್ಚಿ 'ಕೆಜಿಎಫ್' ಬಾಕ್ಸ್ ಆಫೀಸ್‌ನಲ್ಲಿ ಏಕಮೇವಾಧಿಪತ್ಯ ಸಾಧಿಸಿತ್ತು.
ಇದೀಗ 'ಕೆಜಿಎಫ್ 2' ಸಿನಿಮಾಕ್ಕೆ ಮೊದಲ ಭಾಗಕ್ಕೆ ಇದ್ದ ಹೈಪ್‌ಗಿಂತಲೂ ದುಪ್ಪಟ್ಟು ಹೈಪ್ ಇದೆ. ಈ ಸಿನಿಮಾದ ಬಿಡುಗಡೆ ರಾಷ್ಟ್ರದಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರತೀಯ ಸಿನಿಮಾ ರಂಗವೇ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ದಾರಿ ಬಿಟ್ಟು ಕೂತಿದೆ. ಹೀಗಿರುವಾಗ ಹಿಂದಿಯ ಒಂದು ಸಿನಿಮಾ ತಾವು 'ಕೆಜಿಎಫ್ 2'ಗೆ ಠಕ್ಕರ್ ಕೊಡುತ್ತೀವೆಂದು ಆತ್ಮವಿಶ್ವಾಸದಿಂದ ಮುಂದೆ ಬಂದಿದೆ!

ಏಪ್ರಿಲ್ 14 ಕ್ಕೆ 'ಜೆರ್ಸಿ' ಬಿಡುಗಡೆ
ಶಾಹಿದ್ ಕಪೂರ್ ನಟನೆಯ 'ಜೆರ್ಸಿ' ಸಿನಿಮಾ ಎಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಅದೇ ದಿನ 'ಕೆಜಿಎಫ್ 2' ರಾಷ್ಟ್ರದಾದ್ಯಂತ ಬಿಡುಗಡೆ ಆಗಲಿದೆ. ಈ ಹಿಂದೆ ಬೇರೆ ದಿನಾಂಕದಂದು ಬಿಡುಗಡೆ ಆಗಬೇಕಿದ್ದ 'ಜೆರ್ಸಿ' ಸಿನಿಮಾವನ್ನು ಏಪ್ರಿಲ್ 14 ಕ್ಕೆ ಮುಂದೂಡಲಾಗಿದೆ. 'ಕೆಜಿಎಫ್' ಎದುರು ಶಾರುಖ್ ಖಾನ್ ಅಂಥಹವರೇ ನಿಲ್ಲಲಾಗಲಿಲ್ಲ, ಇನ್ನು ಶಾಹಿದ್ ಕಪೂರ್ ನಿಲ್ಲಬಲ್ಲರೇ? ಎಂಬ ಕಾಳಜಿ ತುಂಬಿದ ಅನುಮಾನ ಸಿನಿಮಾ ಪ್ರೇಕ್ಷಕರದ್ದು.

ಮುಂದಕ್ಕೆ ಹೋದ 'ಲಾಲ್ ಸಿಂಗ್ ಛಡ್ಡಾ'
'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆ ಆಗಲಿದೆ ಎಂದು ಕೆಲ ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಆ ಒಳಗೆ ಇತರೆ ಸ್ಟಾರ್ ನಟರ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿಬಿಡಲಿ ಎಂಬ ಮುಂದಾಲೋಚನೆಯೂ ಇತ್ತು. ಆದರೆ ನಟ ಅಮೀರ್ ಖಾನ್ ತಮ್ಮ 'ಲಾಲ್ ಸಿಂಗ್ ಛಡ್ಡಾ' ಸಿನಿಮಾವನ್ನೂ ಏಪ್ರಿಲ್ 14ರಂದೇ ಬಿಡುಗಡೆ ಮಾಡುವುದಾಗಿ ಘೋಷಿಸಿದರು. ತಾವು ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರ ಮಾಡಿದ್ದು, ಏಪ್ರಿಲ್ 14 ರಂದು ಸಿಖ್ಖರ ಬೈಸಾಕಿ ಹಬ್ಬ ಇರುವ ಕಾರಣ ಅಂದೇ ಬಿಡುಗಡೆ ಮಾಡುತ್ತೇನೆ ಎಂದು ಕಾರಣ ನೀಡಿದ್ದರು. ಆದರೆ ಈಗ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಅಮೀರ್ ಖಾನ್ ಹಾಕಿಕೊಂಡಿದ್ದು, ಅವರ ಸಿನಿಮಾ ಆಗಸ್ಟ್ 11 ಕ್ಕೆ ತೆರೆಗೆ ಬರಲಿದೆ.

ತೆಲುಗು ಸಿನಿಮಾದ ರೀಮೇಕ್
ಶಾಹಿದ್ ಕಪೂರ್ ನಟನೆಯ 'ಜೆರ್ಸಿ' ಸಿನಿಮಾ ತೆಲುಗಿನ ಅದೇ ಹೆಸರಿನ ಸಿನಿಮಾದ ರೀಮೇಕ್. ಮೂಲ ಸಿನಿಮಾದಲ್ಲಿ ತೆಲುಗು ಸಿನಿಮಾರಂಗದಲ್ಲಿ ನ್ಯಾಚುರಲ್ ಸ್ಟಾರ್ ಎಂದೇ ಕರೆಯಲ್ಪಡುವ ನಾನಿ ನಟಿಸಿದ್ದರು. ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿ. ಸಿನಿಮಾ ಹಿಟ್ ಆಗಿದ್ದಲ್ಲದೆ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಅದೇ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಿದ್ದಾರೆ. ತೆಲುಗಿನ ಮೂಲ ಸಿನಿಮಾ ನಿರ್ದೇಶಿಸಿದ್ದ ಗೌತಮ್ ತಿನ್ನನೂರಿ ಅವರೇ ಹಿಂದಿ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಜನವರಿ ತಿಂಗಳಿನಲ್ಲೆಯೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್ ಹೆಚ್ಚಳವಾದ ಕಾರಣ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಯ್ತು.

ಪ್ರಚಾರ ಶೀಘ್ರವೇ ಶುರುವಾಗಲಿದೆ
ಇನ್ನು 'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗುವುದು ಪಕ್ಕಾ ಆಗಿದ್ದು. ಕೆಲವು ದಿನಗಳ ಹಿಂದಷ್ಟೆ 'ಕೆಜಿಎಫ್ 2' ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಹಾಗೂ ಇತರರು ರಾಜ್ಯದ ಕರಾವಳಿ ಭಾಗದ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದು, ಸಿನಿಮಾದ ಪ್ರಚಾರ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ. 'ಕೆಜಿಎಫ್ 2' ಸಿನಿಮಾದಲ್ಲಿ ನಟಿ ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ರಾವ್ ರಮೇಶ್ ಸೇರಿದಂತೆ ಮೊದಲ ಭಾಗದಲ್ಲಿ ಇರದೇ ಇದ್ದ ಇನ್ನೂ ಹಲವು ನಟರು ಇದ್ದಾರೆ.


Click it and Unblock the Notifications











