ಸದ್ದಿಲ್ಲದೇ ಮಂಗಳೂರು ಹುಡುಗನ ಜೊತೆ ಸಪ್ತಪದಿ ತುಳಿದ ಶೇಕ್ ಇಟ್ ಪುಷ್ಪವತಿ ಗಾಯಕಿ ಐಶ್ವರ್ಯ ರಂಗರಾಜನ್
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ. ಪ್ರೀತಿ ಅಂದರೆ ಬದುಕು .. ಭವಿಷ್ಯ .. ಭಾಷೆ .. ಕನಸು .. ನಗು .. ಇನ್ನೂ ಏನೆಲ್ಲಾ ! ಈ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮ ಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಇಂಥಾ ದಾಂಪತ್ಯ ಜೀವನಕ್ಕೆ ಈ ವರ್ಷ ಹಲವು ತಾರೆಯರು ಕಾಲಿಟ್ಟಿದ್ದಾರೆ.
ಹೊಸ ಬದುಕನ್ನು ಶುರು ಮಾಡಿದ್ದಾರೆ. ಈ ಸಾಲಿಗೆ ಈಗ ಐಶ್ವರ್ಯ ರಂಗರಾಜನ್ ಕೂಡ ಸೇರಿಕೊಂಡಿದ್ಧಾರೆ. ಹೌದು, ಐಶ್ವರ್ಯ ರಂಗರಾಜನ್.. ಸರಿಗಮಪದ ಸ್ಟಾರ್ ಸಿಂಗರ್. ರನ್ನರ್ ಅಪ್ ಆದರೂ ಕೂಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಗಾಯಕಿಯಾಗಿ ಬೆಳೆದ ಐಶ್ವರ್ಯ ಇಲ್ಲಿಯವರೆಗೆ ಹಲವಾರು ಹಾಡುಗಳಿಗೆ ತಮ್ಮ ಚಿನ್ನದ ಕಂಠ ಕುಣಿಸಿದ್ದಾರೆ. ಆ ಪೈಕಿ ದರ್ಶನ್ ಅಭಿನಯದ ''ಕ್ರಾಂತಿ'' ಚಿತ್ರದ ಶೇಕ್ ಇಟ್ ಪುಷ್ಪಾವತಿ ಹಾಡು ಇವರಿಗೆ ಅಪಾರವಾದ ಹೆಸರು ತಂದು ಕೊಡ್ತು.

''ಕ್ರಾಂತಿ'' ಚಿತ್ರದ ಈ ಹಾಡು ಹೊರತು ಪಡಿಸಿದರೆ ''ಏಕ್ ಲವ್ ಯಾ'' ಚಿತ್ರದ "ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ".. ''ಯುಐ'' ಚಿತ್ರದ "ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ".. ''ಕೌಸಲ್ಯ ಸುಪ್ರಜಾ ರಾಮ'' ಚಿತ್ರದ "90 ಹಾಕು ಕಿಟ್ಟಪ್ಪ".. ''ಬಾನ ದಾರಿಯಲ್ಲಿ'' ಚಿತ್ರದ "ಗೋಲ್ಡ್ ಫಿಶ್ ಗರ್ಲ್".. ''ಕಬ್ಜಾ'' ಚಿತ್ರದ ''ನಮಾಮಿ''.. ''ಸಲಗ'' ಚಿತ್ರದ ''ಮಳೆಯೇ ಮಳೆಯೇ''..''ಕೈವ'' ಚಿತ್ರದ ''ಸಂಕ್ರಾಂತಿ ಸಂಜೆಲಿ'' ಹಾಡು ಪ್ರಮುಖವಾದವು.
ಹೀಗೆ ತಮ್ಮ ಕಂಠದಿಂದ ಹಲವರ ಹೃದಯ ಗೆದ್ದ ಐಶ್ವರ್ಯ ರಂಗರಾಜನ್ ಅವರಿಗೆ ಪ್ರತಿಷ್ಠಿತ ''ಸೈಮಾ'' ಮತ್ತು ''ಫಿಲ್ಮ್‌ಫೇರ್'' ಪ್ರಶಸ್ತಿಗಳು ಕೂಡ ಸಿಕ್ಕಿವೆ. ಇನ್ನು ಐಶ್ವರ್ಯ ರಂಗರಾಜನ್ ಕೇವಲ ಗಾಯಕಿ ಮಾತ್ರ ಅಲ್ಲ ನಾಯಕಿ ಕೂಡ ಹೌದು. ಟಿ. ಎನ್. ಸೀತಾರಾಮ್ ನಿರ್ದೇಶನದ "ಮಗಳು ಜಾನಕಿ" ಧಾರಾವಾಹಿಯಲ್ಲಿ ಅಭಿನಯಿಸಿದ್ದ ಐಶ್ವರ್ಯ ರಂಗರಾಜನ್ "ಮನ್ ರೇ" ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ.

ಇಂಥಾ ಐಶ್ವರ್ಯ ರಂಗರಾಜನ್ ಸದ್ಯ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದ ಸಾಯಿ ಸ್ವರೂಪ್ ಜೊತೆ ಸಪ್ತಪದಿ ತುಳಿದಿದ್ದಾರೆ.ಅಂದ್ಹಾಗೇ ಈ ವರ್ಷದ ಮಾರ್ಚ್‌ನಲ್ಲಿ ಐಶ್ವರ್ಯ ರಂಗರಾಜನ್ ಮತ್ತು ಸಾಯಿ ಸ್ವರೂಪ್ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. . ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ತೀರಾ ಸರಳವಾಗಿ ಐಶ್ವರ್ಯಾ ರಂಗರಾಜನ್ ಮಾಡಿಕೊಂಡಿದ್ದರು. "ವೀ ಫೌಂಡ್ ದಿ ಪರ್ಫೆಕ್ಟ್ ಪಿಚ್, ಬೆಂಗಳೂರು ಟು ಮಂಗಳೂರು" ಎಂದು ಬರೆದುಕೊಂಡಿದ್ದರು.
ಇನ್ನೂ ಇದಕ್ಕೂ ಮುನ್ನ ಸಾಯಿ ಸ್ವರೂಪ್ ಅವರ ಜೊತೆ ಐಶ್ವರ್ಯ ರಂಗರಾಜನ್ ಹಲವಾರು ಪೋಸ್ಟ್‌ಗಳನ್ನು ಮಾಡಿದ್ದರು. ಜೊತೆಯಲ್ಲಿ ಇಬ್ಬರು ಹಲವು ರೀಲ್ಸ್ ಮಾಡಿದ್ದರು. ಆಗಲೇ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಬಂಧ ಇದೆ ಎಂದು ಹಲವರು ಅಂದುಕೊಂಡಿದ್ದರು. ಈ ಅನುಮಾನವನ್ನು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಿಜವಾಗಿಸಿದ ಐಶ್ವರ್ಯ ರಂಗರಾಜನ್ ತೀರಾ ಇತ್ತೀಚೆಗೆ ''ನಿನಗೆಂದೇ'' ಎಂಬ ಆಲ್ಬಂ ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಹಾಡಿನಲ್ಲಿ ಐಶ್ವರ್ಯ ರಂಗರಾಜನ್ ಅವರ ಜೊತೆ ಸಾಯಿ ಸ್ವರೂಪ್ ಕಾಣಿಸಿಕೊಂಡಿದ್ದರು.
ಈಗ ಇಬ್ಬರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಹೊಸ ಬದುಕಿಗೆ ನಾಂದಿ ಹಾಡಿದ್ದಾರೆ. ಸದ್ಯ ಐಶ್ವರ್ಯ ರಂಗರಾಜನ್ ಮತ್ತು ಸಾಯಿ ಸ್ವರೂಪ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಇವರ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.


Click it and Unblock the Notifications










