ದಿಢೀರ್ ಟ್ರೆಂಡ್ ಆಗ್ತಿದೆ ಕರಾಟೆ ಕಿಂಗ್ ಶಂಕರ್ ನಾಗ್ ಹೆಸರು; ಕಾರಣವೇನು?
ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಶಂಕರ್ ನಾಗ್. ಸಿನಿಮಾ ಮಾತ್ರವಲ್ಲ ನಮ್ಮ ನಾಡಿನ ಬಗ್ಗೆ ಬಹಳ ದೂರದೃಷ್ಟಿ ಹೊಂದಿದ್ದವರು ಶಂಕ್ರಣ್ಣ. ರಾಜಕೀಯರಂಗಕ್ಕೂ ಬರಲು ಸಜ್ಜಾಗುತ್ತಿದ್ದರು. ಅಷ್ಟರಲ್ಲೇ ದುರಂತ ಅಂತ್ಯ ಕಾಣುವಂತಾಗಿತ್ತು. ಇದೀಗ ದಿಢೀರ್ ಶಂಕರ್ ನಾಗ್ ಹೆಸರು ಟ್ರೆಂಡ್ ಆಗ್ತಿದೆ. ಅದಕ್ಕೆ ಕಾರಣ ಮೆಟ್ರೋ ನಿಲ್ದಾಣವೊಂದಕ್ಕೆ 'ಸೆಂಟ್ ಮೇರಿ' ಹೆಸರಿಡುವ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯನವರು ಸಮ್ಮತಿ ಸೂಚಿಸಿರುವುದು.
ನಮ್ಮ ಮೆಟ್ರೋ ದಿವಂಗತ ಶಂಕರ್ ನಾಗ್ ಕನಸಿನ ಕೂಸು. ಆದರೆ ಈವರೆಗೆ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡಲಿಲ್ಲ. ಆಪ್ತರು, ಅಭಿಮಾನಿಗಳು ಮನವಿ ಮಾಡಲುತ್ತಲೇ ಇದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ಆರಂಭಿಸಿದ ದಿನದಿಂದಲೂ ಈ ಬಗ್ಗೆ ಕೂಗು ಕೇಳಿಬರ್ತಿದೆ. ಆದರೆ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರಿಡಲು ಮನವಿ ಸಲ್ಲಿಸಲಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಭಾರೀ ವಿವಾದ ಹಾಗೂ ಚರ್ಚೆ ಹುಟ್ಟಾಕ್ಕಿದೆ.

ಇತ್ತೀಚೆಗೆ ಕೆಲ ಖಾಸಗಿ ಕಂಪೆನಿಗಳ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಚರ್ಚೆ ನಡೀತಿದೆ. ಈ ಬಗ್ಗೆಯೂ ವಿವಾದ ಶುರುವಾಗಿದೆ. ಇದೆಲ್ಲದರ ನಡುವೆ ಶಂಕರ್ ನಾಗ್ ಹೆಸರು ನಾಮಕರಣ ಮಾಡುವಂತೆ ಒತ್ತಡ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಯಾನ ಶುರುವಾಗಿದೆ. ಹಿರಿಯ ನಟ, ಶಂಕರ್ ನಾಗ್ ಆಪ್ತ ರಮೇಶ್ ಭಟ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರಕ್ಕೆ ಕಿವಿಯಿಲ್ಲ. ಕಿವಿಯಿಲ್ಲದವರ ಬಳಿ ಏನು ಹೇಳಿ ಏನು ಪ್ರಯೋಜನ. ಮೆಟ್ರೋ ಶುರುವಾದ ಸಮಯದಿಂದಲೂ ಈ ಬಗ್ಗೆ ನಾವು ಕೇಳಿದ್ದೇವೆ, ಕಿರುಚಾಡಿದ್ದೇವೆ. ಇದು ಶಂಕರ್ ನಾಗ್ ಕಲ್ಪನೆ. 1986-87ರಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಸರ್ವೇ ಮಾಡಿಸಿದ್ದ. ಮರಗಳನ್ನು ಕಡಿಯದೇ ಅಂಡರ್‌ಗ್ರೌಂಡ್‌ನಲ್ಲಿ ಮೆಟ್ರೋ ಬೇಕು ಎಂದಿದ್ದ. ಅವತ್ತಿನ ಕಾಲಕ್ಕೆ 10 ಲಕ್ಷ ರೂ. ಖರ್ಚು ಮಾಡಿದ್ದ. ಯಾವುದೋ ಒಂದು ಸ್ಟೇಷನ್‌ಗೆ ಅವನ ಹೆಸರಿಡುವ ಮನಸ್ಸಿಲ್ಲ ಅಂದ್ರೆ ಏನು ಹೇಳೋದು ಎಂದು 'ಬಾಸ್ ಟಿವಿ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟ ರಮೇಶ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿ ಮನವಿ ಮಾಡುತ್ತಿದ್ದಾರೆ. ಈ ಹಿಂದೆ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಈ ಬಗ್ಗೆ ಮಾತನಾಡಿದ್ದ ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. "ಶಂಕರ್ ಮೆಟ್ರೋ ಕನಸು ಕಂಡಿದ್ದ. ಅದಕ್ಕಾಗಿ ಎಸ್. ಆರ್ ಬೊಮ್ಮಾಯಿ ಜೊತೆ ಲಂಡನ್‌ಗೆ ಹೋಗಿದ್ದ. ಅಲ್ಲಿನ ಮೆಟ್ರೋ ಕಂಪನಿ ಜೊತೆ ಮಾತನಾಡಲು. ತನ್ನ ಸ್ವಂತ ಹಣ ಖರ್ಚು ಮಾಡ್ಕೊಂಡು ಹೋಗಿದ್ದ. ನಾನು ಕೇಳ್ದೆ ನಿನ್ನ ಹಣ ಖರ್ಚು ಮಾಡ್ಕೊಂಡು ಯಾಕೆ ಹೋಗ್ತಿಯಾ ಅಂತ. ಅದಕ್ಕವನು 'ಇವತ್ತು ನಾನು ಏನು ಹೆಸರು, ಹಣ ಸಂಪಾದಿಸಿದ್ದೀನೋ ಅದು ಈ ನಾಡಿನಿಂದ, ಈ ಇಂಡಸ್ಟ್ರಿಯಿಂದ ಬಂದಿದ್ದು ಎಂದ. ನನ್ನ ಬೆಂಗಳೂರಿಗಾಗಿ ಲಂಡನ್‌ಗೆ ಟಿಕೆಟ್ ತಗೊಂಡು ಹೋಗೋಕು ಆಗಲ್ವಾ ಎಂದ್ದಿದ್ದ" ಅಂತ ಅರುಂಧತಿ ನಾಗ್ ಹೇಳಿದ್ದರು.
ಶಿವಾಜಿ ನಗರ ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರಿಡಿ ಪರವಾಗಿಲ್ಲ. ಬೇರೆ ಯಾವುದಾದರೂ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ನಾಮಕರಣ ಮಾಡಲು ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಶಂಕರ್ ನಾಗ್ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











