'ಎಸ್. ಪಿ ಸಾಂಗ್ಲಿಯಾನ'- 2 ರೀ ರಿಲೀಸ್ ಡೇಟ್ ಫಿಕ್ಸ್: ಶಂಕ್ರಣ್ಣನ ಸಿನಿಮಾ ಅಂದು ಬರೆದ ದಾಖಲೆಗಳೇನು?
ಕರಾಟೆ ಕಿಂಗ್ ಶಂಕರ್ ನಾಗ್ ಸಿನಿಮಾಗಳನ್ನು ಅಭಿಮಾನಿಗಳು ಮರೆತ್ತಿಲ್ಲ. ಇವತ್ತಿನ ತಲೆಮಾರಿನ ಬಹುತೇಕರು ಶಂಕ್ರಣ್ಣನ ಸಿನಿಮಾಗಳಲ್ಲಿ ಬೆಳ್ಳಿಪರದೆಯಲ್ಲಿ ನೋಡಲು ಸಾಧ್ಯವಾಗಲಿಲ್ಲ. ಅಂತಹ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಶಂಕರ್ ನಾಗ್ ನಟನೆಯ ಸೂಪರ್ ಹಿಟ್ 'ಎಸ್. ಪಿ ಸಾಂಗ್ಲಿಯಾನ'- 2 ರೀ ರಿಲೀಸ್ ಆಗುತ್ತಿದೆ.
ಪಿ. ನಂಜುಂಡಪ್ಪ ನಿರ್ದೇಶನದಲ್ಲಿ ಶಂಕರ್ ನಾಗ್ ಹಾಗೂ ಭವ್ಯಾ ನಟನೆಯ 'ಎಸ್. ಪಿ ಸಾಂಗ್ಲಿಯಾನ'- 2 ಸಿನಿಮಾ 1990ರಲ್ಲಿ ಬಿಡುಗಡೆ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಪೊಲೀಸ್ 'ಬೆಲ್ಟ್' ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿದ್ದು ವಿಶೇಷ. ಶಂಕ್ರಣ್ಣ ಅಗಲಿಕೆಗೂ ಮುಂಚೆ ಬಿಡುಗಡೆಯಾಗಿದ್ದ ಕೊನೆಯ ಸಿನಿಮಾ ಇದು. ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ ಶಂಕರ್ ನಾಗ್ ಕರಿಯರ್‌ನಲ್ಲೇ ಅತಿ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಸ್ವರ್ಣಗಿರಿ ಮೂವೀಸ್ ಬ್ಯಾನರ್‌ನಲ್ಲಿ ಕೃಷ್ಣರಾಜು ಮತ್ತು ಸ್ನೇಹಿತರು ಈ ಸಿನಿಮಾ ನಿರ್ಮಿಸಿದ್ದರು.
ನವೆಂಬರ್ 18ಕ್ಕೆ 'ಎಸ್. ಪಿ ಸಾಂಗ್ಲಿಯಾನ'- 2 ಚಿತ್ರವನ್ನು ಮತ್ತೆ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಕೆ. ಆರ್ ಕಂಬೈನ್ಸ್ ಹಾಗೂ ಮಾರ್ಸ್ ಡಿಸ್ಟ್ರಿಬ್ಯೂಟರ್ಸ್ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಒಟ್ನಲ್ಲಿ ಶಂಕ್ರಣ್ಣನ ಸೂಪರ್ ಹಿಟ್ ಸಿನಿಮಾ ಮತ್ತೆ ಬೆಳ್ಳಿ ಪರದೆಗೆ ಬರುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಸಾಂಗ್ಲಿಯಾನ ಸರಣಿ ಸೂಪರ್ ಹಿಟ್
ಪೊಲೀಸ್ ಆಫೀಸರ್ ಹೆಚ್.ಟಿ ಸಾಂಗ್ಲಿಯಾನ ಜೀವನ ಚರಿತ್ರೆಯಿಂದ ಪ್ರೇರಣಗೊಂಡು ಪಿ. ನಂಜುಂಡಪ್ಪ 'ಸಾಂಗ್ಲಿಯಾನ' ಸಿನಿಮಾ ಮಾಡಿದ್ದರು. 1988ರಲ್ಲಿ ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ 2 ವರ್ಷದ ನಂತರ ಇದರ ಸೀಕ್ವೆಲ್ ಪ್ರೇಕ್ಷಕರ ಮುಂದೆ ತಂದಿದ್ದರು. ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ವಿಲನ್ ಆಗಿ ಮಿಂಚಿದ್ದಾರೆ. ಅಶೋಕ್, ಮುಖ್ಯಮಂತ್ರಿ ಚಂದ್ರು, ವಜ್ರಮುನಿ, ಮಾಸ್ಟರ್ ಮಂಜುನಾಥ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಂಸಲೇಖ ಸಂಗೀತ ಮತ್ತು ಸಾಹಿತ್ಯ ಚಿತ್ರದ ಮತ್ತೊಂದು ಹೈಲೆಟ್.

ಕಪಾಲಿ ಥಿಯೇಟರ್‌ನಲ್ಲಿ ₹8 ಲಕ್ಷ ಗಳಿಕೆ
ಪ್ರೀಕ್ವೆಲ್ ಸೂಪರ್ ಹಿಟ್ ಆಗಿದ್ದರಿಂದ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆ ಇತ್ತು. 'ಎಸ್. ಪಿ ಸಾಂಗ್ಲಿಯಾನ'- 2 ಕ್ರೇಜ್ ಹೇಗಿತ್ತು ಅಂದರೆ ಕಪಾಲಿ ಥಿಯೇಟರ್‌ನಲ್ಲಿ 9 ವಾರಕ್ಕೆ 1,84,150 ಜನ ಸಿನಿಮಾ ವೀಕ್ಷಿಸಿದ್ದರು. ಇದೊಂದೇ ಥಿಯೇಟರ್‌ನಲ್ಲಿ ಸಿನಿಮಾ 8 ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿತ್ತು. ಶಂಕಣ್ಣನ ಖಾಕಿ ಖದರ್, ವಾಕಿಂಗ್ ಸ್ಟೈಲ್, ಹಂಸಲೇಖ ಹಿನ್ನಲೆ ಸಂಗೀತ ಸಖತ್ ಕಿಕ್ ಕೊಟ್ಟಿತ್ತು.

ಅಂಬಿ ಬದಲು ನಟಿಸಿ ಗೆದ್ದ ಶಂಕ್ರಣ್ಣ
ಅಂದ ಹಾಗೆ 'ಎಸ್. ಪಿ ಸಾಂಗ್ಲಿಯಾನ' ಸರಣಿ ಸಿನಿಮಾಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಟಿಸಬೇಕಿತ್ತಂತೆ. ನಿರ್ಮಾಪಕರು ಅಂಬಿ ಹೀರೊ ಆದರೆ ಬಂಡವಾಳ ಹಾಕುತ್ತೇವೆ ಎನ್ನುತ್ತಿದ್ದರಂತೆ. ಆದರೆ ನಿರ್ದೇಶಕ ಪಿ. ನಂಜುಂಡಪ್ಪ ಈ ಕಥೆಯನ್ನು ಶಂಕರ್ ನಾಗ್ ಅವರಿಗೆ ಮಾಡಿದ್ದು, ಅವರೇ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಕೊನೆಗೆ ಅವರು ಹೇಳಿದಂತೆ ಆಗಿತ್ತು. ಆದರೆ ಫಸ್ಟ್ ಪಾರ್ಟ್‌ನಲ್ಲಿ ಅಂಬಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.

ಚಿತ್ರಕ್ಕಾಗಿ ಅಭಿಮಾನಿಗಳ ಕಾತರ
ಶಂಕರ್ ನಾಗ್ ಅಗಲಿ 3 ದಶಕ ಕಳೆದರೂ ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಆಟೋ ಚಾಲಕರಿಗಂತೂ ಶಂಕ್ರಣ್ಣ ಆರಾಧ್ಯ ದೈವ. ಇವತ್ತಿಗೂ ಆಟೋಗಳ ಮೇಲೆ ಕರಾಟೆ ಕಿಂಗ್ ರಾರಾಜಿಸುತ್ತಿದ್ದಾರೆ. ಶಂಕ್ರಣ್ಣನ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡದ ಹುಡುಗರು ಕೂಡ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. 'ಎಸ್. ಪಿ ಸಾಂಗ್ಲಿಯಾನ'- 2 ನವೆಂಬರ್ 18ಕ್ಕೆ ರೀ ರಿಲೀಸ್ ಆಗ್ತಿದ್ದು, ನೆಚ್ಚಿನ ನಟನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











