ಅಭಿಮಾನಿಗಳ ಪ್ರಶ್ನೆಗೆ ಶಾನ್ವಿ ಶ್ರೀವತ್ಸ ಕ್ಯೂಟ್ ಉತ್ತರಗಳು
ಮಾಸ್ಟರ್ ಪೀಸ್, ಮಫ್ತಿ, ತಾರಕ್, ಗೀತಾ, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಶಾನ್ವಿ ಶ್ರೀವತ್ಸ ಕನ್ನಡ ಫಿಲ್ಮೀಬೀಟ್ ಫೇಸ್‌ಬುಕ್ ಮೂಲಕ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
Recommended Video
ನೆಚ್ಚಿನ ನಟಿ ಶಾನ್ವಿಗೆ ಅಭಿಮಾನಿಗಳು, ಸಿನಿ ಪ್ರೇಮಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಕನ್ನಡ ಮಾತೃಭಾಷೆಯಲ್ಲದ ಶಾನ್ವಿ ಕಷ್ಟಪಟ್ಟು ಪ್ರಶ್ನೆಗಳನ್ನು ಓದಿ ಉತ್ತರಿಸಿದರು. ಕನ್ನಡದವರಲ್ಲದಿದ್ದರೂ ಕನ್ನಡವನ್ನು ಚೆನ್ನಾಗಿಯೇ ಮಾತನಾಡಿದ್ದು ಹಲವರಿಗೆ ಖುಷಿ ತಂದಿತು.
ಲಾಕ್‌ಡೌನ್ ಸಮಯ ಹೇಗೆ ಕಳೆಯುತ್ತಿದ್ದೀರಿ, ಮುಂದಿನ ಸಿನಿಮಾ ಯಾವುದು? ಅಡುಗೆ ಮಾಡ್ತೀರಾ? ನಿಮ್ಮ ಊರು ಯಾವುದು? ನಿಮ್ಮ ಡಯಟ್ ಏನು? ಯಾವ ನಟರೊಂದಿಗೆ ನಟಿಸುವುದು ಇಷ್ಟ? ಕನ್ನಡ ಭಾಷೆ ಕಲಿತ ಬಗೆ? ಹೀಗೆ ಹಲವು ಪ್ರಶ್ನೆಗಳನ್ನು ಶಾನ್ವಿ ಎದುರಿಸಿದರು ಮತ್ತು ನಗುತ್ತಾ ಉತ್ತರಿಸಿದರು. ಲೈವ್ ವಿಡಿಯೋ ಸೇವ್ ಮಾಡಿ ಈ ಲೇಖನ ಕೊನೆಯಲ್ಲಿ ನೀಡಲಾಗಿದೆ.. ಆಸಕ್ತರು ನೋಡಬಹುದು

ಸಮಯವೇ ಸಿಗುತ್ತಿಲ್ಲವಂತೆ ಶಾನ್ವಿಗೆ
ಕೊರೊನಾ ಸಮಯವನ್ನು ಕಳೆಯುತ್ತಿರುವ ಬಗ್ಗೆ ಮೊದಲಿಗೆ ಮಾತನಾಡಿದ ಶಾನ್ವಿ, ಈ ದಿನಗಳಲ್ಲೂ ವೈಯಕ್ತಿಕ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಮನೆ ಕೆಲಸ, ಅಡುಗೆ ಹೀಗೆ ಸಮಯ ಕಳೆದು ಹೋಗುತ್ತಿದೆ. ಸಿನಿಮಾ ನೋಡಲು ಮೂರು ಗಂಟೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದರು ಶಾನ್ವಿ.

ಸಿನಿಮಾ ಪ್ಲ್ಯಾನ್ ಮಾಡುವುದು ನಾನಲ್ಲ: ಶಾನ್ವಿ
ರಕ್ಷಿತ್ ಶೆಟ್ಟಿ ಜೊತೆಗೆ ಮತ್ತೊಂದು ಸಿನಿಮಾ? ಎಂಬ ಪ್ರಶ್ನೆಗೆ ಸದ್ಯಕ್ಕೆ ಇಲ್ಲ. ಯಾರ ಜೊತೆ ಸಿನಿಮಾ ಮಾಡಬೇಕು ಎಂದು ನಾನು ಪ್ಲ್ಯಾನ್ ಮಾಡಲಾಗದು, ನಿರ್ದೇಶಕರು, ಬರಹಗಾರರು ಅದನ್ನು ಪ್ಲ್ಯಾನ್ ಮಾಡುತ್ತಾರೆ. ಅವರ ಕತೆಗೆ ನಾನು ಹೊಂದಿಕೆ ಆದರೆ ನಾನು ಅಭಿನಯಿಸುತ್ತೇನೆ ಎಂದರು. ದರ್ಶನ್ ಜೊತೆ ಸಿನಿಮಾ ಬಗ್ಗೆಯೂ ಇದೇ ಉತ್ತರ ನೀಡಿದರು.

ಕನ್ನಡ ಭಾಷೆಯ ಬಗ್ಗೆ ಹಲವು ಪ್ರಶ್ನೆಗಳು
ಕನ್ನಡ ಭಾಷೆಯ ಬಗ್ಗೆ ಶಾನ್ವಿ ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ಕನ್ನಡ ಮಾತನಾಡಲು ಕಲಿಯುತ್ತಿದ್ದೇನೆ, ಸೆಟ್‌ನಲ್ಲಿ ಕನ್ನಡದಲ್ಲೇ ಮಾತನಾಡುವ ಯತ್ನ ಮಾಡುತ್ತೇನೆ, ಮೊದಲಿಗೆ ಕನ್ನಡವನ್ನು ಸುಸ್ಪಷ್ಟವಾಗಿ ಮಾತನಾಡಲು ಕಲಿಯುತ್ತೇನೆ ಆ ನಂತರ ಓದುವುದು ಕಲಿಯುವ ಆಸಕ್ತಿ ಇದೆ ಎಂದರು ಶಾನ್ವಿ. ಮಾತೃಭಾಷೆಯಾಗಿ ಹಿಂದಿ ಮಾತನಾಡುವ ಶಾನ್ವಿ ಚೆನ್ನಾಗಿಯೇ ಕನ್ನಡದಲ್ಲಿ ಮಾತನಾಡಿದರು.

ಅಡುಗೆ ಮಾಡುವುದು ಖುಷಿ ಕೊಡುತ್ತದೆ:ಶಾನ್ವಿ
ಅಡುಗೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಶಾನ್ವಿಗೆ ಎದುರಾದವು. ತಾವು ಹಲವು ವೆಜ್ ರೆಸಿಪಿಗಳನ್ನು ಮನೆಯಲ್ಲಿ ಮಾಡುತ್ತಿರುವುದಾಗಿ ಹೇಳಿದ ಶಾನ್ವಿ, ಬೇಕಿಂಗ್ ಒಂದು ರೀತಿಯ ನೆಮ್ಮದಿ ನೀಡುತ್ತದೆ. ನಾನು ಮಾಡಿದ ಕೇಕ್ ಉಬ್ಬಿ ಅಂತಿಮ ಹಂತಕ್ಕೆ ಬರುವುದು ನೋಡುವುದು ಖುಷಿ ಕೊಡುತ್ತದೆ ಎಂದರು.

ಗೃಹ ದೌರ್ಜನ್ಯ ಹೆಚ್ಚಾಗಿದೆ: ಶಾನ್ವಿ ಕಳವಳ
ಕಳೆದೆರಡು ತಿಂಗಳಲ್ಲಿ ಗೃಹ ದೌರ್ಜನ್ಯ (ಡೊಮೆಸ್ಟಿಕ್ ವೈಯಲೆನ್ಸ್) ಹೆಚ್ಚಾಗಿದೆ, ಇದು ಕಳವಳಕಾರಿ, ಇಂಥಹುದಕ್ಕೆ ಅವಕಾಶ ಕೊಡಬೇಡಿ ಎಂದ ಶಾನ್ವಿ, ಈ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇರಿ, ಕುಡಿತ, ಸಿಗರೇಟಿನಂಥಹಾ ದುಶ್ಚಟಗಳನ್ನು ಬಿಡಲು ಇದು ಸಕಾಲ ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಮಾತು ಮುಗಿಸಿದರು ಶಾನ್ವಿ.


Click it and Unblock the Notifications











