»   » ಮೇ 4ಕ್ಕೆ ‘ಶಾಪ’ ವಿಮೋಚನೆ

ಮೇ 4ಕ್ಕೆ ‘ಶಾಪ’ ವಿಮೋಚನೆ

Posted By: Super
Subscribe to Filmibeat Kannada

ಹಾಲಿವುಡ್‌ ತಂತ್ರಜ್ಞ ಹಾಗೂ ಬಿ.ಸಿ. ಪಾಟೀಲ್‌ ಅವರ ಸೋದರ ಅಶೋಕ್‌ ಪಾಟೀಲ್‌ ನಿರ್ದೇಶನದ 'ಶಾಪ" ಚಿತ್ರೀಕರಣ ಆರಂಭವಾಗಿ ಒಂದು ವರ್ಷವೇ ಕಳೆದಿದೆ. ಅಂತೂ ಒಂದು ವರ್ಷ ಒಂದು ವಾರದ ಬಳಿಕ ಮೇ 4ರಂದು ಶಾಪ ಕ್ಕೆ ಮುಕ್ತಿ.

ಶಾಪ ರಾಜ್ಯಾದ್ಯಂತ ಮೇ 4ರಂದು ಬಿಡುಗಡೆ ಆಗಲಿದೆ ಎಂದು ಬಿ.ಸಿ. ಪಾಟೀಲ್‌ ಪ್ರಕಟಿಸಿದ್ದಾರೆ. ಶಾಪವನ್ನು ಡಿಸೆಂಬರ್‌ನಲ್ಲೇ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಯಜಮಾನ ಚಿತ್ರ ಆಗಷ್ಟೇ ರಿಲೀಸ್‌ ಆಗಿದ್ದರಿಂದ ಹಿಂದು ಮುಂದೆ ನೋಡಿದೆವು. ಜನವರಿ ಇಲ್ಲವೆ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡಲು ಪರೀಕ್ಷೆಯ ಸಮಯ ಎಂದು ಸುಮ್ಮನಾದೆವು.

ಈ ಮಧ್ಯೆ ಲಂಕೇಶ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆ ಮಾಡೋದು ಸರಿಯಲ್ಲ ಎನ್ನಿಸಿತು. ಈಗ ಹೇಗೂ ಬೇಸಿಗೆ ರಜೆ ಇದೆ. ಕುಟುಂಬ ಸಮೇತರಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೆ. ಇದು ಉತ್ತಮ ಕಾಲ ಎಂದು ಮೇ 4ರಂದು ಶಾಪ ಬಿಡುಗಡೆ ಮಾಡ್ತಾ ಇದ್ದೀವಿ ಎಂದು ಅವರು ವಿವರಿಸಿದರು.

ಶಾಪ ಚಿತ್ರದ ನೀತಿಯೂ ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಪಟ್ಟಿದ್ದೇ. ಮಕ್ಕಳ ಮೇಲೆ ಹೆಚ್ಚು ಕಟ್ಟುಪಾಡು ಹೇರಿದರೆ, ಅವರು ಹೇಗೆ ಕೆಟ್ಟುಹೋಗ್ತಾರೆ ಅನ್ನೋದನ್ನು ಚಿತ್ರದಲ್ಲಿ ಮನೋಜ್ಞವಾಗಿ ನಿರೂಪಿಸಲಾಗಿದೆ ಎಂದು ತಮ್ಮ ಹೊಸ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಟೀಲ್‌ ಹೇಳಿದರು.

ಅಂದಹಾಗೆ ಎರಡು ತಿಂಗಳ ಹಿಂದೆಯೇ ಶಾಪ ಚಿತ್ರದ ಬಿಡುಗಡೆ ಪೂರ್ವ ಪ್ರದರ್ಶನ ಆಗಿದೆ. ಶಾಪದ ಬಗ್ಗೆ ಗಾಂಧೀನಗರದಲ್ಲಿ ಒಳ್ಳೆ ಪ್ರತಿಕ್ರಿಯೆ ಇದೆ. ಚಿತ್ರ ನೋಡಿದ ಬಹಳಷ್ಟು ಮಂದಿ ಪಾಟೀಲರನ್ನು ಅಭಿನಂದಿಸಿದ್ದಾರೆ. ಕೆಲವರಂತೂ ಚಿತ್ರ ನೋಡಿದ ದಿನದಿಂದ ತಮ್ಮ ಮಕ್ಕಳನ್ನು ಬೈಯುವುದನ್ನೇ ಬಿಟ್ಟು ಬಿಟ್ಟಿದ್ದಾರಂತೆ. ಅಷ್ಟು ಪರಿಣಾಮಕಾರಿ ನಿರೂಪಣೆ ಶಾಪದಲ್ಲಿದೆ ಎಂಬುದು ಚಿತ್ರ ನೋಡಿದವರ ಅನಿಸಿಕೆ.

ಬಿಡುಗಡೆ ಪೂರ್ವ ಪ್ರದರ್ಶನ ವೀಕ್ಷಿಸಿದ ಸುಮಾರು 300 ಜನರ ಅಭಿಪ್ರಾಯ, ಅನಿಸಿಕೆ, ಸಲಹೆಯನ್ನು ಆಧರಿಸಿ, ಶಾಪ ಚಿತ್ರಕ್ಕೆ ಹೊಸ ರೂಪ ನೀಡಲಾಗಿದೆ. ಈಗ ಚಿತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿದೆ. 300 ಜನ ಮೆಚ್ಚಿದ ಚಿತ್ರವನ್ನು ಮುಕ್ಕೋಟಿ ಕನ್ನಡಿಗರೂ ಮೆಚ್ಚೇ ಮೆಚ್ಚುತ್ತಾರೆ ಎಂಬುದು ಸ್ಯಾಂಡಲ್‌ವುಡ್‌ ಪಂಡಿತರ ಅಂಬೋಣ.

ಅಮೆರಿಕಾದಲ್ಲೂ.. : ಮುಂದಿನ ತಿಂಗಳೇ ಶಾಪ ಅಮೆರಿಕಾದಲ್ಲೂ ಬಿಡುಗಡೆ ಆಕ್ತಾ ಇದೆ. ಕ್ಯಾಲಿಫೋರ್ನಿಯಾದ ಫೋರ್‌ಮೌಂಟ್‌ನಲ್ಲಿರುವ ನಾಝ್‌ -8 ಚಿತ್ರಮಂದಿರದಲ್ಲಿ ಮೇ. 25ರಿಂದ 28ರತನಕ ಚಿತ್ರ ಪ್ರತಿದಿನ ನಾಲ್ಕು ಪ್ರದರ್ಶನ ಕಾಣಲಿದೆ. ಅಮೆರಿಕಕ್ಕೆ ಹಾರಿರುವ ಚಿತ್ರದಲ್ಲಿ ಇಂಗ್ಲಿಷ್‌ ಸಬ್‌ಟೈಟಲ್‌ ಕೂಡ ಇದೆ.

ಚನ್ನಬಸವನಗೌಡ ಪಾಟೀಲ್‌ ನಿರ್ಮಿಸಿ, ಅಶೋಕ್‌ ಪಾಟೀಲ್‌ ನಿರ್ದೇಶಿಸಿರುವ ಈ ಚಿತ್ರಕ್ಕೆ ಹಂಸಲೇಖರ ಸಂಗೀತ, ಬಿ.ಎ. ಮಧು ಕಥೆ, ಸಂಭಾಷಣೆ ಇದೆ. ರಮೇಶ್‌, ಅನು ಪ್ರಭಾಕರ್‌, ಬಿ.ಸಿ. ಪಾಟೀಲ್‌ ತಾರಾಗಣದಲ್ಲಿದ್ದಾರೆ.

English summary
Shapa is releasing in America too

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada