Choo Mantar Teaser: ಮಾರ್ಗನ್ ಹೌಸ್ ರಹಸ್ಯ ಭೇಧಿಸಲು ಬಂದ ಶರಣ್
ಕಾಮಿಡಿ ಅಧ್ಯಕ್ಷ ಶರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರು ಶರಣ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಈ ಸಂಭ್ರಮದಲ್ಲೇ ಶರಣ್ ನಟನೆಯ ಕಾಮಿಡಿ ಹಾರರ್ ಸಿನಿಮಾ 'ಛೂ ಮಂತರ್' ಟೀಸರ್ ರಿಲೀಸ್ ಆಗಿದೆ.
'ಕರ್ವ' ಸಿನಿಮಾ ಮಾಡಿ ಗೆದ್ದಿದ್ದ ತಂಡ ಈ ಚಿತ್ರಕ್ಕೆ ಕೆಲಸ ಮಾಡ್ತಿದೆ. ಚಿತ್ರದಲ್ಲಿ ಶರಣ್ ಜೊತೆ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವಾ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನವನೀತ್ ಆಕ್ಷನ್ ಕಟ್ ಹೇಳಿರೋ 'ಛೂ ಮಂತರ್' ಚಿತ್ರಕ್ಕೆ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ. ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಅನೂಪ್ ಕಟ್ಟುಕಾರನ್ ಸಿನಿಮಾಟೋಗ್ರಫಿ, ರವಿವರ್ಮಾ ಸ್ಟಂಟ್ಸ್, ಯೋಗಾನಂದ್- ಶ್ರೀಹರ್ಷ ಸಂಭಾಷಣೆ ಚಿತ್ರಕ್ಕಿದೆ. ಮೊದಲ ನೋಟದಲ್ಲೇ 'ಛೂ ಮಂತರ್' ಟೀಸರ್ ಗಮನ ಸೆಳೀತಿದೆ.

ಹಾರರ್ ಥ್ರಿಲ್ಲರ್ 'ಛೂ ಮಂತರ್'
ಹಾಲಿವುಡ್ ಸಿನಿಮಾಗಳನ್ನು ನೆನಪಿಸುವ ವಿಷ್ಯುವಲ್ಸ್ 'ಛೂ ಮಂತರ್' ಸಿನಿಮಾದಲ್ಲಿದೆ ಎನ್ನುವುದು ಟೀಸರ್ ನೋಡಿದ್ರೆ ಅರ್ಥವಾಗುತ್ತದೆ. ಪಾಳು ಬಿದ್ದ ಉತ್ತರಾಕಾಂಡದ ಮಾರ್ಗನ್ ಹೌಸ್ ಪ್ಯಾಲೇಸ್‌ನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಭೂತ ಪ್ರೇತ ಇರುವ ಆತಂಕ ಮನೆಯಲ್ಲಿರುವವರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಾಯಕನಾಗಿ ಶರಣ್ ಎಂಟ್ರಿ ಕೊಡುತ್ತಾರೆ. ಟೀಸರ್ ನೋಡುಗರನ್ನು ಕಥೆಯ ಒಳಗೆ ಕರೆದುಕೊಂಡು ಹೋಗುತ್ತದೆ.

ನೋಡುಗರಿಗೆ ಸಖತ್ ಥ್ರಿಲ್
ಬ್ರಿಟೀಷರ ಕಾಲದ ಕಥೆ. ಬ್ರಿಟಿಷ್ ಅಧಿಕಾರಿ ಮಾರ್ಗನ್ ಮತ್ತು ಆತನ ರಾಣಿ. ನಿಧಿಗಾಗಿ ಕಾದಾಟ ಹೀಗೆ ಸಾಕಷ್ಟು ಅಂಶಗಳನ್ನು ಸೇರಿಸಿ ಈ ಹಾರರ್ ಕಾಮಿಡಿ ಸಿನಿಮಾ ಕಟ್ಟಿಕೊಡುತ್ತಿರುವಂತೆ ಕಾಣುತ್ತಿದೆ. 'ಛೂ ಮಂತರ್' ಚಿತ್ರದಲ್ಲಿ ಕಾಮಿಡಿ ಇದ್ದರೂ ಟೀಸರ್ ಮಾತ್ರ ಬಹಳ ಥ್ರಿಲ್ಲಿಂಗ್ ಆಗಿದೆ. ಚಿತ್ರದಲ್ಲಿ 3 ಕಥೆಗಳಿದ್ದು ಎಲ್ಲದಕ್ಕೂ ಚಿತ್ರದ ನಾಯಕನೇ ಮೂಲ ಆಗಿರುತ್ತಾನಂತೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.

ಗಮನ ಸೆಳೆಯುತ್ತಿದೆ ಟೀಸರ್
ನವನೀತ್ ನಿರ್ದೇಶನದ 'ಕರ್ವ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾ ನೋಡುವ ಪ್ರೇಕ್ಷಕನಿಗೆ ಸಖತ್ ಕಿಕ್ ಕೊಟ್ಟಿತ್ತು. ಅದೇ ಕಾರಣಕ್ಕೆ ನವನೀತ್ ಸಿನಿಮಾ ಅಂದಾಕ್ಷಣ ಭಾರೀ ನಿರೀಕ್ಷೆ ಮೂಡುತ್ತದೆ. ಅದಕ್ಕೆ ತಕ್ಕಂತೆ ಟೀಸರ್ ಕೂಡ ಕಟ್ ಮಾಡಿದ್ದಾರೆ. ಇನ್ನು ಅವಿನಾಶ್ ಬಿಜಿಎಂ ಕೂಡ ಕಥೆಗೆ ಬೇಕಾದ ಮೂಡ್ ಕ್ರಿಯೇಟ್ ಮಾಡವಂತಿದೆ. ಪ್ರಭು ಮುಂಡ್ಕರ್, ರಜನಿ ಭಾರಧ್ವಜ್ ಕೂಡ ತಾರಾಗಣದಲ್ಲಿದ್ದಾರೆ.


Click it and Unblock the Notifications











