ಕೊರೆವ ನೀರಲ್ಲಿ ಮಿಂದೆದ್ದ ಶರ್ಮಿಳಾ; ಪಡ್ಡೆ ಹುಡುಗರ ಹೃದಯ ಥಂಡಾ ಥಂಡಾ ಕೂಲ್ ಕೂಲ್
'ಸಜನಿ' ಶರ್ಮಿಳಾ ಮಾಂಡ್ರೆ ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಾರೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಶರ್ಮಿಳಾ ಆಗಾಗ್ಗೆ ವಿದೇಶ ಪ್ರವಾಸಗಳನ್ನು ಕೈಗೊಳ್ಳುತ್ತಾರೆ. ಬಿಕಿನಿ ತೊಟ್ಟು ಕಡಲ ಕಿನಾರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಹಂಚಿಕೊಳ್ಳುತ್ತಾರೆ.
ಸದ್ಯ ಶರ್ಮಿಳಾ ಕೈಯಲ್ಲಿ 3 ಸಿನಿಮಾಗಳಿವೆ. ಕೊನೆಯದಾಗಿ 'ಗಾಳಿಪಟ-2' ಚಿತ್ರದಲ್ಲಿ ಪವನ್ ಕುಮಾರ್ ಜೋಡಿಯಾಗಿ ಮಿಂಚಿದ್ದರು. ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದಲೇ ಬಂದ ಚೆಲುವೆಗೆ ಬಣ್ಣದಲೋಕಕ್ಕೆ ಬರುವುದು ಕಷ್ಟವಾಗಲಿಲ್ಲ. ತಾತ ಕೂಡ ಖ್ಯಾತ ನಿರ್ಮಾಪಕರು. ತಂದೆ ಉದ್ಯಮಿ. ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನಲ್ಲಿ ಓದಿ ಬೆಳೆದ ಶರ್ಮಿಳಾ 'ಸಜನಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು.

'ಕೃಷ್ಣ', 'ಈ ಬಂಧನ', 'ನವಗ್ರಹ', 'ಕರಿಚಿರತೆ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಶರ್ಮಿಳಾ ಮಾಂಡ್ರೆ ಬಣ್ಣ ಹಚ್ಚಿದ್ದರು. ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿದರೂ ಅದೃಷ್ಣ ಕೈ ಹಿಡಿಯಲಿಲ್ಲ. ನಟಿಯಾಗಿ ಮಾತ್ರವಲ್ಲದೇ ಒಂದೆರಡು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಸದಯ 'ದಸರಾ' ಎನ್ನುವ ಮತ್ತೊಂದು ಸಿನಿಮಾವನ್ನು ನಿರ್ಮಿಸಿ, ನಟಿಸುತ್ತಿದ್ದಾರೆ.
ಶರ್ಮಿಳಾ ಇತ್ತೀಚೆಗೆ ಬಾಲಿ ಪ್ರವಾಸ ಕೈಗೊಂಡಿದ್ದರು. ಸದ್ಯ ಅಲ್ಲಿ ಐಸ್ ಬಾತ್ ಥೆರಪಿ ಪಡೆದಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಈ ಥೆರಪಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಹಲವು ಪ್ರಯತ್ನಗಳ ಬಳಿಕ ಕೊನೆಗೂ ನಾನು ಅಂತಿಮವಾಗಿ ಬಾಲಿಯ ಉಲುವಾಟುನಲ್ಲಿ ಪ್ರಶಾಂತ ಅಭಯಾರಣ್ಯದಲ್ಲಿ ಕಾಂಟ್ರಾಸ್ಟ್ ಥೆರಪಿ ಪಡೆದೆ" ಎಂದು ಬರೆದುಕೊಂಡಿದ್ದಾರೆ.
"7 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನವನ್ನು ಹೊಂದಿರುವ ಈ ಭೂಗತ ಪೂಲ್‌ಗಳು ಅದ್ಭುತ ಪ್ರಾಚೀನ ಪ್ರಕೃತಿ ಚಿಕಿತ್ಸೆಯ ಅನನ್ಯ ಅನುಭವವನ್ನು ನೀಡಿತು. ಗಾಯದ ಚೇತರಿಕೆಗೆ ಸಹಾಯ ಮಾಡುವುದರಿಂದ ಹಿಡಿದು ರೋಗ ನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಪ್ರತಿ ಡಿಪ್ ಆರೋಗ್ಯಕ್ಕೆ ಉತ್ತಮ. ಧೈರ್ಯವನ್ನು ಒಟ್ಟುಗೂಡಿಸಿದ ನಂತರ, ನಾನು 25 ಸೆಕೆಂಡುಗಳ ಕಾಲ ಮುಳುಗಿದೆ (90 ಸೆಕೆಂಡುಗಳು ಸೂಕ್ತ) ಆದರೆ ಇದು ನನ್ನ ಮೊದಲ ಪ್ರಯತ್ನ. ಹಾಗಾಗಿ ಇಷ್ಟೇ ಸಾಧ್ಯವಾಗಿದ್ದು. ನೀವು ಒಮ್ಮೆ ಪ್ರಯತ್ನಿಸಿ" ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕೂಡ ಸಾಕಷ್ಟು ನಟಿಯರು ಐಸ್ ಬಾತ್ ಥೆರಪಿ ಬಗ್ಗೆ ವಿಡಿಯೋ, ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವರು ಮಂಜು ಗಡ್ಡೆ ತುಂಬಿದ ಬಾತ್ ಟಬ್‌ನಲ್ಲಿ ಕೂತಿದ್ದನ್ನು ನೋಡಿದ್ದೇವೆ. ಸಮಂತಾ ಬಹಳ ಹಿಂದೆಯೇ ಈ ಥೆರಪಿಯ ಬಗ್ಗೆ ಬರೆದುಕೊಂಡಿದ್ದರು. ಬಳಿಕ ಪ್ರಜ್ಞಾ ಜೈಸ್ವಾಲ್, ರಕುಲ್ ಪ್ರೀತ್ ಸಿಂಗ್, ನೇಹಾ ಶರ್ಮಾ ಸೇರಿದಂತೆ ಹಲವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಇದೇ ರೀತಿಯ ಥೆರಪಿಯನ್ನು ಕೊಂಚ ಭಿನ್ನವಾದ ಜಾಗದಲ್ಲಿ ಶರ್ಮಿಳಾ ಪಡೆದಿದ್ದಾರೆ. ಇದಕ್ಕೆ ಕಾಂಟ್ರಾಸ್ಟ್ ಬಾತ್ ಥೆರಪಿ ಎಂದು ಹೆಸರು. ಐಸ್ ಬಾತ್ ಥೆರಪಿ ರೀತಿಯಲ್ಲೇ ಇರಲಿದ್ದು ಅಂತದ್ದೇ ಪ್ರಯೋಜನಗಳು ಸಿಗುತ್ತವೆ. ಬಾಲಿಯ ಅಭಯಾರಣ್ಯದಲ್ಲಿ ಭೂಮಿಯಿಂದ ಕೊಂಚ ಆಳದಲ್ಲಿ ಇರುವ ಈಜುಕೊಳದ ನೀರಿನಲ್ಲಿ ಶರ್ಮಿಳಾ ಮುಳುಗಿ ಕೆಲ ಸಮಯ ಕೂತಿದ್ದಾರೆ. ಈ ಥೆರಪಿಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
ಕನ್ನಡದಲ್ಲಿ 'ದಸರಾ' ಹೊರತುಪಡಿಸಿ 'ಪವರ್' ಒಂದು ಯೂತ್‌ಫುಲ್ ಚಿತ್ರದಲ್ಲಿ ಶರ್ಮಿಳಾ ನಟಿಸುತ್ತಿದ್ದಾರೆ. 'ಅದೃಷ್ಟಶಾಲಿ' ಎನ್ನುವ ತಮಿಳು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. 'ಸಜನಿ' ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ. "ಅಂಬಾರಿ ಮಾರಿದ ದುಡ್ಡಲ್ಲಿ ಎಂಜಾಯ್ ಮಾಡ್ತಾವ್ರೆ ಮೇಡಂ" ಎಂದು ನೆಟ್ಟಿಗರೊಬ್ಬರು ಫನ್ನಿ ಕಾಮೆಂಟ್ ಮಾಡಿದ್ದಾರೆ. 'ನವಗ್ರಹ' ಚಿತ್ರದ ಕಥೆಯಲ್ಲಿ ಅಂಬಾರಿ ಕದಿಯಲು ಹೋಗುವ ಗುಂಪಿನಲ್ಲಿ ಶರ್ಮಿಳಾ ನಟಿಸಿದ್ದರು.


Click it and Unblock the Notifications











