»   » ಪಬ್ಲಿಕ್‌ ಮೆಮರಿ ಈಸ್‌ ಷಾರ್ಟ್‌ ಅನ್ನೋದು ನಿಜವಾದ್ದರಿಂದ ಶಶಿಯನ್ನು ಪ್ರೇಕ್ಷಕ ಕ್ಷಮಿಸಬಹುದು. ಆದರೆ ಕಾಲ ?

ಪಬ್ಲಿಕ್‌ ಮೆಮರಿ ಈಸ್‌ ಷಾರ್ಟ್‌ ಅನ್ನೋದು ನಿಜವಾದ್ದರಿಂದ ಶಶಿಯನ್ನು ಪ್ರೇಕ್ಷಕ ಕ್ಷಮಿಸಬಹುದು. ಆದರೆ ಕಾಲ ?

Subscribe to Filmibeat Kannada

*ಸತ್ಯ ನಾರಾಯಣ

ಶಶಿ ಕುಮಾರ್‌ ಎರಡು ಅಪಘಾತಕ್ಕೆ ತುತ್ತಾದವರು. ಮೊದಲನೆಯದು ಕಾರ್‌ ಅಪಘಾತ . ಎರಡನೆಯದು ಚುನಾವಣೆಯಲ್ಲಿ ಗೆದ್ದದ್ದು . ಒಂದು ಅಪಘಾತದಿಂದ ಅವರ ಸುಂದರ ಮುಖಾರವಿಂದ ಕಳೆಗುಂದಿದರೆ, ಇನ್ನೊಂದರಿಂದ ಅವರ ಇಮೇಜಿಗೆ ಧಕ್ಕೆಯಾಯಿತು. ಇವೆರಡನ್ನೂ ರಿಪೇರಿ ಮಾಡಿಕೊಳ್ಳುವ ಗೋಜಿಗೆ ಶಶಿಕುಮಾರ್‌ ಹೋಗಲಿಲ್ಲ. ಸದ್ಯಕ್ಕೆ ಹೋಗುವ ಪ್ರಯತ್ನವೂ ಕಾಣಿಸುತ್ತಿಲ್ಲ. ಶಶಿಕುಮಾರ್‌ ಯಾಕೆ ಹೀಗಾದರು ?

ಈ ಪ್ರಶ್ನೆಯ ಉತ್ತರದಲ್ಲೇ ಇಡೀ ಚಿತ್ರರಂಗದ ಸದ್ಯದ ಸ್ಥಿತಿಯನ್ನೂ ನೀವು ಅರ್ಥ ಮಾಡಿಕೊಳ್ಳಬಹುದು. ನಮ್ಮ ಚಿತ್ರರಂಗದ ಮಂದಿಗೆ ಪರಿಸ್ಥಿತಿಯ ಮಟ್ಟಕ್ಕೆ ಏರುವ ಶಕ್ತಿ ಇಲ್ಲ. ಅವರು ಎಂದಿದ್ದರೂ ಹಾಗೆಯೇ ಇರುವವರು.

ಇದು ಶಶಿಕುಮಾರ್‌ ವಿಚಾರದಲ್ಲಂತೂ ಪೂರಾ ಸತ್ಯ. ರಾಜ್‌ ಕುಮಾರ್‌ ಅಪಹರಣ ಪ್ರಸಂಗವನ್ನು ತೆಗೆದುಕೊಂಡರೆ, ಶಶಿಕುಮಾರ್‌ ಸೇರಿದಂತೆ ಇಡೀ ಗಾಂಧಿನಗರವೇ ಬೇಜವಾಬ್ದಾರಿಯಿಂದ ವರ್ತಿಸಿದೆ. ಕನಿಷ್ಠ ವೃತ್ತಿಪರತೆಯಾಗಲೀ ನಿರ್ಮಾಪಕ , ನಿರ್ದೇಶಕ, ಸಹಕಲಾವಿದರ ಕುರಿತು ಕಾಳಜಿಯಾಗಲೀ ನಮ್ಮ ಸ್ಟಾರ್‌ ಕಲಾವಿದರಿಗೆ ಇದ್ದಂತಿಲ್ಲ. ಒಂದು ಕಡೆ ಅಂಬರೀಷ್‌ ರಾಜ್‌ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ತಮ್ಮ ಪಾಡಿಗೆ ತಾವಿದ್ದಾರೆ. ಉಳಿದ ಕಲಾವಿದರು ಅವರನ್ನು ಮುಂದಿಟ್ಟುಕೊಂಡು ನಿರ್ಲಿಪ್ತರೂ , ನಿಷ್ಕಿೃಯರೂ ಆಗಿ ಕೂತುಬಿಟ್ಟಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಶಶಿ ಕುಮಾರ್‌ ಪತ್ರಿಕಾ ಗೋಷ್ಠಿ ಕರೆದು, ತಾನೂ ಕಾಡಿಗೆ ಹೋಗಲು ಸಿದ್ಧ ಎಂದು ಘೋಷಿಸಿದ್ದರು. ಒಬ್ಬ ಎಂಪಿಯಾಗಿ ಈ ಮಾತು ಎಂಥ ನಿರ್ಲಕ್ಷ್ಯದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಾಜಕಾರಣಿಯ ಕೆಲಸ ಕಾಡಿಗೆ ಹೋಗುವುದಲ್ಲ. ಬದಲಾಗಿ, ತನ್ನದೇ ಆದ ರೀತಿಯಲ್ಲಿ ರಾಜ್‌ ಬಿಡುಗಡೆಗೆ ಪ್ರಯತ್ನಿಸುವುದು, ಕೇಂದ್ರದಿಂದ ಒತ್ತಡ ತರುವುದು, ಎರಡೂ ರಾಜ್ಯಗಳ ನಡುವಣ ಸಂಬಂಧ ಸೌಹಾರ್ದಯುತವಾಗಿರುವಂತೆ ನೋಡಿಕೊಳ್ಳುವುದು, ಅವೆಲ್ಲಕ್ಕಿಂತ ಹೆಚ್ಚಾಗಿ ದಿಕ್ಕೇ ತೋಚದಂತೆ ಕುಳಿತು ಬಿಟ್ಟಿರುವ ಚಿತ್ರರಂಗಕ್ಕೆ ಮಾರ್ಗದರ್ಶನ ನೀಡುವುದು.

ಶಶಿ ಇದ್ಯಾವುದನ್ನೂ ಮಾಡಲಿಲ್ಲ. ಆ ಪತ್ರಿಕಾ ಗೋಷ್ಠಿ ಕರೆದ ದಿನದಿಂದ ಅವರು ಯಾರ ಕಣ್ಣಿಗೂ ಬಿದ್ದಿಲ್ಲ. ಕಾರ್ಮಿಕರ ಕಷ್ಟ, ಪ್ರದರ್ಶಕರ ಕಷ್ಟ , ಸಹಕಲಾವಿದರ ನಿರುದ್ಯೋಗ, ರಾಜ್‌ ಅಭಿಮಾನಿಗಳ ಉದ್ವೇಗ- ಇವ್ಯಾವುದರ ಪರಿವೆಯೂ ಇಲ್ಲದಂತೆ ಮಾಯವಾಗಿದ್ದಾರೆ.

ಇಷ್ಟಕ್ಕೂ ಅವರು ಚಿತ್ರದುರ್ಗಕ್ಕೆ ಹೋಗಿಲ್ಲ. ತನ್ನ ಮತದಾರ ಬಂಧುಗಳನ್ನು ಭೇಟಿಯಾಗಿಲ್ಲ. ಗೆಳೆಯರನ್ನೂ ಕಂಡಿಲ್ಲ. ಇಡೀ ಚಿತ್ರರಂಗ ‘ನಾಳೆ’ಗಾಗಿ ಕಾಯುತ್ತಿದ್ದರೆ, ಶಶಿಕುಮಾರ್‌ ಭೂತಕಾಲದಲ್ಲೋ, ಭವಿಷ್ಯ ಕಾಲದಲ್ಲೋ ಇದ್ದಾರೆ. ಅವರು ಯಾವತ್ತೂ ವರ್ತಮಾನದಲ್ಲಿ ಇರಲೇ ಇಲ್ಲ. ಈಗಲೂ ಇಲ್ಲ.

ಈಗ ಶಶಿಕುಮಾರ್‌ ಎಲ್ಲಿದ್ದಾರೆ ? ಈ ಪ್ರಶ್ನೆಗೆ ಅವರ ಮನೆಯವರಿಗೇ ಉತ್ತರ ಗೊತ್ತಿಲ್ಲ . ಅವರ ಮೊಬೈಲು ರೇಂಜಿಗೆ ಸಿಗುತ್ತಿಲ್ಲ. ಫೋನ್‌ ಎತ್ತಿಕೊಳ್ಳುವವರಿಗೆ ವಿಳಾಸ ಗೊತ್ತಿಲ್ಲ. ರಾಜ್‌ ಮರಳಿ ಬಂದ ನಂತರ ಶಶಿ ಪ್ರತ್ಯಕ್ಷವಾಗುತ್ತಾರೆ. ಹೇಳಿಕೆಗಳನ್ನು ನೀಡುತ್ತಾರೆ ಅನ್ನುವುದೂ ನಿಜ.

ಆದರೆ ಅಷ್ಟರಲ್ಲಾಗಲೇ ಅವರ ಇಮೇಜು ಅಪಘಾತಕ್ಕೀಡಾದ ಕಾರಿನ ಆಕಾರದಂತೆ ರೂಪ ಕಳೆದುಕೊಂಡಿರುತ್ತದೆ. ?

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada