»   » ಅವಳ ಮಗ್ಗುಲೊಳಿರಲು ಇವಳ ಕಾಟ, ಇವಳ ಮಗ್ಗುಲೊಳಿರಲು ಅವಳ ಕಾಟ ! ನಟಶೇಖರ ಶಶಿಕುಮಾರ್‌ ಅವರ ಇವ್ತತಿನ ಬದುಕಿನ ಇಬ್ಬರ ಹೆಂಡಿರ ಕಾಟ !

ಅವಳ ಮಗ್ಗುಲೊಳಿರಲು ಇವಳ ಕಾಟ, ಇವಳ ಮಗ್ಗುಲೊಳಿರಲು ಅವಳ ಕಾಟ ! ನಟಶೇಖರ ಶಶಿಕುಮಾರ್‌ ಅವರ ಇವ್ತತಿನ ಬದುಕಿನ ಇಬ್ಬರ ಹೆಂಡಿರ ಕಾಟ !

Posted By:
Subscribe to Filmibeat Kannada

*ಟಿ. ಎಂ. ಸತೀಶ್‌

ಏಕಕಾಲದಲ್ಲಿ ಎರಡು ಕೆಲಸ ನಿಭಾಯಿಸುವುದು ಕಷ್ಟಸಾಧ್ಯ. ಇದು ಜೋಡಿ ಕುದುರೆ ಸವಾರಿ ಇದ್ದಂತೆ. ಆದ್ರೂ ನಮ್ಮ ಚಿತ್ರನಟರು ಏಕಕಾಲದಲ್ಲಿ ಎರಡು ಕೆಲಸ ನಿರ್ವಹಿಸುವ ಚತುರರು. ಆಕ್ಟರ್‌ ಆಗಿದ್ದ ಕನ್ನಡ ಚಿತ್ರರಂಗದ ದಿಗ್ಗಜರು ಸಚಿವರಾದರು, ಶಾಸಕರಾದರು, ಸಂಸತ್‌ ಸದಸ್ಯರೂ ಆದ್ರು. ಅತ್ತ ಜನಸೇವೆ, ಇತ್ತ ಕಲಾಸೇವೆ ಎರಡನ್ನೂ ಬಿಡದೆ ನಡೆಸಿಕೊಂಡೇ ಬಂದರು, ಬರುತ್ತಿದ್ದಾರೆ.

ಆಕ್ಟರ್‌ ಆಗಿದ್ದ ಅನಂತನಾಗ್‌ ಮಿನಿಸ್ಟರ್‌ ಆದ್ರೂ, ನಟನೆಯನ್ನು ಬಿಡಲಿಲ್ಲ. ಈಗ ಅವರಿಗೆ ಸಾಕುಬೇಕಾದಷ್ಟು ಪುರುಸೊತ್ತಿದ. ಫುಲ್‌ ಟೈಂ ಸಿನಿಮಾ ರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಅಂಬರೀಶ್‌ ಸಂಸತ್‌ ಸದಸ್ಯರಾಗಿದ್ದುಕೊಂಡೇ ವಂದೇ ಮಾತರಂ, ದಿಗ್ಗಜರು ಮುಂತಾದ ಚಿತ್ರದಲ್ಲಿ ನಟಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ಕೃಷ್ಣರಷ್ಟು ಬಿಜಿಯಾಗಿಲ್ಲದಿದ್ದರೂ ಶಾಸಕರಾಗಿ ಜನಸೇವೆ ಮಾಡುತ್ತಲೇ ಚಿತ್ರರಂಗದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇತ್ತೀಚಿನ ಯಜಮಾನ, ಯಾರಿಗೆ ಸಾಲತ್ತೆ ಸಂಬಳ ಚಿತ್ರದ ಬಳಿಕ ತೆರೆಗೆ ಸಿದ್ಧವಾಗುತ್ತಿರುವ ‘ಬಹಳ ಚೆನ್ನಾಗಿದೆ’ ‘ ಹಾಲುಸಕ್ಕರೆ ’ ಚಿತ್ರಗಳಲ್ಲಿ ನಟಿಸುತ್ತಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸತ್‌ ಸದಸ್ಯ ಕಂ ಹೀರೋ ಶಶಿ ಕುಮಾರ್‌ಗೆ ಜನಸೇವೆಗೂ ಟೈಮ್‌ ಸಾಲ್ತಿಲ್ಲವಂತೆ, ಇತ್ತ ಚಿತ್ರಗಳಲ್ಲಿ ನಟಿಸಲೂ ಆಬ್ಸಲ್ಯೂಟ್‌ ಟೈಂ ಇಲ್ವಂತೆ.

ಸದ್ಯಕ್ಕಂತೂ ಎಲೆಕ್ಷನ್‌ ಇಲ್ಲ. ಆದ್ರೂ ಜನಸೇವೆ ಮಾಡ್ದೇ ಇದ್ರೆ, ತಮ್ಮನ್ನು ಗೆಲ್ಲಿಸಿದ ಜನ ಇನ್ನು ಎಂದೆಂದೂ ತಮಗೆ ಓಟು ಹಾಕಲ್ಲ ಎಂಬ ಅರಿವು ಶಶಿಕುಮಾರ್‌ಗೆ ಇದ್ದಂತಿದೆ. ಹೇಳಿ ಕೇಳಿ ಈ ತಿಂಗಳ ಕೊನೆಯಿಂದಲೇ ಸಂಸತ್‌ ಅಧಿವೇಶನ ಬೇರೆ. ದೆಹಲಿಗೆ ಹೋಗಲೇ ಬೇಕು. ಬಜೆಟ್‌ ಅಧಿವೇಶನದಲ್ಲಿ ಭಾಗವಹಿಸಲೇ ಬೇಕು. ವಸ್ತುಸ್ಥಿತಿ ಹೀಗಿರುವಾಗ ಒಪ್ಪಿಕೊಂಡಿರೋ ಚಿತ್ರಗಳ ಗತಿ ಏನು? ಫಿಲಂ ಫೀಲ್ಡ್‌ನಲ್ಲಿ ಕೆಟ್ಟ ಹೆಸರು ಬಂದರೆ, ಮುಂದೇನು ? ಎನ್ನುವ ಸಮಸ್ಯೆಯೂ ಶಶಿನ ಕಾಡ್ತಾ ಇದೆಯಂತೆ.

ಈ ಎಲ್ಲ ಸಮಸ್ಯೆಗಳಿಗೆ ಸಲ್ಯೂಷನ್‌ ಸಿಗದೆ ಒದ್ದಾಡುತ್ತಿರೋ ಶಶಿಗೆ ಮಾಜಿ ಸಚಿವ ಹಾಲಿ ಆಕ್ಟರ್‌ ಅನಂತ್‌ನಾಗ್‌, ಸಂಸದ ಅಂಬರೀಶ್‌ರ ಬಳಿ ಸಜೆಷನ್‌ ಕೇಳುವಂತೆ ಯಾರೋ ಉಚಿತ ಸಲಹೆ ಬೇರೆ ಕೊಟ್ಟರಂತೆ. ಯಾರು ಏನೇ ಹೇಳಿರ್ಲಿ , ಶಶಿಕುಮಾರ್‌ ಅಧಿವೇಶನ ಆರಂಭಕ್ಕೆ ಮೊದಲೇ ತಾವು ಒಪ್ಪಿಕೊಂಡಿರೋ ಚಿತ್ರ ಮುಗಿಸಬೇಕು ಅನ್ನೋ ಹಟ ತೊಟ್ಟಿದ್ದಾರೆ.

ನೃತ್ಯದ ಬೆನ್ನೇರಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿ, ಜನಮನಗೆದ್ದ ಶಶಿಕುಮಾರ್‌ ಇತ್ತ ಚಿತ್ರರಂಗವನ್ನೂ ಬಿಡಲಾರರು, ಅತ್ತ ರಾಜಕೀಯವನ್ನೂ ಬಿಡಲಾರದ ತೊಳಲಾಟದಲ್ಲಿದ್ದಾರೆ. ಈ ಮಧ್ಯೆ ಶಶಿಕುಮಾರ್‌ಗೆ ಕನ್ನಡ ಚಿತ್ರರಂಗದಲ್ಲಿ ಸಕತ್‌ ಆಫರ್‌ಗಳೂ ಇವೆ. ಆದರೆ, ಶಶಿಗೆ ಆ ಆಫರ್‌ಗಳನ್ನು ಅಕ್ಸೆಪ್ಟ್‌ ಮಾಡಿಕೊಳ್ಳಲು ಸಮಯ ಇಲ್ಲ. ಕೆಲವರಿಗೆ ಅವಕಾಶವೇ ಇಲ್ದೆ ಇದ್ರೆ, ಶಶಿಗೆ ಅವಕಾಶ ಇದ್ರೂ ಕಾಲಾವಕಾಶ ಇಲ್ಲ. ಕಾಲಾಯ ತಸ್ಮೈ ನಮಃ ಅಲ್ವೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada