ಕೇಂದ್ರ ಕಾರಾಗೃಹದಿಂದ ದರ್ಶನ್ 'ಶಾಸ್ತ್ರಿ' ರಿಲೀಸ್!; ಚಿತ್ರಮಂದಿರದಲ್ಲಿ ಫ್ಯಾನ್ಸ್ ರೆಸ್ಪಾನ್ಸ್ ಹೇಗಿತ್ತು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತಾಗಿದೆ. ವಿಚಾರಣಾಧೀನ ಕೈದಿಯಾಗಿ ಈಗಾಗಲೇ 21 ದಿನ ಕಳೆದಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟ ಸಂಕಷ್ಟದಿಂದ ಹೊರಬರಲಿ ಜೈಲಿನಿಂದ ಬೇಗ ಬಿಡುಗಡೆ ಆಗಲಿ ಎಂದು ಕಾಯುತ್ತಿದ್ದಾರೆ. ಇನ್ನು ದರ್ಶನ್ ಜೈಲಿನಲ್ಲಿರುವ ಸಂದರ್ಭದಲ್ಲೇ 'ಶಾಸ್ತ್ರಿ' ಸಿನಿಮಾ ರೀ-ರಿಲೀಸ್ ಆಗಿದೆ.
ವಿತರಕ ಶಂಕರ್ 'ಶಾಸ್ತ್ರಿ' ಚಿತ್ರವನ್ನು ಮತ್ತೆ ಪ್ರೇಕ್ಷಕರು ಮುಂದೆ ತಂದಿದ್ದಾರೆ. ರಾಜ್ಯಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದೆ. ಅಭಿಮಾನಿಗಳು ಸಡಗರದಿಂದಲೇ ಚಿತ್ರವನ್ನು ಸ್ವಾಗತಿಸಿದ್ದಾರೆ. ಬ್ಯಾನರ್ ಕಟ್ಟಿ ಜೈಹಾರ ಹಾಕಿ ಖುಷಿಪಟ್ಟಿದ್ದಾರೆ. ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ದರ್ಶನ್ 'ಶಾಸ್ತ್ರಿ' ಎಂಟ್ರಿ ಸೀನ್, ಸಾಂಗ್ಸ್ ಬಂದಾಗ ಸಂಭ್ರಮ ಡಬಲ್ ಆಗಿತ್ತು.

ಚಿತ್ರದಲ್ಲಿ ಮೆಡಿಕಲ್ ಸ್ಟೂಡೆಂಟ್ ರಾಮಾ 'ಶಾಸ್ತ್ರಿ'(ದರ್ಶನ್) ಕಾರಣಾಂತರಗಳಿಂದ ಭೂಗತಲೋಕಕ್ಕೆ ಎಂಟ್ರಿ ಕೊಡುವ ಕಥೆಯಿದೆ. ಪಿ. ಎನ್ ಸತ್ಯ ಕಥೆ ಚಿತ್ರಕಥೆ ಬರೆದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇನ್ನು ಚಿತ್ರಕ್ಕೆ ಮೊದಲು 'ಶಾಸ್ತ್ರಿ' ಎನ್ನುವ ಟೈಟಲ್ ಇತ್ತು. ಬಳಿಕ ಅದನ್ನು 'ದರ್ಶನ್ ಶಾಸ್ತ್ರಿ' ಎಂದು ಬದಲಿಸಲಾಗಿತ್ತು. ಚಿತ್ರದಲ್ಲಿ ರೌಡಿ 'ಶಾಸ್ತ್ರಿ' ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬರುವ ಸನ್ನಿವೇಶ ಕೂಡ ಇದೆ.
ಈ ಸೀನ್ ನೋಡಿ ಅಭಿಮಾನಿಗಳು ಮತ್ತಷ್ಟು ಥ್ರಿಲ್ಲಾಗಿದ್ದಾರೆ. ಈ ವೇಳೆ ಸಿಲ್ವರ್ ಸ್ಕ್ರೀನ್ ಮುಂದೆ ಹೋಗಿ ಕುಣಿದು ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. "ರಿಯಲ್ ಆಗಿ ಜೈಲಿನಿಂದ ರಿಲೀಸ್ ಆದಂತೆ ಕಾಣ್ತಿದೆ" ಎಂದು ಕೆಲವರು ಹೇಳುತ್ತಿರುವುದು ವೈರಲ್ ಆಗುತ್ತಿದೆ. 2005ರಲ್ಲಿ 'ಶಾಸ್ತ್ರಿ' ಸಿನಿಮಾ ಬಿಡುಗಡೆ ಆಗಿ ಗೆದ್ದಿತ್ತು. 2017ರಲ್ಲಿ ಕೂಡ ಒಮ್ಮೆ ಸಿನಿಮಾ ರೀ-ರಿಲೀಸ್ ಆಗಿತ್ತು. ಇದೀಗ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ. ಅಂದಹಾಗೆ ಛಾಯಾಗ್ರಾಹಕ ಅಣಜಿ ನಾಗರಾಜ್ ಆಗ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
ಇತ್ತೀಚೆಗೆ ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳು ರೀ- ರಿಲೀಸ್ ಆಗುತ್ತಿದೆ. ದೊಡ್ಡ ಚಿತ್ರಗಳು ತೆರೆಗೆ ಬರದೇ ಚಿತ್ರಮಂದಿರಗಳ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ಹಳೇ ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ತೆರೆಗೆ ತರಲಾಗುತ್ತಿದೆ. ಇನ್ನು ದರ್ಶನ್ ಜೈಲಿನಲ್ಲಿರುವ ಸಂದರ್ಭದಲ್ಲಿ 'ಶಾಸ್ತ್ರಿ' ಸಿನಿಮಾ ಮರುಬಿಡುಗಡೆ ವಿಪರ್ಯಾಸ. 2011ರಲ್ಲಿ ದರ್ಶನ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹ ಸೇರುವಂತಾಗಿತ್ತು. ಅದೇ ಸಮಯದಲ್ಲಿ 'ಸಾರಥಿ' ಸಿನಿಮಾ ತೆರೆಕಂಡು ಗೆದ್ದಿತ್ತು.
'ಸಾರಥಿ' ಸಿನಿಮಾ ಸಕ್ಸಸ್ ಬೆನ್ನಲ್ಲೇ ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು. ರಾಜ್ಯಾದ್ಯಂಯ ವಿಜಯಯಾತ್ರೆ ಮಾಡಿದ್ದರು. ಹೋದ ಕಡೆಯೆಲ್ಲಾ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಈ ಬಾರಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರುವಂತಾಗಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಕ್ಕೆ ಆಪ್ತರ ಮೂಲಕ ಆತನನ್ನು ಅಪಹರಿಸಿ, ಶೆಡ್‌ನಲ್ಲಿ ಕೂಡಿಹಾಕಿ ಥಳಿಸಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಆತನ ಜೀವವೇ ಹೋಗಿದ್ದು ದರ್ಶನ್‌ಗೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜುಲೈ 18ರವರೆಗೆ ದರ್ಶನ್ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಸದ್ಯಕ್ಕೆ ದರ್ಶನ್‌ಗೆ ಜಾಮೀನು ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ದರ್ಶನ್ ಬೇಗ ಈ ಸಂಕಷ್ಟದಿಂದ ಹೊರ ಬರಲಿ ಎಂದು ಅಭಿಮಾನಿಗಳು ಹಾಗೂ ಆಪ್ತರು ಪ್ರಾರ್ಥಿಸುತ್ತಿದ್ದಾರೆ.


Click it and Unblock the Notifications











