ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ ಬಿಡಿ - ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ ವೈರಲ್
09 ವರ್ಷದ ಹಿಂದೆ ತೆರೆಗೆ ಬಂದ ''ಕಿರಿಕ್ ಪಾರ್ಟಿ'' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ರಿಷಬ್, ಸಂಯುಕ್ತಾ ಹೆಗ್ಡೆ, ಚಂದನ್ ಆಚಾರ್, ಪ್ರಮೋದ್ ಶೆಟ್ಟಿ, ಸೇರಿ ಅನೇಕರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿತ್ತು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ನೀಡಿದ್ದು ಇದೇ ಚಿತ್ರ.
ಆದರೆ, ದುರ್ದೈವ. ಮೊದಲ ಚಿತ್ರದಲ್ಲಿಯೇ ಸಿಕ್ಕ ಅಪಾರವಾದ ಜನಪ್ರಿಯತೆಯಿಂದ ರಶ್ಮಿಕಾ ಮಂದಣ್ಣ ಕನ್ನಡವನ್ನು ಮರೆತರು. ಹತ್ತಿದ ಏಣಿಯನ್ನು ಮತ್ತು ನಂಬಿದವರನ್ನು ಎಡಗಾಲಿನಿಂದ ಒದ್ದು ಪರಭಾಷೆಯ ಪಾಲಾದರು. ಆ ನಂತರ ಬಹುಬೇಡಿಕೆಯ ನಾಯಕಿಯಾಗಿ ಕೂಡ ಬೆಳೆದರು.

ಇಂಥಾ ರಶ್ಮಿಕಾ ಮಂದಣ್ಣ ಮತ್ತು ಶೆಟ್ಟಿ ಆಂಡ್ ಕಂಪನಿ ನಡುವೆ ಆಗಾಗ ಕಿರಿಕ್ ನಡೆಯುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಕೆಲ ಒಮ್ಮೆ ರಶ್ಮಿಕಾ ಮಂದಣ್ಣ ಬೇಕು ಬೇಕಂತಲೇ ರಿಷಬ್ ಮತ್ತು ರಕ್ಷಿತ್‌ನ ಕೆಣಕಿದ ಉದಾಹರಣೆಗಳು ಇವೆ. ಸಮಯ -ಸಂದರ್ಭ ಕೂಡಿ ಬಂದಾಗ ರಿಷಬ್ ಕೂಡ ರಶ್ಮಿಕಾಗೆ ಪ್ರತ್ಯುತ್ತರವನ್ನು ನೀಡಿದ ಉದಾಹರಣೆ ಕೂಡ ಇವೆ.
ಹೀಗೆ ಹಾವು-ಮುಂಗುಸಿಯಂತೆ ಆಗಾಗ ಜಗಳ ಮಾಡಿಕೊಳ್ಳುವ ಈ ಎರಡು ಬಣ ಸದ್ಯ ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನವಾಗಿವೆ. ರಿಷಬ್ ಶೆಟ್ಟಿ ತೆಲುಗು, ಹಿಂದಿ ಎಂದು ಬ್ಯುಸಿಯಾಗಿದ್ದರೆ, ರಕ್ಷಿತ್ ಶೆಟ್ಟಿ ತಮ್ಮದೇ ಲೋಕದಲ್ಲಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಸದ್ಯ ಮದುವೆಯ ತಯಾರಿಯಲ್ಲಿದ್ದಾರೆ. ಇದೇ ಫೆಬ್ರವರಿ 26ರಂದು ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯಲು ಅಣಿಯಾಗಿದ್ಧಾರೆ. ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ತಮ್ಮ ಮದುವೆಯ ಕುರಿತ ಸುದ್ದಿಯ ಮೇಲೆ ಅಧಿಕೃತವಾದ ಮುದ್ರೆ ಒತ್ತಿಲ್ಲವಾದರೂ ಹಬ್ಬಿರುವ ಸುದ್ದಿ ಸುಳ್ಳು ಎಂದು ಕೂಡ ಹೇಳಿಲ್ಲ.
ಹೀಗಾಗಿ 26ರಂದು ಇಬ್ಬರ ಕಲ್ಯಾಣ ನಡೆಯುವುದು ಖಚಿತ ಎನ್ನುವ ಮಾತುಗಳು ರೆಕ್ಕೆ-ಪುಕ್ಕದ ಸಮೇತ ಕೇಳಿ ಬರುತ್ತಿವೆ. ಉದಯಪುರದಲ್ಲಿ ನಡೆಯಲಿರುವ ಈ ಅದ್ಧೂರಿ ಮದುವೆಗೆ ಯಾರೆಲ್ಲ ಹೋಗಬಹುದು ಎನ್ನುವ ಲೆಕ್ಕಾಚಾರ ಕೂಡ ಶುರುವಾಗಿದೆ. ಹೀಗಿರುವಾಗ ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.

ಹೌದು, ಪ್ರಮೋದ್ ಶೆಟ್ಟಿ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ಶೇಷ 2016''. ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಸಿದ್ಧವಾದ ಈ ಚಿತ್ರ ಇದೇ ಮಾರ್ಚ್ 6ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಪ್ರಮೋದ್ ಶೆಟ್ಟಿ ದಾವಣಗೆರೆಗೆ ಹೋದಾಗ ಅಲ್ಲಿ ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಪ್ರಶ್ನೆ ಎದುರಾಗಿದೆ.
ಈ ಪ್ರಶ್ನೆಗೆ ನಗು ನಗುತ್ತಲೇ ಉತ್ತರವನ್ನು ನೀಡಿರುವ ಪ್ರಮೋದ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ ನಮಗಿನ್ನೂ ಬಂದಿಲ್ಲ, ಬಂದರೆ ಹೋಗ್ತೀನಿ ಎಂದು ಹೇಳಿದ್ದಾರೆ. ಅವರು ಮದುವೆಗೆ ಕರೆಯಲ್ಲ ಎನ್ನುವುದು ಕೂಡ ಗೊತ್ತು, ಅದು ಎಲ್ಲರಿಗೆ ಗೊತ್ತಿರುವ ವಿಚಾರವೇ, ಅದರಲ್ಲಿ ಹೊಸತೇನಿದೆ ಎಂದು ಕೂಡ ಹೇಳಿದ್ಧಾರೆ.
ಇನ್ನೂ ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆಯಾ ಎನ್ನುವ ಪ್ರಶ್ನೆಯನ್ನು ಕೂಡ ಪ್ರಮೋದ್ ಶೆಟ್ಟಿ ಅವರಿಗೆ ಕೇಳಲಾಗಿದೆ. ಈ ಪ್ರಶ್ನೆಗೆ ಪ್ರಮೋದ್ ಶೆಟ್ಟಿ ಅದೆಲ್ಲಾ ಯಾವ ಕಾಲದಲ್ಲೋ ಹೋಯಿತು. ಅವನೇನು ಏನು ಚಿಕ್ಕ ಮಗುನಾ, ಅದರಲ್ಲೇ ಕೊರಗುತ್ತಾ ಕೂರೋಕೆ ಎಂದು ಹೇಳಿದ್ದಾರೆ. ಚಾಕ್ಲೆಟ್ ತಿನ್ನೋವ್ರಾ? ಎಂದು ಪ್ರಶ್ನೆ ಮಾಡಿ ಅದೆಲ್ಲಾ ಮುಗಿದು ಹೋದ ಅಧ್ಯಾಯ ಎಂದಿದ್ಧಾರೆ.
ಇದೇ ವೇಳೆ ರಕ್ಷಿತ್ ಶೆಟ್ಟಿ ಎಲ್ಲಿ ಎಂಬ ಸದ್ಯದ ಹಲವರ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಪ್ರಮೋದ್ ಶೆಟ್ಟಿ, ಅವನು ಇರುವುದೇ ಹಾಗೇ, ಸಿನಿಮಾ ಮಾಡೋದೆ ಹಾಗೇ, ಸಿನಿಮಾ ಸಮಯದಲ್ಲಿ ಸ್ವಲ್ಪ ಕಳೆದು ಹೋಗ್ತಾನೆ ಎಂದು ಹೇಳಿದ್ದಾರೆ. ಅವನಿಗೆ ನಮಷ್ಟೆಲ್ಲ ಅರ್ಜೆಂಟ್ ಇಲ್ಲ, ನಿಧಾನವಾಗಿ ವಾಪಸ್ ಬಂದು ಆರಾಮಾಗಿ ಅವನು ಸಿನಿಮಾ ಮಾಡ್ತಾನೇ ಎಂದಿದ್ದಾರೆ. ಇತ್ತೀಚೆಗೆ ಅವನೇ ಹೇಳಿದ್ದಾನಲ್ಲ, ನೋಡ್ತೀರಿ ಫೀನಿಕ್ಸ್‌ನಂತೆ ಎದ್ದು ಬರ್ತಾನೆ ಎಂದು ತಮ್ಮ ಗೆಳೆಯನ ಕುರಿತು ಪ್ರಮೋದ್ ಶೆಟ್ಟಿ ಹೇಳಿದ್ದಾರೆ. ಸದ್ಯ ಪ್ರಮೋದ್ ಶೆಟ್ಟಿ ಅವರ ಈ ಪ್ರತಿಕ್ರಿಯೆಗೆ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬರುತ್ತಿವೆ. ಪ್ರಮೋದ್ ಶೆಟ್ಟಿ ಅವರ ಈ ವಿಡಿಯೋ ವೈರಲ್ ಆಗಿದೆ.


Click it and Unblock the Notifications











