»   » ಲಂಕೇಶನ ಸೀತೆ : ಮುಂಬಯಿಯಿಂದ ಬರಬೇಕಾಯಿತೆ?

ಲಂಕೇಶನ ಸೀತೆ : ಮುಂಬಯಿಯಿಂದ ಬರಬೇಕಾಯಿತೆ?

Posted By:
Subscribe to Filmibeat Kannada

*ಸತ್ಯನಾರಾಯಣ

ಶೀತಲ್‌ ಬೇಡಿ.

ಈಕೆ ಪೂಜಾಬೇಡಿಯಷ್ಟು ಮಾದಕಳೂ ಅಲ್ಲ. ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೋನಿಕಾ ಬೇಡಿಯಷ್ಟು ಸುಂದರಿಯೂ ಅಲ್ಲ. ಪ್ರತಿಮಾ ಬೇಡಿಯಷ್ಟು ಪ್ರತಿಭಾವಂತೆ ಮೊದಲೇ ಅಲ್ಲ.

ಆದರೆ ಎತ್ತರವಾಗಿದ್ದಾಳೆ. ಕಟ್ಟುಮಸ್ತಾಗಿದ್ದಾಳೆ. ಜಲಲ ಜಲಲ ಜಲಧಾರೆಯಂತಿದ್ದಾಳೆ ಅನ್ನುವುದನ್ನು ಅಲ್ಲಗಳೆಯುವ ಹಾಗೂ ಇಲ್ಲ.

ಶೀತಲ್‌ ಬೇಡಿ ಪೊಲೀಸ್‌ ಪಾಟೀಲರು ಹುಡುಕಿಕೊಂಡು ಹೋಗಿ ಹಾಕಿಸಿಕೊಂಡ ‘ಬೇಡಿ’ ಅನ್ನುವುದು ತಮಾಷೆಯೇ ಇರಬಹುದು. ಆದರೆ, ಆಕೆಗಿಂತ ಕನ್ನಡದ ನಟಿಯರೇ ವಾಸಿ ಅನ್ನುವ ಅಭಿಪ್ರಾಯ ಈಗಾಗಲೇ ಕೇಳಿಬರುತ್ತಿದೆ.

ತಮ್ಮ ಹೊಸ ಚಿತ್ರಕ್ಕೆ ಹೊರನಾಡಿನ ನಾಯಕಿಯೇ ಬೇಕು ಎಂದು ಪಾಟೀಲ್‌ ಬಯಸಿದ್ದಕ್ಕೆ ಕಾರಣವೂ ಇದೆ. ಪಾಟೀಲರಿಗೆ ಈಗ ತಮ್ಮ ಚಿತ್ರದ ಭಾರವನ್ನು ತಾವೊಬ್ಬರೇ ಹೊರುವ ಬಗ್ಗೆ ಆತ್ಮವಿಶ್ವಾಸ ಇದ್ದಂತಿಲ್ಲ. ತಮ್ಮ ಅಶೋಕ್‌ ಪಾಟೀಲ್‌ ನಿರ್ದೇಶಿಸಿದ ಶಾಪದ ಬಗ್ಗೆಯೂ ಅವರು ಅಂಥಾ ಭರವಸೆ ಇಟ್ಟುಕೊಂಡಿಲ್ಲ. ‘ಯಾವ್ಯಾವ ನಿರ್ದೇಶಕರೋ ನನ್ನ ಸಿನಿಮಾ ಮಾಡಿದ್ದಾರಂತೆ. ಈಗ ನನ್ನ ತಮ್ಮ ಮಾಡುತ್ತಿದ್ದಾನೆ. ಏನಾದರೂ ಮಾಡಿಕೊಳ್ಳಲಿ ಬಿಡಿ’ ಎಂದು ಅವರೇ ಆತ್ಮೀಯರ ಬಳಿ ಹೇಳಿಕೊಂಡಿದ್ದೂ ಉಂಟು.

ಲಂಕೇಶ ರಾಮಾಯಣದ ಕತೆಯನ್ನು ಆಧರಿಸಿದ ಚಿತ್ರ. ಇದನ್ನು ನಿರ್ದೇಶಿಸಬೇಕಿದ್ದವರು ಮಹೇಂದರ್‌. ಆದರೆ ಅವರ ಜೊತೆ ಸಣ್ಣದೊಂದು ಜಗಳವಾಡಿದ ಪಾಟೀಲರು, ಆ ನಂತರ ಆನಂದ್‌ ಪಿ. ರಾಜು ನಿರ್ದೇಶಕರು ಎಂದು ಗುಟ್ಟಾಗಿ ಘೋಷಿಸಿದ್ದರು. ಆದರೆ, ಆನಂದರಾಜು, ಚನ್ನಪ್ಪಚನ್ನೇಗೌಡ ಚಿತ್ರದಲ್ಲಿ ತಮ್ಮ ಇಮೇಜು ಹಾಗೂ ವಯಸ್ಸನ್ನು ಬಹಿರಂಗಗೊಳಿಸಿದ ಮೇಲೆ ಅವರ ಮೇಲೂ ಪಾಟೀಲರಿಗೆ ವಿಶ್ವಾಸ ಹೋದಂತಿತ್ತು. ಹೀಗಾಗಿ ಅವರೇ ನಿರ್ದೇಶಕರಾಗುವ ನಿರ್ಧಾರ ಕೈಗೊಂಡರು. ಅಲ್ಲಿಗೆ ಪೊಲೀಸ್‌ ಮಹಾ ನಿರ್ದೇಶಕ ಪಾಟೀಲ್‌ ಎಂದು ಸ್ವಯಂಬಡ್ತಿಯನ್ನೂ ಅವರು ಪಡೆದುಕೊಂಡಂತಾಗಿದೆ.

ಇವರು ಮುಂಬೈಯಿಂದ ಕರೆತಂದ ಶೀತಲ್‌ ಈಗಾಗಲೇ ಗೋವಿಂದನ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾಳಂತೆ. ಹಾಗೇ, ಸುರೇಶ್‌ ಬೇರಿಯ ಚಿತ್ರದಲ್ಲೂ ನಟಿಸಿದ್ದಾಳಂತೆ. ಆಕೆಯನ್ನು ರೆಸ್ಟುರಾಂಟ್‌ ಒಂದರಲ್ಲಿ ಆಚಾನಕ್‌ ಕಂಡ ಲಂಕೇಶ ಮರುಳಾದ. ಸದ್ಯ ಹಾರಿಸಿಕೊಂಡು ಬರಲಿಲ್ಲ. ಆರಿಸಿಕೊಂಡು ಬಂದ. ಶೀತಲ್‌ಳ ಮನೆ ಹೆಸರು ಸೀತಾ. ಲಂಕೇಶನ ನಾಯಕಿಯ ಹೆಸರೂ ಅದೇ..ಜಾನಕಿ. ಮಂಡೋದರಿಯಾಗಿ ಭಾವನಾ ಆಯ್ಕೆಯಾಗಿದ್ದಾರೆ.

ಬೇಡಿ ಅಂತ ಹೆಸರಿಟ್ಟುಕೊಂಡವರೆಲ್ಲಾ ಎದೆಗಾರಿಕೆಯುಳ್ಳವರು ಎನ್ನುವ ಮಾತಿಗೆ ಶೀತಲ್‌ ಕೂಡಾ ಸಾಕ್ಷಿ. ಆಕೆಯ ತಂದೆ ಟ್ರಾನ್ಸ್‌ಫಾರ್ಮರ್‌ ಬಿಸಿನೆಸ್‌ ಮಾಡುತ್ತಾರಂತೆ.

ಕನ್ನಡ ಚಿತ್ರರಂಗ ಶೀತಲ್‌ಳ ಟ್ರಾನ್ಸ್‌ಫಾರ್ಮೇಶನ್‌ಗಾಗಿ ಕಾಯುತ್ತಿದೆ.

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X