»   » ಬೋಧೀವೃಕ್ಷದ ಕೆಳಗೆ ಶಿವರಾಜ್‌ಕುಮಾರ್‌ಗೆ ಏನಾಯ್ತು?

ಬೋಧೀವೃಕ್ಷದ ಕೆಳಗೆ ಶಿವರಾಜ್‌ಕುಮಾರ್‌ಗೆ ಏನಾಯ್ತು?

Posted By: * ಶ್ಯಾಮನೂರು ಸೀತಾರಾಮ
Subscribe to Filmibeat Kannada

ಕೆಲವೇ ತಿಂಗಳ ಹಿಂದೆ ಡಬ್ಬಿಂಗ್‌, ರೀಮೇಕ್‌ ತಪ್ಪೇನಿಲ್ಲ ಎಂಬ ಹೇಳಿಕೆ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ಹ್ಯಾಟ್ರಿಕ್‌ ಹೀರೋಗೆ ಈಗ ಜ್ಞಾನೋದಯ ಆಗಿದೆ. ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಆದಂತೆ, ಶಿವಣ್ಣನಿಗೆ ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರದಲ್ಲಿ ಜ್ಞಾನೋದಯ ಆಗಿದೆ.

'ಕೋದಂಡರಾಮ" ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಶಿವಣ್ಣ 'ಕನ್ನಡದಲ್ಲಿ ಉತ್ತಮ, ಅತ್ಯುತ್ತಮ ಕಥೆ, ಕಾದಂಬರಿಯ ಹಂದರವೇ ಇದೆ. ನಾವು ನಮ್ಮ ಭಾಷೆಯನ್ನು ಬಳಕೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳಸಲು ಅದ್ಯತೆ ನೀಡಬೇಕು" ಎಂದು ಕರೆಯನ್ನೂ ಕೊಟ್ಟಿದ್ದಾರೆ.


ಅಷ್ಟೇ ಅಲ್ಲ. ಕನ್ನಡದ ಕಥೆ, ಕಾದಂಬರಿ ಆಧಾರಿತ ಚಿತ್ರಗಳಲ್ಲೇ ನಟಿಸುವುದಾಗಿ ಶಪಥವನ್ನೂ ಮಾಡಿದ್ದಾರೆ. ಮುಂದಿನ ವರ್ಷದಿಂದ ರೀಮೇಕ್‌ ಚಿತ್ರದಲ್ಲಿ ನಟಿಸೋದಿಲ್ಲ ಎಂದು ಗಂಟಾಘೋಷವಾಗಿ ಸಾರಿದ್ದಾರೆ. (ಸುಂದರಕಾಂಡ ಚಿತ್ರದ ಸೆಟ್‌ನಲ್ಲೂ ಶಿವಣ್ಣ ಈ ಮಾತು ಹೇಳಿದ್ದರು) ಕೋದಂಡರಾಮ ಚಿತ್ರದ ಚಿತ್ರೀಕರಣ ಮುಗಿದ ನಂತರ ಹೊಸ ರೀಮೇಕ್‌ ಚಿತ್ರದಲ್ಲಿ ನಟಿಸಲ್ಲ ಎಂದೂ ಘೋಷಿಸಿದ್ದಾರೆ.

ನವೆಂಬರ್‌ ತಿಂಗಳಿನಲ್ಲಿ ವೀರಾವೇಶದಿಂದ ನೀಡಿದ ಹೇಳಿಕೆ ಇದಲ್ಲ. ಶಿವಣ್ಣ ಇದನ್ನು ಮಾಡಿ ತೋರಿಸುತ್ತಾರಂತೆ. ಹಾಗೆಂದ ಮಾತ್ರಕ್ಕೆ ಶಿವಣ್ಣ ಏನೂ ರೀಮೇಕ್‌ ವಿರೋಧಿಯಲ್ಲ. ರೀಮೇಕ್‌ನಲ್ಲೂ ಉತ್ತಮ ಚಿತ್ರಗಳು ಬಂದಿವೆ. ರೀಮೇಕ್‌ಗೆ ವಿದಾಯ ಹೇಳೋದು ನನ್ನ ವೈಯಕ್ತಿಕ ಅಭಿಪ್ರಾಯ ಅಂತಾರೆ ಅವರು.

ನಿರ್ದೇಶಕನಾಗುವ ಬಯಕೆ: ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುವ ತಮ್ಮ ಬಯಕೆಯನ್ನು ಶಿವರಾಜ್‌ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಭಕ್ತ ಅಂಬರೀಶ ಚಿತ್ರ ಮುಗಿದ ನಂತರ, ರಾಜ್‌ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಿಯೇ ತೀರುವುದಾಗಿ ಶಿವರಾಜ್‌ ಹೇಳಿದ್ದಾರೆ.

ಮತ್ತೊಂದು ಹಂಬಲ ಏನಾಯ್ತು? ಅಂದಹಾಗೆ ಸುಂದರಕಾಂಡದ ಸೆಟ್‌ನಲ್ಲಿ ಶಿವರಾಜ್‌, ಬೆಂಗಳೂರು- ಮೈಸೂರು ನಡುವೆ ಫಿಲಂ ಸಿಟಿ ಕಟ್ಟುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನೂ ಪ್ರಕಟಿಸಿದ್ದರು. ರಾಜ್ಯೋತ್ಸವದ ಹೊತ್ತಿಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡುವುದಾಗಿಯೂ ಹೇಳಿದ್ದರು. ರಾಜ್ಯೋತ್ಸವದಿನ ಕಳೆದು ಹದಿನೈದು ದಿನ ಆಕ್ತಾ ಬಂತು. ಆದರೆ, ಶಿವಣ್ಣನ ಈ ಮಹತ್ವಾಕಾಂಕ್ಷೆ ಏನಾಯ್ತು ಅಂಬೋದು ಮಾತ್ರ ತಿಳೀತಿಲ್ಲ ಅಷ್ಟೇ.....

English summary
Shivaraj kumar says goodbye to remake films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada