ಜೇಮ್ಸ್ ಡಬ್ಬಿಂಗ್ ಮುಗಿಸಿದ ಶಿವರಾಜ್ ಕುಮಾರ್: ಇದು ಸೇಫರ್ ಸೈಡ್‌ಗೆ ಮಾತ್ರ!
ಜೇಮ್ಸ್ ಸಿನಿಮಾ ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ಸಿನಿಮಾ. ಯಾಕೆಂದರೆ ಈ ಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ. ಈ ಚಿತ್ರವನ್ನು ನೋಡಲು ಅಭಿಮಾನಿಗಳು, ಕನ್ನಡ ಪ್ರೇಕ್ಷಕರು ಕಾಯುತ್ತಿದ್ದಾರೆ.
ಸದ್ಯ ಚಿತ್ರದ ಸಂಪೂರ್ಣ ಕೆಲಸಗಳು ಮುಗಿದಿವೆ. ಚಿತ್ರದ ಫೈನಲ್ ಔಟ್ ಪುಟ್ ಬರುವುದೊಂದೇ ಬಾಕಿ ಇದೆ. ಸದ್ಯದಲ್ಲಿಯೇ ಫೈನಲ್ ಕಾಪಿ ಚಿತ್ರತಂಡದ ಕೈ ಸೇರುತ್ತದೆ. ಇದಾದ ಬಳಿಕ ಸಿನಿಮಾದ ಬಗ್ಗೆ ಮುಂದಿನ ಅಪ್ಡೇಟ್ ನೀಡಲಿದೆ ಚಿತ್ರ ತಂಡ.
ಇನ್ನು ಜೇಮ್ಸ್ ಒಂದು ವಿಚಾರದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಅದುವೇ ಸಿನಿಮಾದಲ್ಲಿ ಅಪ್ಪು ವಾಯ್ಸ್ ಇರುತ್ತಾ ಅಥವಾ ಅಪ್ಪುಗೆ ಬೇರೆ ಯಾರಾದರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ವಿಚಾರ. ಆದರೆ ಈಗ ಇದಕ್ಕೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಜೇಮ್ಸ್ ಚಿತ್ರದಲ್ಲಿನ ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ.

ಜೇಮ್ಸ್ ಸಿನಿಮಾದ ಡಬ್ಬಿಂಗ್ ಮುಗಿಸಿದ ಶಿವರಾಜ್ ಕುಮಾರ್!
ಪುನೀತ್ ರಾಜ್‌ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಪಾತ್ರಕ್ಕೆ ಯಾರು ಧ್ವನಿ ನೀಡುತ್ತಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್‌ಕುಮಾರ್ ಅವರ ಹಿರಿಯಣ್ಣ ಶಿವರಾಜ್ ಕುಮಾರ್ ಅವರು ಅದಾಗಲೇ ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಎರಡು ದಿನಗಳ ಸಮಯದಲ್ಲಿ ಜೇಮ್ಸ್ ಚಿತ್ರ ಸಂಪೂರ್ಣ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ ಶಿವರಾಜ್‌ಕುಮಾರ್.

ಚಿತ್ರದ ಡಬ್ಬಿಂಗ್ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಹೇಳುವುದೇನು?
ಇನ್ನು ಚಿತ್ರದ ಡಬ್ಬಿಂಗ್ ಬಗ್ಗೆ ನಿರ್ದೇಶಕ ಚೇತನ್ ಫಿಲ್ಮಿ ಬೀಟ್ ಜೊತೆ ಮಾತನಾಡಿ ಹೇಳಿದ್ದು ಹೇಳಿದ್ದು ಹೀಗೆ. " ಶಿವರಾಜ್ ಕುಮಾರ್ ಅವರು ಜೇಮ್ಸ್ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಆ ಪಾತ್ರದ ಜೊತೆಗೆ ಅಪ್ಪು ಅವರ ಪಾತ್ರಕ್ಕೂ ಕೂಡ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಸಂಪೂರ್ಣ ಸಿನಿಮಾವನ್ನು ಶಿವರಾಜ್‌ಕುಮಾರ್ ಅವರು ಡಬ್ಬಿಂಗ್ ಮಾಡಿದ್ದಾರೆ. ಆದರೆ ಅವರದ್ದೇ ಧ್ವನಿ ಸಿನಿಮಾದಲ್ಲಿ ಇರುತ್ತೆ ಎಂದು ಹೇಳಲು ಆಗುವುದಿಲ್ಲ. ಯಾಕೆಂದರೆ ಅಪ್ಪು ಅವರ ಧ್ವನಿ ಇರಿಸಲು ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಫೆಬ್ರವರಿ 12ರ ವೇಳೆಗೆ ಅದರ ಪ್ರತಿ ನಮ್ಮ ಕೈಗೆ ಸಿಗುತ್ತದೆ. ಒಂದು ವೇಳೆ ಅಪ್ಪು ಅವರ ಧ್ವನಿಯನ್ನು ಬಳಸಲು ಸಾಧ್ಯ ಆಗದೇ ಇದ್ದರೆ. ಶಿವಣ್ಣನ ಧ್ವನಿ ಬಳಸಲಾಗುತ್ತದೆ. ಹಾಗಾಗಿ ಸ್ವತಃ ಶಿವಣ್ಣ ಅವರೇ ಚಿತ್ರದ ಕೆಲಸಗಳು ತಡ ಆಗಬಾರದು ಎಂದು ಅವರೇ ಬೇಗ ಡಬ್ಬಿಂಗ್ ಮುಗಿಸಿದ್ದಾರೆ." ಎಂದು ಚೇತನ್ ಕುಮಾರ್ ಅವರು ಹೇಳಿದ್ದಾರೆ.

ಅಪ್ಪು ಧ್ವನಿ ಕಾಪಾಡಲು ಜೇಮ್ಸ್ ತಂಡದ ಸತತ ಪ್ರಯತ್ನ!
ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯನ್ನು ಉಳಿಸಲು ಸಿನಿಮಾ ತಂಡ ಸಾಕಷ್ಟು ಪ್ರಯತ್ನ ಪಡುತ್ತಿದೆ. ಅದಕ್ಕಾಗಿ ಉತ್ತಮ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮಾಡಿದ್ದ ಸಂಭಾಷಣೆಯನ್ನು ಹಾಗೆ ಉಳಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ಅದು ಒಂದು ವೇಳೆ ಸಾಧ್ಯ ಆಗದೇ ಇದ್ದರೆ ಮಾತ್ರ, ಬೇರೆಯವರಿಂದ ಡಬ್ಬಿಂಗ್ ಮಾಡಿರುವ ಶಿವಣ್ಣ ಅವರ ಧ್ವನಿಯನ್ನು ಬಳಸಿಕೊಳ್ಳಲಾಗುತ್ತದೆ.

ಮಾರ್ಚ್ 17 ಜೇಮ್ಸ್ ರಿಲೀಸ್ ಪಕ್ಕ!
ನಟ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ರಿಲೀಸ್ ಆಗಲಿದೆ. ಮಾರ್ಚ್ 17ಕ್ಕೆ ಅಪ್ಪು ಜೇಮ್ಸ್ ರೂಪದಲ್ಲಿ ಅಪ್ಪು ಅಭಿಮಾನಿಗಳ ಮುಂದೆ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದ್ದಾರೆ. ಅದಕ್ಕೂ ಮುನ್ನ ಸದ್ಯದಲ್ಲಿಯೇ ಚಿತ್ರದ ಟೀಸರ್ ರಿಲಿಸ್ ಆಗಲಿದೆ.


Click it and Unblock the Notifications











