ಶಿವಣ್ಣ ಅಭಿಮಾನಿಗಳಿಂದ ಹೊಸ ಸಿನಿಮಾ ಆರಂಭ
ಬೆಳಗಾವಿ ಸಿಂಹದ ಮರಿ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದವರಾದ ಮಲ್ಲೇಶ.ಬ.ಪೂಜಾರಿ ಮತ್ತು ಶೇಖರ.ನಾ.ಕಾಲೇರಿ ಅವರ ನಿರ್ಮಾಣದಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದ್ದು, ಶಿವರಾಜ್ ಕುಮಾರ್ ಶುಭ ಹಾರೈಸಿದ್ದಾರೆ.
ವೃತ್ತಿಯಲ್ಲಿ ತರಕಾರಿ ಬೆಳೆಯುವವರಾಗಿರುವ ಇವರುಗಳು ಚಿತ್ರದ ಮಹೂರ್ತ ಸಮಾರಂಭಕ್ಕೆ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ತಂಡಕ್ಕೆ ಶುಭ ಕೋರಿದ್ದಾರೆ.
ಶಿವಣ್ಣ ಅಭಿಮಾನಿಗಳು ನಿರ್ಮಾಣ ಮಾಡುತ್ತಿರುವ 'ಪ್ರೊಡಕ್ಷನ್ ನಂ.1' ದಲ್ಲಿ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶಕರಾಗಿ ಚಂದೂರ ಮಾರುತಿ ಪರಿಚಯವಾಗುತ್ತಿದ್ದಾರೆ. ಇವರು ಸತತ 7 ವರ್ಷಗಳ ಕಾಲ ಬಿ.ಸುರೇಶ್ ಬಳಿ ಸಹಾಯಕರಾಗಿ ದುಡಿದ ಅನುಭವದಿಂದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಕತೆಯಲ್ಲಿ ಸೇವೆಯಲ್ಲಿರುವ ತಹಸೀಲ್ದಾರ್ ಮಗ ಡಿಗ್ರಿ ವ್ಯಾಸಂಗ ಮಾಡುತ್ತಿದ್ದು, ಒಂದು ದಿನ ಅಪ್ಪನ ದುಡ್ಡನ್ನು ಕಳ್ಳತನ ಮಾಡಿ ಪಲಾಯನ ಮಾಡುತ್ತಾನೆ. ಯಾವ ಕಾರಣ, ಉದ್ದೇಶಕ್ಕೆ ಹಣ ತೆಗೆದುಕೊಂಡು ಹೋದ ಎಂಬುದನ್ನು ಸಿನಿಮಾದಲ್ಲಿ ನೋಡಬೇಕಾಗಿದೆ. ಇದಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿಕೊಂಡು ಒಳ್ಳೆ ಚಿತ್ರ ಮಾಡಲು ಯೋಜನೆ ಹಾಕಿಕೊಂಡಿದೆ.
ಈ ಚಿತ್ರದಲ್ಲಿ ಅರುಣ್ ನಾಯಕನಾಗಿ (ಮಗನ ಪಾತ್ರ) ಕಾಣಿಸಿಕೊಳ್ಳುತ್ತಿದ್ದು, ಇದು ಇವರಿಗೆ ಎರಡನೇ ಸಿನಿಮಾ. ಬೆಂಗಳೂರಿನ ಚೈತ್ರ ನಾಯಕಿ. ಖಳನಾಯಕನಾಗಿ ಪ್ರಶಾಂತ್.ಜಿಕೆ ಬಣ್ಣ ಹಚ್ಚುತ್ತಿದ್ದಾರೆ. ಇವರೊಂದಿಗೆ ಮೈಕೋ ಮಂಜು, ಭವಾನಿಪ್ರಕಾಶ್, ಹರೀಶ್ ನೀನಾಸಂ, ಮಾಲತಿ ಶ್ರೀಮೈಸೂರು ತಾರಬಳಗದಲ್ಲಿದ್ದಾರೆ.
ಕಾರವಾರ, ಮೈಸೂರು, ಮಂಗಳೂರು, ಮಡಕೇರಿ, ಬೆಳಗಾಂ ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಸಿದ್ದತೆಗಳನ್ನು ಮಾಡಿಕೊಂಡಿದೆ. ಮಂಗಳೂರಿನ ಲಾಯ್ ವ್ಯಾಲೆಂಟನ್ ಸಂಗೀತದ ಐದು ಹಾಡುಗಳಿಗೆ ಡಾ..ನಾಗೇಂದ್ರಪ್ರಸಾದ್ ಮತ್ತು ಸತೀಶ್ ಮಾಚೇನಹಳ್ಳಿ ಗೀತರಚನೆ ಮಾಡುತ್ತಿದ್ದಾರೆ. ಛಾಯಗ್ರಹಣ ಕೃಷ್ಣಮಂಡ್ಯಾ, ಸಂಕಲನ ಪ್ರಕಾಶ್ ಕಾರಿಂಜ್ ಅವರದಾಗಿದೆ.


Click it and Unblock the Notifications











