ಅಂದು ಬಹಳ ಅತ್ತಿದ್ದೆ: ಹಳೆ ನೆನಪಿಗೆ ಜಾರಿದ ಶಿವಣ್ಣ
ನಟ ಶಿವರಾಜ್ ಕುಮಾರ್ ಸಿನಿಮಾ ರಂಗಕ್ಕೆ ಕಾಲಿಟ್ಟು 35 ವರ್ಷ ಕಳೆದಿವೆ. ಮೂರೂವರೆ ದಶಕದ ಹಿಂದೆ ಶಿವಣ್ಣನ ಮೊದಲ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಅವರ ಸ್ಟಾರ್‌ಡಮ್ ಹೆಚ್ಚಾಗುತ್ತಲೇ ಸಾಗಿದೆ.
ಸಿನಿಮಾ ರಂಗಕ್ಕೆ ಕಾಲಿಟ್ಟು 35 ವರ್ಷ ಕಳೆದ ಮೇಲೂ ಅದೇ ಯಶಸ್ಸನ್ನು, ಉತ್ಸಾವನ್ನು ಉಳಿಸಿಕೊಂಡು ಮುನ್ನಡೆಯುತ್ತಿದ್ದಾರೆ ಶಿವರಾಜ್ ಕುಮಾರ್. ಈಗಲೂ ಅವರು ಕನ್ನಡದ ಬ್ಯುಸಿಯೆಸ್ಟ್ ನಟ.
ಸಿನಿಮಾ ರಂಗದಲ್ಲಿ ಯಶಸ್ವಿಯಾಗಿ 35 ವರ್ಷ ಪೂರೈಸಿದ ಖುಷಿಯನ್ನು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು ಶಿವರಾಜ್ ಕುಮಾರ್. ಈ ಸಮಯ ಮಾತನಾಡಿದ ಅವರು, '35 ವರ್ಷಗಳಾಗಿವೆ, 50 ವರ್ಷಗಳ ವರೆಗೂ ಸಿನಿಮಾ ಮಾಡುತ್ತಲೇ ಇರುತ್ತೀನಿ' ಎಂದರು.
'1986 ರಿಂದ 2021 ಪಯಣವನ್ನು ಹಿಂತಿರುಗಿ ನೋಡಿದಾಗ ಇಷ್ಟು ವರ್ಷ ಹೇಗೆ ಕಳೆಯಿತೊ ಗೊತ್ತೇ ಆಗಲಿಲ್ಲ. ಪ್ರತಿ ಹುಟ್ಟುಹಬ್ಬಕ್ಕೆ ಒಂದು ವರ್ಷ ಹೆಚ್ಚಾದಂತೆ ಇದೂ ಸಹ ಆಗುತ್ತಲೇ ಇರುತ್ತದೆ. ಅಭಿಮಾನಿಗಳು ಪ್ರೀತಿಯಿಂದ ಸಂಭ್ರಮಿಸುತ್ತಾರೆ, ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ' ಎಂದರು ಶಿವರಾಜ್ ಕುಮಾರ್.

ಇನ್ನೂ 50 ವರ್ಷ ಕೆಲಸ ಮಾಡೋಣ: ಶಿವಣ್ಣ
'ಸುದೀರ್ಘ ಪಯಣಕ್ಕೆ ಕಾರಣವಾದ ಸಿನಿಮಾ ರಂಗಕ್ಕೆ ಧನ್ಯವಾದ ಹೇಳುತ್ತೇನೆ. ಅಪ್ಪಾಜಿ, ಅಮ್ಮ, ಸಹ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಶಿವಣ್ಣನ ಕೈ ಬಿಡಲಿಲ್ಲ. ಇನ್ನೂ ಸಿನಿಮಾದಲ್ಲಿ ನಟಿಸುವ ಶಕ್ತಿಯನ್ನು ಅಭಿಮಾನಿಗಳು ಕೊಟ್ಟಿದ್ದಾರೆ ಶಕ್ತಿ ದುಪ್ಪಟ್ಟಾಗಿದೆ, ಇನ್ನೂ 50 ವರ್ಷ ಕೆಲಸ ಮಾಡೋಣ' ಎಂದರು ಶಿವರಾಜ್ ಕುಮಾರ್.

ಮೊದಲ ದಿನ ಅತ್ತುಬಿಟ್ಟಿದ್ದರಂತೆ ಶಿವಣ್ಣ
ಮೊದಲ ದಿನ ಕ್ಯಾಮೆರಾ ಎದುರಿಸಿದ ಅನುಭವ ನೆನಪಿಸಿಕೊಂಡ ಶಿವರಾಜ್ ಕುಮಾರ್, 'ಆನಂದ್ ಸಿನಿಮಾದ ಮುಹೂರ್ತದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿತ್ತು ಆ ಸಂದರ್ಭದಲ್ಲಿ ಅಪ್ಪಾಜಿ, ಅಮ್ಮ, ಚಿ.ಉದಯ್ ಶಂಕರ್ ಸೇರಿದಂತೆ ಇಡೀಯ ಸಿನಿಮಾ ರಂಗವೇ ನೆರೆದಿತ್ತು. ಮೊದಲ ಶಾಟ್ ತೆಗೆದ ನಂತರ ನಾನು ಅತ್ತು ಬಿಟ್ಟಿದ್ದೆ' ಎಂದು ಹಳೆಯ ನೆನಪುಗಳಿಗೆ ಜಾರಿದರು ಶಿವಣ್ಣ.

ಇಂಥಹಾ ಪಾತ್ರ ಮಾಡಿಲ್ಲವೆಂಬ ಕೊರಗು ಇಲ್ಲ: ಶಿವಣ್ಣ
'ಇಂಥಹಾ ಪಾತ್ರ ಮಾಡಿಲ್ಲ ಎಂಬ ಕೊರಗು ಇಲ್ಲ. ರೌಡಿಸಂ ಪಾತ್ರಗಳಲ್ಲಿ ನನ್ನನ್ನು ನೋಡಲು ಜನ ಬಯಸುತ್ತಾರೆ. ಹೀಗೆಂದು ಬರೀ ಮಚ್ಚು ಹಿಡಿದುಕೊಂಡು ಹೊರಟೆ, ಇವನಿಗೇನು ಕೆಲಸ ಇಲ್ವಾ ಎಂದುಕೊಳ್ಳುತ್ತಾರೆ. ನಾನು ನಟಿಸಿದ ಕೌಟುಂಬಿಕ ಸಿನಿಮಾಗಳು, ಹಳ್ಳಿ ಕತೆಯ ಸಿನಿಮಾಗಳು ಹಿಟ್ ಆಗಿವೆ. ಭಿನ್ನ ಪಾತ್ರಗಳನ್ನು ಮಾಡುವ ಪ್ರಯತ್ನ ನಡೆದೇ ಇರುತ್ತದೆ' ಎಂದರು ಶಿವಣ್ಣ.
Recommended Video

'ಸ್ಟಾರ್ ನಟರ ಸಿನಿಮಾವನ್ನು ಸ್ಟಾರ್ ನಿರ್ದೇಶಕರೇ ಮಾಡಬೇಕೆಂದಿಲ್ಲ'
ಯುವ ನಿರ್ದೇಶಕರ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, 'ಯುವ ನಿರ್ದೇಶಕರು ಬಂದಾಗ ಅವರನ್ನು ಕೇಳಿಸಿಕೊಳ್ಳುವ ಗುಣ ಇರಬೇಕು. ಸ್ಟಾರ್ ನಿರ್ದೇಶಕರೇ ಸ್ಟಾರ್ ನಟರ ಸಿನಿಮಾ ಮಾಡಬೇಕು ಎಂದೇನೂ ಇಲ್ಲ. ಕತೆ ಇಷ್ಟವಾಗಲಿ, ಬಿಡಲಿ, ನಾವು ಕತೆ ಕೇಳಿದರೆ ಅವರಿಗೆ ಆ ತೃಪ್ತಿಯಾದರೂ ಇರುತ್ತದೆ' ಎಂದರು ಶಿವರಾಜ್ ಕುಮಾರ್.


Click it and Unblock the Notifications