ಜಾಡಮಾಲಿ ಪಾತ್ರದಲ್ಲಿ ನಟಿಸುವ ಆಸೆಯಿದೆ: ಶಿವರಾಜ್
ನಾಲ್ಕು ದಶಕದಿಂದ ಚಿತ್ರರಂಗದಲ್ಲಿರುವ ಶಿವರಾಜ್ ಕುಮಾರ್ ಅಭಿನಯಿಸದ ಪಾತ್ರಗಳಿಲ್ಲ. ಆದರೆ ಈಗಲೂ ಹೊಸತನಕ್ಕಾಗಿ ತುಡಿಯುವ ನಟ ಶಿವರಾಜ್ ಕುಮಾರ್.
ಪೌರಾಣಿಕ, ಐತಿಹಾಸಿಕ, ಮಾಸ್, ಕ್ಲಾಸ್ ಎಲ್ಲ ರೀತಿಯ ಪಾತ್ರಗಳಲ್ಲಿಯೂ ಶಿವರಾಜ್ ಕುಮಾರ್ ನಟಿಸಿ ಆಗಿದೆ. ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವರಾಜ್ ಕುಮಾರ್ ತಮಗೆ ಎಂಥಹಾ ಪಾತ್ರದಲ್ಲಿ ನಟಿಸಲು ಆಸೆಯಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
''ದುನಿಯಾ ವಿಜಯ್ ನಿರ್ದೇಶಕರಾಗಿದ್ದಾರೆ. ಅವರು ನಿರ್ದೇಶಿಸುವ ಸಿನಿಮಾದಲ್ಲಿ ಯಾವ ರೀತಿಯ ಪಾತ್ರದಲ್ಲಿ ನಟಿಸಲು ನಿಮಗೆ ಇಷ್ಟ'' ಎಂದು ನಿರೂಪಕಿ ಅನುಶ್ರೀ ಮಾಡಿದ ಪ್ರಶ್ನೆಗೆ, ''ಈಗ ಮಾಡಿರುವ ಪಾತ್ರಗಳನ್ನು ಬಿಟ್ಟು ಬೇರೆಯದ್ದೇ ರೀತಿಯ ಪಾತ್ರ ಮಾಡಲು ಇಷ್ಟಪಡುತ್ತೀನಿ'' ಎಂದಿದ್ದಾರೆ ಶಿವರಾಜ್ ಕುಮಾರ್.

''ತೀರಾ ಸಾಮಾನ್ಯ ಪಾತ್ರವಾದರೂ ಮಾಡುತ್ತೇನೆ. ಚರಂಡಿ ಕ್ಲೀನ್ ಮಾಡುವ ತೋಟಿಯ ಪಾತ್ರವನ್ನು ಮಾಡುತ್ತೇನೆ. ಆ ರೀತಿಯ ಪಾತ್ರ ಮಾಡುವ ಆಸೆಯಿದೆ. ಯಾಕೆಂದರೆ ಸಮಾಜದಲ್ಲಿ ಸ್ವಚ್ಛ ಮಾಡಬೇಕಿರುವುದು ಜಾಸ್ತಿ ಇದೆ. ಅದಕ್ಕೆ ಹೊಂದಿಗೆ ಆಗುವಂಥಹಾ ಕತೆ ಸಿಕ್ಕರೆ ಅಂಥಹಾ ಪಾತ್ರವನ್ನು ಮಾಡುವೆ'' ಎಂದರು ಶಿವರಾಜ್ ಕುಮಾರ್.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ, ನಿರ್ದೇಶಕ ದುನಿಯಾ ವಿಜಯ್, ''ಸಿನಿಮಾ ನಿರ್ದೇಶನ ಮಾಡುವ ಮುಂಚೆ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ನಿರ್ದೇಶನ ಮಾಡುತ್ತಿರುವ ವಿಷಯ ಹೇಳಿದೆ. ಒಳ್ಳೆಯದು ಮಾಡು ಎಂದರು ಜೊತೆಗೆ ಕಷ್ಟಪಟ್ಟು ಸಿನಿಮಾ ಮಾಡು, ಶ್ರಮ ಹಾಕು ಎಂದಿದ್ದರು, ಅದು ನನಗೆ ಇಷ್ಟವಾಯಿತು. ಯಾವುದೇ ಕೆಲಸಕ್ಕೆ ಶ್ರಮ ಹಾಕುವುದು ನನಗೆ ಇಷ್ಟ. ಶಿವಣ್ಣ ಸಹ ಅದನ್ನೇ ಹೇಳಿದರು'' ಎಂದರು ದುನಿಯಾ ವಿಜಯ್.
ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಅಕ್ಟೋಬರ್ 29ರಂದು ಸಿನಿಮಾ ತೆರೆಗೆ ಬರಲಿದೆ. ಶಿವಣ್ಣ ಅಭಿನಯದ 'ಭೈರವ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅವರುಗಳು ಸಿನಿಮಾದಲ್ಲಿದ್ದಾರೆ. 'ನೀ ಸಿಗೊವರೆಗೆ' ಹೆಸರಿನ ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಶಿವಣ್ಣ, ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಹಾಗೂ ಹೊಸ ನಿರ್ದೇಶಕರೊಬ್ಬರ 'ಸತ್ಯಮಂಗಲ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಟ ಪ್ರಭುದೇವ್ ಜೊತೆಗೆ ಶಿವಣ್ಣ ನಟಿಸಲಿದ್ದಾರೆ. ಇದೆಲ್ಲದರ ಜೊತೆಗೆ ಗೀತಾ ಪಿಕ್ಚರ್ಸ್ ಬ್ಯಾನರ್‌ನ ಹೊಸ ಸಿನಿಮಾಕ್ಕೂ ಶಿವಣ್ಣ ಸಹಿ ಹಾಕಿದ್ದಾರೆ.


Click it and Unblock the Notifications











