ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್‌ಕುಮಾರ್ ಚಿತ್ರರಂಗವನ್ನು ಪ್ರತಿನಿಧಿಸಬಾರದಂತೆ!
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಇಂದಿನಿಂದ (ಜನವರಿ 9) ಪಾದಯಾತ್ರೆ ಆರಂಭಿಸಿದೆ. ಕನಕಪುರ ಕೋಟೆಯಿಂದ ಬೆಂಗಳೂರಿನವರೆಗೂ ಕಾಲ್ನಡಿಗೆ ಜಾಥಾ ಸಾಗಲಿದೆ. 11 ದಿನಗಳ ಕಾಲ, ಜನವರಿ 19ರವರೆಗೂ ಈ ಪಾದಯಾತ್ರೆ ನಡೆಯಲಿದೆ. 165ಕ್ಕೂ ಹೆಚ್ಚು ಕಿಲೋ ಮೀಟರ್ ಪಾದಯಾತ್ರೆ ಮಾಡಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಂ ತಯಾರಾಗಿದೆ. ಆದರೆ ಈ ಪಾದ ಯಾತ್ರೆಗೆ ಸಿನಿಮಾ ತಾರೆಯರು ಕೂಡ ಸಾಥ್ ನೀಡಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಮೇಕೆದಾಟು ಪಾದಯಾತ್ರೆಗೆ ಕನ್ನಡ ಹಲವು ತಾರೆಯರು ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಗೆ ಆಹ್ವಾನ ನೀಡಲಾಗಿದೆ. ಹಲವು ಕನ್ನಡ ಸಿನಿಮಾ ತಾರೆಯರು ಈ ಪಾದಯಾತ್ರೆಯಲ್ಲಿ ಭಾಗಿ ಆಗುವ ಸಾಧ್ಯತೆ ಕೂಡ ಇದೆ. ಈಗಾಗಲೇ ಸಾಧುಕೋಕಿಲ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು, ಕೊನೆ ತನಕ ಇರುತ್ತೇನೆ, ಇದು ಕಲಾವಿದರ ಕರ್ತವ್ಯ ಎಂದಿದ್ದಾರೆ.
ಆದರೆ ಈಗ ಎಲ್ಲರ ಚಿತ್ತ ನಟ ಶಿವರಾಜ್ ಕುಮಾರ್ ಅವರ ನಡೆಯತ್ತ ನೆಟ್ಟಿದೆ. ಅಂದರೆ ಶಿವರಾಜ್‌ಕುಮಾರ್ ಅವರು ಸದ್ಯ ಚಿತ್ರರಂಗಕ್ಕೆ ಹಿರಿಯಣ್ಣ ಇದ್ದ ಹಾಗೆ. ಹಾಗಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆದರೆ ಅಥವಾ ಭಾಗಿ ಆಗದೇ ಇದ್ದರೆ ಅದು ದೊಡ್ಡ ಸಂದೇಶವನ್ನು ರವಾನೆ ಮಾಡುತ್ತದೆ. ಹಾಗಾಗಿ ಶಿವಣ್ಣ ಯಾವ ನಿರ್ಧಾರ ತೆಗೆದು ಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಶಿವರಾಜ್ ಕುಮಾರ್ ಅವರು ಈ ಪಾದಯಾತ್ರೆಯಲ್ಲಿ ಭಾಗಿ ಆಗುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ಶಿವಣ್ಣನ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟಿಲ್ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಬರೆದು ಕೊಂಡಿದ್ದಾರೆ. "ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಈ ಸಭೆಯಲ್ಲಿ ಭಾಗವಹಿಸಲಿಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಕಲಾವಿದರಾಗಿ ಕಲಾವಿದರ ಸಂಘದ ಅಧ್ಯಕ್ಷರಾಗಿ ಕಲಾವಿದರನ್ನ ಪ್ರತಿನಿಧಿಸುವಂಥ ಕೆಲಸ ಇದರಿಂದ ಆಗಬಾರದು ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ" ಎಂದು ಟ್ವೀಟ್‌ನಲ್ಲಿ ಬರೆದು ಕೊಂಡಿದ್ದಾರೆ.
ಈ ಮೂಲಕ ಶಿವರಾಜ್‌ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆದರೆ, ಅವರು ಎಲ್ಲಾ ಕಲಾವಿದರನ್ನು ಪ್ರತಿನಿಧಿಸುತ್ತಾರೆ. ಆದರೆ ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಆಗಿರುವುದರಿಂದ, ಅವರು ಪಕ್ಷದ ಸದಸ್ಯರಾಗಿ ಭಾಗಿ ಆಗಲಿ ಎಂದು ಬಿ.ಸಿ ಪಾಟಿಲ್ ಅವರು ತಿಳಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಅವರು ಭಾಗಿ ಆಗುವುದು ಕೂಡ ಬಹುತೇಕ ಅನುಮಾನ. ಈ ಬಗ್ಗೆ ನಟ ಶಿವರಾಜ್‌ಕುಮಾರ್ ಅವರೇ ಮಾತನಾಡಬೇಕು.


Click it and Unblock the Notifications











