Bairagee Teaser: 'ಭೈರಾಗಿ'ಯಾಗಿ ಶಿವಣ್ಣ ಅಬ್ಬರ, ಡಾಲಿ ಎಲ್ಲಿ?
ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ 'ಭೈರಾಗಿ'ಯ ಟೀಸರ್ ಇಂದು ಬಿಡುಗಡೆ ಆಗಿದ್ದು, ಶಿವಣ್ಣ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
1:23 ನಿಮಿಷದ ಟೀಸರ್ ಇದಾಗಿದ್ದು, ಟೀಸರ್ ತುಂಬೆಲ್ಲ ಶಿವಣ್ಣನೆ ಇದ್ದಾರೆ. ಸಿಟ್ಟಿನ, ಆಕ್ರೋಶದ ವ್ಯಕ್ತಿಯಾಗಿ ಆದರೆ ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯ ಪಾತ್ರದಲ್ಲಿ ಶಿವರಾಜ್ ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
'ವೇಷ ಹಾಕಿದಾಗ ಮಾತ್ರವಲ್ಲ ನೀನು ಯಾವಾಗಲೂ ಹುಲೀನೆ ಅಂತ ಹೇಳಿ ದೊಡ್ಡೋರು ಬೆಳಿಸಿದ್ರು, ನಾನು ಬೆಳೀತಾ ಬೆಳೀತಾ ಆ ಹುಲಿನೂ ನನ್ ಜೊತೆ ಬೆಳೆದೋಯ್ತು'' ಎಂಬ ಖಡಕ್ ಡೈಲಾಗ್ ಜೊತೆ ಆರಂಭವಾಗುವ ಟೀಸರ್ ಮುಗಿಯುವವರೆಗೆ ಖಡಕ್ ತನ ಹಾಗೆಯೇ ಉಳಿಸಿಕೊಂಡಿದೆ.

ಮುಖಕ್ಕೆ ಹುಲಿ ವೇಷ ಧರಿಸಿದ ಶಿವಣ್ಣ ಕೋಪೋದ್ರಿಕ್ತ ಕಣ್ಣುಗಳು ಅಭಿಮಾನಿಗಳಿಗೆ ಹಬ್ಬ. ಟೀಸರ್‌ನಲ್ಲಿ ನಟ ಪೃಥ್ವಿ ಅಂಬರ್ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಅವರದ್ದೂ ಸಿನಿಮಾದಲ್ಲಿ ಮಹತ್ವದ ಪಾತ್ರ. ಇದು ಅಣ್ಣ ತಮ್ಮನ ಕತೆಯೇ ಎಂದು ಸ್ಪಷ್ಟವಾಗಿ ಹೇಳಲು ಸುಳಿವುಗಳನ್ನು ಟೀಸರ್‌ನಲ್ಲಿ ಬಿಟ್ಟುಕೊಡಲಾಗಿಲ್ಲ. ಸಿನಿಮಾದ ನಾಯಕಿಯ ಪರಿಚಯವೂ ಟೀಸರ್‌ನಲ್ಲಿ ಆಗಿಲ್ಲ.
ಆಕ್ರೋಶ ಭರಿತ ಯುವಕನೊಬ್ಬ ಪರಿಸ್ಥಿತಿ ಒತ್ತಡಗಳಿಗೆ ಮಣಿದು ಮೌನವಾಗುವ, ಸಿಟ್ಟನ್ನೆಲ್ಲ ಒಡಲೊಳಗೆ ಬಂಧಿಸಿಡುವ ವ್ಯಕ್ತಿಯ ಕತೆಯನ್ನು ಸಿನಿಮಾ ಹೊಂದಿದೆ ಎಂಬುದು ಟೀಸರ್‌ನಲ್ಲಿ ಬರುವ ಕೆಲವು ಡೈಲಾಗ್‌ಗಳಿಂದ ಗೊತ್ತಾಗುತ್ತಿದೆ.
'ಭೈರಾಗಿ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್ ಸಹ ನಟಿಸಿದ್ದಾರೆ ಆದರೆ ಟೀಸರ್‌ನಲ್ಲಿ ಅವರು ಕಾಣಿಸಿಕೊಳ್ಳುವುದು ಒಂದೇ ದೃಶ್ಯದಲ್ಲಿ ಅದೂ ಅರೆ ಸೆಕೆಂಡ್ ಅಷ್ಟೆ. ಪೋಸ್ಟರ್‌ಗಳಲ್ಲಿ ಶಿವಣ್ಣ-ಡಾಲಿ ಧನಂಜಯ್ ಆತ್ಮೀಯರಾಗಿರುವಂತೆ ಕಾಣುತ್ತಿದೆಯಾದರೂ, ಟೀಸರ್‌ನಲ್ಲಿ ಡಾಲಿ ಧನಂಜಯ್ ಅವತಾರ ನೋಡಿದರೆ ಅವರೇ ಸಿನಿಮಾದ ವಿಲನ್ ಏನೋ ಎನಿಸುತ್ತದೆ. ಡಾಲಿ ಪಾತ್ರಕ್ಕೆ ಟೀಸರ್‌ನಲ್ಲಿ ಆದ್ಯತೆಯೇ ಇಲ್ಲ. ಅವರ ಪಾತ್ರಕ್ಕಾಗಿ ವಿಶೇಷ ಟೀಸರ್ ಅಥವಾ ಪೋಸ್ಟರ್ ಬಿಡುಗಡೆ ಮಾಡುವ ಉದ್ದೇಶದಿಂದ ಚಿತ್ರತಂಡ ಹೀಗೆ ಮಾಡಿರುವ ಸಾಧ್ಯತೆ ಇದೆ.
'ಭೈರಾಗಿ' ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಕೃಷ್ಣ ಸಾರ್ಥಕ್. ಸಂಗೀತ ಅನೂಪ್ ಸಿಳಿನ್ ಅವರದ್ದು. ಸಂಭಾಷಣೆ ಗುರು ಕಶ್ಯಪ್. ಸಿನಿಮಾವು ಶೀಘ್ರದಲ್ಲಿಯೇ ತೆರೆಗೆ ಬರಲಿದೆ. 'ಭೈರಾಗಿ' ಸಿನಿಮಾದ ಟೀಸರ್ ಅನ್ನು 'ಜೇಮ್ಸ್' ಸಿನಿಮಾದ ಇಂಟರ್‌ವೆಲ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ.
'ಭೈರಾಗಿ' ಜೊತೆಗೆ ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ. ಪ್ರೇಮಕತಾ ಸಿನಿಮಾ 'ನೀ ಸಿಗೊವರೆಗೆ', ಸ್ವಂತ ಪ್ರೊಡಕ್ಷನ್ ಸಿನಿಮಾ 'ವೇದ', ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾ, ತೆಲುಗು ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶಿಸುತ್ತಿರುವ ಸಿನಿಮಾ, ಆರ್ ಚಂದ್ರು ನಿರ್ದೇಶನದ 'ಬಾದ್‌ಶಾ' ಇನ್ನೂ ಹಲವಾರು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ.


Click it and Unblock the Notifications











