ರಣಗಲ್ ಯುಗದ ಆರಂಭವನ್ನು ನೋಡಲು ಸಿದ್ಧರಾಗಿ; ಭೈರತಿ ರಣಗಲ್ ಪ್ಯಾನ್ ಇಂಡಿಯಾ ಪೋಸ್ಟರ್ ರಿಲೀಸ್

2017ರ ಡಿಸೆಂಬರ್ ಒಂದರಂದು ಬಿಡುಗಡೆಯಾಗಿ ಕನ್ನಡ ಸಿನಿ ರಸಿಕರಲ್ಲಿ ಹುಚ್ಚೆಬ್ಬಿಸಿದ್ದ ಸಿನಿಮಾ ಮಫ್ತಿ. ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕ್ಯಾಂಪ್‌ನ ನರ್ತನ್ ನಿರ್ದೇಶಿಸಿದ್ದರು. ಹೆಚ್ಚೇನೂ ಹೈಪ್ ಇಲ್ಲದೇ ಬಿಡುಗಡೆಗೊಂಡ ಈ ಚಿತ್ರ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಂದಿಗೂ ಸಹ ಹಲವಾರು ಸಿನಿ ರಸಿಕರ ಫೇವರಿಟ್ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರವಿದೆ.
ಹೀಗೆ ಐದು ವರ್ಷಗಳ ಹಿಂದೆ ತೆರೆಕಂಡು ಗೆದ್ದಿದ್ದ ಮಫ್ತಿ ಚಿತ್ರದ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಬರುತ್ತಾ ಎಂಬ ಚರ್ಚೆ ಹಲವು ದಿನಗಳಿಂದ ಹರಿದಾಡಿತ್ತು. ಅದರಲ್ಲಿಯೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟಕ್ಕೆ ಬೆಳೆದು ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಕ್ರೇಜ್ ಹೆಚ್ಚಾದ ಮೇಲಂತೂ ಮಫ್ತಿ ಚಿತ್ರದ ಎರಡನೇ ಭಾಗ ಯಾವಾಗ ಬರಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.
ಇನ್ನು ನಿರ್ದೇಶಕ ನರ್ತನ್ ಹಲವು ವರ್ಷಗಳ ಹಿಂದೆಯೇ ಭೈರತಿ ರಣಗಲ್ ಎಂಬ ಸಪರೇಟ್ ಸಿನಿಮಾವನ್ನು ನಿರ್ದೇಶಿಸಲಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದರು. ಚಿತ್ರದಲ್ಲಿ ಗಣ ಪಾತ್ರವನ್ನು ಶ್ರೀ ಮುರಳಿ ನಿರ್ವಹಿಸಿದ್ದರೆ, ಭೈರತಿ ರಣಗಲ್ ಪಾತ್ರವನ್ನು ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ನಿರ್ವಹಿಸಿದ್ದರು. ಚಿತ್ರ ಇನ್ನೇನೂ ಮಧ್ಯಂತರಕ್ಕೆ ಬಂದು ತಲುಪಲಿದೆ ಎನ್ನುವಾಗ ಕಥೆಗೆ ಎಂಟ್ರಿ ಕೊಡುವ ಭೈರತಿ ರಣಗಲ್ ಪಾತ್ರಕ್ಕೆ ಫಿದಾ ಆಗದವರಿಲ್ಲ.
ದೊಡ್ಡ ಡಾನ್ ಆದರೂ ನೀಯತ್ತು, ರೌಡಿಸಂ ಮಾಡಿದ್ರೂ ಜನರಿಗೆ ಸೈಲೆಂಟ್ ಆಗಿ ಸಹಾಯ ಮಾಡುವ ಭೈರತಿ ರಣಗಲ್ ಪಾತ್ರ ಸಿನಿ ರಸಿಕರಿಗೆ ಇಷ್ಟವಾಗಿತ್ತು. ಗಣ ಮಂಗಳೂರಿಗೆ ಅಂಡರ್ ಕವರ್ ಪೊಲೀಸ್ ಆಗಿ ಬರುವ ಕಥೆಯ ಮಧ್ಯದಲ್ಲಿ ಬರುವ ಭೈರತಿ ರಣಗಲ್ ಪಾತ್ರದ ಹಿನ್ನೆಲೆ ಏನು ಎಂಬುದನ್ನು ಮಾತ್ರ ಈ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಿರಲಿಲ್ಲ. ಹೀಗಾಗಿ ಭೈರತಿ ರಣಗಲ್ ಬಾಲ್ಯ ಹೇಗಿತ್ತು, ಯಾವ ಕಾರಣಕ್ಕಾಗಿ ಆತ ಈ ಹಾದಿ ಹಿಡಿದ ಎಂಬ ಪ್ರಶ್ನೆ ಹಾಗೂ ಕೌತುಕ ಸಿನಿ ರಸಿಕರ ತಲೆಯಲ್ಲಿ ಹೊಳೆದಿತ್ತು.
ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಐದು ವರ್ಷಗಳ ಬಳಿಕ ಉತ್ತರವನ್ನು ನೀಡಲು ನಿರ್ದೇಶಕ ನರ್ತನ್ ಸಜ್ಜಾಗಿದ್ದಾರೆ. ಮಫ್ತಿ ಚಿತ್ರದ ಪ್ರೀಕ್ವೆಲ್ 'ಭೈರತಿ ರಣಗಲ್' ಅನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಘೋಷಣೆ ಕಳೆದ ಕೆಲ ದಿನಗಳ ಹಿಂದಷ್ಟೇ ಆಗಿತ್ತು. ಇಂದು ( ಮಾರ್ಚ್ 5 ) ಚಿತ್ರದ ಪ್ಯಾನ್ ಇಂಡಿಯಾ ಪೋಸ್ಟರ್‌ಗಳು ಬಿಡುಗಡೆ ಮಾಡಲಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳ ಪ್ರತ್ಯೇಕ ಪೋಸ್ಟರ್‌ಗಳು ಬಿಡುಗಡೆಗೊಂಡಿವೆ.
ಪೋಸ್ಟರ್ ಹಂಚಿಕೊಂಡ ಪೋಸ್ಟ್‌ನಲ್ಲಿ ಭೈರತಿ ರಣಗಲ್ ಯುಗದ ಆರಂಭದ ದಿನಗಳನ್ನು ನೋಡಲು ಸಿದ್ಧರಾಗಿ ಎಂದು ಬರೆಯಲಾಗಿದೆ. ಈ ಹಿಂದೆ ಶಿವಣ್ಣ ಖುರ್ಚಿ ಮೇಲೆ ಕುಳಿತಿದ್ದ ಚಿತ್ರವನ್ನೇ ಈ ಪೋಸ್ಟರ್‌ನಲ್ಲಿಯೂ ಸಹ ಬಳಸಲಾಗಿದೆ. ಇದು ಶಿವ ರಾಜ್‌ಕುಮಾರ್ ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ಘೋಷಿಸಲ್ಪಟ್ಟಿರುವ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕಳೆದ ವರ್ಷ ವೇದ ಚಿತ್ರಕ್ಕೆ ಬಂಡವಾಳ ಹೂಡಿ ಗೆದ್ದಿದ್ದ ಗೀತಾ ಶಿವ ರಾಜ್‌ಕುಮಾರ್ ಈ ಚಿತ್ರಕ್ಕೂ ಬಂಡವಾಳ ಹೂಡಲು ಮುಂದಾಗಿದ್ದಾರೆ.


Click it and Unblock the Notifications











