ಭಜರಂಗಿ 2 ಟ್ರೇಲರ್ ಬಿಡುಗಡೆ: ರಾಕ್ಷಸ-ದೈವದ ನಡುವಿನ ಸಂಘರ್ಷ
ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಭಜರಂಗಿ 2' ಟ್ರೇಲರ್ ಇಂದಷ್ಟೆ ಬಿಡುಗಡೆ ಆಗಿದೆ. ಟ್ರೇಲರ್‌ನಲ್ಲಿನ ಭವ್ಯತೆ, ಭಿನ್ನ-ಭಿನ್ನ ಪಾತ್ರಗಳು, ಅದ್ಧೂರಿ ಗ್ರಾಫಿಕ್ಸ್ ಎಲ್ಲಕ್ಕೂ ಕಳಶವಿಟ್ಟಂತೆ ಶಿವಣ್ಣ ಸಿನಿಮಾ ನೋಡುವ ಕುತೂಹಲವನ್ನು ದುಪ್ಪಟ್ಟುಗೊಳಿಸಿವೆ.
2013 ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ' ಸಿನಿಮಾದ ಮುಂದುವರೆದ ಭಾಗ 'ಭಜರಂಗಿ 2' ಎನ್ನಲಾಗುತ್ತಿದ್ದು, ಮೊದಲ 'ಭಜರಂಗಿ'ಗಿಂತಲೂ ದುಪ್ಪಟ್ಟು ಮನರಂಜನೆ ಇರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.
ಟ್ರೇಲರ್ ತುಂಬ ಭರ್ಜರಿ ಸೆಟ್‌ಗಳು, ಅದ್ಭುತ ಗ್ರಾಫಿಕ್ಸ್‌ಗಳು, ಭಿನ್ನ-ಭಿನ್ನ ಮ್ಯಾನರಿಸಂನ ಪಾತ್ರಗಳು ಕಣ್ಣ್ ತುಂಬುತ್ತಿವೆ. ಶಿವಣ್ಣನ ಎಂಟ್ರಿ ಮತ್ತು ಲುಕ್ ಅಂತೂ ಅಭಿಮಾನಿಗಳಿಗೆ ಮೈನವಿರೇಳಿಸುತ್ತದೆ. ಸೌರವ್ ಲೋಕೇಶ್ ಪಾತ್ರವೂ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. ಮೊದಲ 'ಭಜರಂಗಿ' ಸಿನಿಮಾದಲ್ಲಿಯೂ ಅವರ ಪಾತ್ರ ಬಹುವಾಗಿ ಹಿಟ್ ಆಗಿತ್ತು.

ಸಿನಿಮಾದಲ್ಲಿ ರಾಕ್ಷಸ-ದೈವದ ನಡುವೆ ಕದನ ಇರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. ಅತೀಂದ್ರಿಯ ಶಕ್ರಿ, ಅತಿಮಾನವೀಯ ಶಕ್ತಿಗಳ ಅದಮ್ಯ ಲೋಕವನ್ನು ನಿರ್ದೇಶಕ ಹರ್ಷ 'ಭಜರಂಗಿ 2' ನಲ್ಲಿ ತೋರಿಸಲಿದ್ದಾರೆ.
ಸಿನಿಮಾದಲ್ಲಿನ ಮಹಿಳಾ ಪಾತ್ರಗಳು ಸಾಕಷ್ಟು ಶಕ್ತವಾಗಿವೆ ಎಂದು ಟ್ರೇಲರ್‌ನಿಂದ ಊಹಿಸಬಹುದಾಗಿದೆ. ಹಿರಿಯ ನಟಿ ಶ್ರುತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರುತಿ ವಿಲನ್ ಆಗಿರುವ ಸಾಧ್ಯತೆ ಇದೆ. ಇನ್ನು ನಟಿ ಭಾವನಾ ಸಹ ಮುದ್ದಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಗಟ್ಟಿಗಿತ್ತಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.
'ಭಜರಂಗಿ 2' ಸಿನಿಮಾವನ್ನು ಹರ್ಷ ನಿರ್ದೇಶನ ಮಾಡಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಣ್ಣನ ಜೊತೆಗೆ, ಭಾವನಾ, ಶ್ರುತಿ, ಸೌರವ್ ಲೋಕೇಶ್, ಶಿವರಾಜ್ ಕೆ.ಆರ್.ಪೇಟೆ, ರಮೇಶ್ ಪಂಡಿತ್ ಇನ್ನೂ ಹಲವರಿದ್ದಾರೆ. ಸಿನಿಮಾವು ಅಕ್ಟೋಬರ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











